ಸಾರಾಂಶ
ಬಂಟ್ವಾಳ: ಗುರುವಾರ ರಾತ್ರಿ ಸ್ನೇಹಿತರ ಜೊತೆ ನೇತ್ರಾವತಿ ನದಿಗೆ ಮೀನು ಹಿಡಿಯಲು ಹೋಗಿ ನೀರುಪಾಲಾಗಿದ್ದ ವ್ಯಕ್ತಿಯ ಮೃತದೇಹ ಇಂದು ಪತ್ತೆಯಾಗಿದೆ.ಮೃತರನ್ನು ಮೈಕಲ್(50) ಎಂದು ಗುರುತಿಸಲಾಗಿದೆ. ಮಂಗಳೂರಿನ ಸುರತ್ಕಲ್ ನಿವಾಸಿಯಾಗಿರುವ ಮೈಕಲ್ ಸರಪಾಡಿ ಸಮೀಪದ ಮಾವಿನ ಕಟ್ಟೆ ಎಂಬಲ್ಲಿನ ಸಂಬಂಧಿಕರ ಮನೆಗೆ ಬಂದಿದ್ದವರು. ಗುರುವಾರ ಸಂಜೆ ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕು ಗಡಿಯಲ್ಲಿನ ನೇತ್ರಾವತಿ ನದಿಯ ಹಿನ್ನೀರು ತುಂಬುವ ಬೆಳ್ತಂಗಡಿ ತಾಲೂಕಿಗೆ ಸೇರಿದ ತೆಕ್ಕಾರು ಗ್ರಾಮದ ಸೇತುವೆಯಲ್ಲಿ ಮೀನು ಹಿಡಿಯಲು ಗಾಳ ಹಾಕಿದ್ದರು. ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ತುಂಬಿ ಹರಿಯುವ ನೀರಿನಲ್ಲಿ ಬಿದ್ದು ಕೊಚ್ಚಿ ಹೋಗಿದ್ದರು. ಭಾರೀ ಮಳೆಯಿಂದ ನದಿ ಉಕ್ಕಿ ಹರಿಯುತ್ತಿದ್ದು, ದೋಣಿಯ ಮೂಲಕ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ. ನಂತರ ಬಂಟ್ವಾಳ ಅಗ್ನಿಶಾಮಕ ದಳದವರು ಆಗಮಿಸಿ ಹುಡುಕಾಟ ನಡೆಸಿದರೂ ನೀರಿನ ಹರಿವು ಹೆಚ್ಚಾಗಿದ್ದರಿಂದ ಹಾಗೂ ಕತ್ತಲಾಗಿದ್ದರಿಂದ ಕಾರ್ಯಾಚರಣೆಗೆ ತೊಂದರೆಯಾಗಿತ್ತು. ಹಾಗಾಗಿ ಶುಕ್ರವಾರ ಬೆಳಗ್ಗೆ ಶೋಧಕಾರ್ಯ ನಡೆಸಲಾಗಿದ್ದು, ಮೈಕಲ್ ಮೃತದೇಹ ಪತ್ತೆಯಾಗಿದೆ. ಬಂಟ್ವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.