ಮೌನೇಶ ವಿಶ್ವಕರ್ಮ ಬಂಟ್ವಾಳ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ನಿರಂತರ ಪ್ರೋತ್ಸಾಹ ನೀಡುತ್ತಿದೆಯಾದರೂ, ಒಟ್ಟು ನಿರ್ವಹಣೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿಯ ಪಾತ್ರವೂ ಮಹತ್ವದ್ದು. ತಾಲೂಕಿನ ಗ್ರಾಮೀಣ ಪ್ರದೇಶದ ಶಾಲೆಯ ಶಾಲಾಭಿವೃದ್ಧಿ ಸಮಿತಿಯೊಂದು ತನ್ನ ಇಚ್ಛಾಶಕ್ತಿಯ ಕ್ರಿಯಾಶೀಲತೆಗೆ ಜಿಲ್ಲಾಮಟ್ಟದ "ಅತ್ಯುತ್ತಮ ಎಸ್ ಡಿಎಂಸಿ " ಎಂಬ ಗೌರವಕ್ಕೆ ಪಾತ್ರವಾದ ಯಶೋಗಾಥೆಯಿದು.
ಮಾಣಿಲ ಗ್ರಾಮದ ಕಾಮಜಲು ಹಿರಿಯ ಪ್ರಾಥಮಿಕ ಶಾಲೆಯ ಸುಂದರ ಕುಲಾಲ್ ಅಧ್ಯಕ್ಷರಾಗಿರುವ ಶಾಲಾಭಿವೃದ್ಧಿ ಸಮಿತಿ ಸರ್ವ ಸದಸ್ಯರ ಸಹಕಾರದೊಂದಿಗೆ ಈ ಗೌರವಕ್ಕೆ ಪಾತ್ರವಾಗಿದ್ದು, ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ₹75,000 ನಗದು ಬಹುಮಾನ ಹಾಗೂ ಪುಷ್ಠಿ ಗೌರವವನ್ನು ಪಡೆದುಕೊಂಡಿದೆ.ಸಮಗ್ರ ಸಮೀಕ್ಷೆಯಲ್ಲಿ ಮೆರೆದ ಸಾಧನೆಶಾಲಾ ನಿರ್ವಹಣೆ ಮತ್ತು ಶೈಕ್ಷಣಿಕ ಚಟುವಟಿಕೆಗಳ ಆಧಾರದ ಮೇಲೆ ಶಾಲಾ ಶಿಕ್ಷಣ ಇಲಾಖೆ ರಾಜ್ಯಾದ್ಯಂತ ಸಮೀಕ್ಷೆ ನಡೆಸಿತ್ತು. ವಿದ್ಯಾವಾಹಿನಿ ಪೋರ್ಟಲ್‌ನಲ್ಲಿ ಪ್ರಸ್ತಾವನೆ ಸಲ್ಲಿಸಿದ್ದ ಬಂಟ್ವಾಳ ತಾಲೂಕಿನ ಎಲ್ಲಾ ಕಿರಿಯ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪೈಕಿ ಪ್ರಥಮ ಹಂತದಲ್ಲಿ 18 ಶಾಲೆಗಳು ಆಯ್ಕೆಯಾದವು.ಕ್ಷೇತ್ರ ಶಿಕ್ಷಣಾಧಿಕಾರಿಯವರ ನೇತೃತ್ವದಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರು, ಶಿಕ್ಷಣ ಸಂಯೋಜಕರು ಹಾಗೂ ಸಿಆರ್‌ಪಿಗಳು ಪರಿಶೀಲನೆ ನಡೆಸಿದ್ದು, ನಂತರದ ಹಂತದಲ್ಲಿ ಸಮೂಹ ಸಂಪನ್ಮೂಲ ಸಮನ್ವಯಾಧಿಕಾರಿಗಳ ತಂಡವು ಸಮಗ್ರ ಸಮೀಕ್ಷೆ ಕೈಗೊಂಡಿತು. ಅಂತಿಮವಾಗಿ 9 ಶಾಲೆಗಳು ಜಿಲ್ಲಾ ಹಂತಕ್ಕೆ ಆಯ್ಕೆಯಾಗಿ, ಜಿಲ್ಲಾ ಉಪ ನಿರ್ದೇಶಕರು (ಅಭಿವೃದ್ಧಿ), ಡಯಟ್ ಪ್ರಾಂಶುಪಾಲರು ಹಾಗೂ ಸಮಗ್ರ ಶಿಕ್ಷಣ ಕರ್ನಾಟಕದ ಜಿಲ್ಲಾ ಸಹಾಯಕ ಯೋಜನಾ ಸಮನ್ವಯಾಧಿಕಾರಿಗಳ ತಂಡವು ವಿಸ್ತೃತ ಪರಿಶೀಲನೆ ನಡೆಸಿತು. ಈ ಎಲ್ಲಾ ಹಂತಗಳಲ್ಲೂ ಕಾಮಜಲು ಹಿರಿಯ ಪ್ರಾಥಮಿಕ ಶಾಲೆ ಅತ್ಯುತ್ತಮ ನಿರ್ವಹಣೆ ಮತ್ತು ಕಾರ್ಯಕ್ಷಮತೆಯಿಂದ ಗಮನ ಸೆಳೆದು, ಜಿಲ್ಲೆಯ ಮಟ್ಟದಲ್ಲಿ ಶ್ರೇಷ್ಠ ಸ್ಥಾನ ಪಡೆದಿದೆ.ತೀರಾ ಗ್ರಾಮೀಣ ಪ್ರದೇಶದಲ್ಲಿರುವ ಈ ಶಾಲೆಯಲ್ಲಿ ಸಮುದಾಯದ ಸಹಭಾಗಿತ್ವದಲ್ಲಿ ಹಲವು ಅಭಿವೃದ್ಧಿಕಾರ್ಯಗಳನ್ನು ನಡೆಸಲಾಗಿದೆ.
ಶ್ರೀಕ್ಷೇತ್ರ ಕುಕ್ಕಾಜೆಯ ಧರ್ನದರ್ಶಿಗಳಾದ ಶ್ರೀಕೃಷ್ಣ ಗುರೂಜಿಯವರು 5 ಲಕ್ಷ ರೂ ವೆಚ್ಚದಲ್ಲಿ ತರಗತಿ ಕೊಠಡಿ ಒದಗಿಸಿದ್ದರೆ, 3 ಲಕ್ಷ ರೂ ವೆಚ್ಚದಲ್ಲಿ ಶಾಲಾ ಅಂಗಳಕ್ಕೆ ಇಂಟರ್ ಲಾಕ್ ಅಳವಡಿಕೆ, ಕಂಪ್ಯೂಟರ್ ಕೊಠಡಿ, ಆಕರ್ಷಕ ನಲಿಕಲಿ ಕೊಠಡಿ, ಬ್ಯಾಂಡ್ ಸೆಟ್, ಮೈಕ್ ಸೆಟ್, ಸಿಸಿ ಕ್ಯಾಮೆರಾ , ಜಾರುಬಂಡಿ ಮೊದಲಾದ ವ್ಯವಸ್ಥೆಗಳು ಮೂಲಭೂತ ಅಗತ್ಯಗಳನ್ನು ಈಡೇರಿಸಿದೆ. ಜೊತೆಗೆ ಶಾಲೆಯಲ್ಲಿ ನಿರ್ಮಿಸಲಾದ ತರಕಾರಿ ತೋಟ, ಅತ್ಯುತ್ತಮ ಕೈತೋಟವಾಗಿ ಎಲ್ಲರ ಗಮನ ಸೆಳೆಯುತ್ತಿದೆ. ಮಕ್ಕಳಲ್ಲಿ ಪರಿಸರ ಜಾಗೃತಿ ಮತ್ತು ಸ್ವಾವಲಂಬನೆ ಬೆಳೆಸುವ ಉದ್ದೇಶದಿಂದ ರೂಪಿಸಲಾದ ಈ ತೋಟ ಶಾಲೆಯ ವಿಶೇಷ ಆಕರ್ಷಣೆಯೂ ಹೌದು, ಕೈ ತೋಟದಲ್ಲಿ ಬೆಳೆಯುವ ತರಕಾರಿಗಳು ಮಕ್ಕಳ ಬಿಸಿಯೂಟಕ್ಕೆ ಬಳಕೆಯಾಗುತ್ತಿದ್ದು, ಪೌಷ್ಠಿಕತೆಗೆ ಸಹಕಾರಿಯಾಗಿದೆ.ಸ್ವಚ್ಛತೆ, ಶಿಸ್ತು, ವ್ಯವಸ್ಥಿತ ತರಗತಿ ಕೊಠಡಿಗಳು ಹಾಗೂ ಶೈಕ್ಷಣಿಕ ವಾತಾವರಣವು ಶಾಲೆಯನ್ನು ಜಿಲ್ಲಾ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ.ಎಸ್ ಡಿಎಂಸಿ ಯ ಜೊತೆ ಶಾಲಾ ಶಿಕ್ಷಕವೃಂದವೂ ಅತ್ಯುತ್ತಮ ಸಹಕಾರ ನೀಡುತ್ತಾ ಬಂದಿದೆ. ಪ್ರಭಾರ ಮುಖ್ಯಶಿಕ್ಷಕಿಯಾಗಿಶ್ರೀಮತಿ ಸುಧಾ ಸಂದೇಶ್, ಶಿಕ್ಷಕಿಯಾಗಿ ಪ್ರಭಾರ ಶ್ರೀಮತಿ ಸರಿತಾ ನಾಯ್ಕ , ಅತಿಥಿ ಶಿಕ್ಷಕರಾಗಿ ಕು.ಸುಶ್ಮಿತಾ ಕೆ , ಮಾಲತಿ ಎನ್ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲಾ ಶೈಕ್ಷಣಿಕ ಪ್ರಗತಿ ಮುಂದಿನ ವರ್ಷಗಳಲ್ಲಿ ಶಾಲಾಮಕ್ಕಳ ಸಂಖ್ಯೆ ಹೆಚ್ಚಲು ಕಾರಣವಾಗಬಹುದು ಎಂಬ ನಿರೀಕ್ಷೆಯಲ್ಲಿದೆ ಇಲ್ಲಿ ಶಿಕ್ಷಕವೃಂದ.ಶಾಲಾ ಎಸ್ ಡಿ ಎಂಸಿ ಅಧ್ಯಕ್ಷರಾಗಿ ಸುಂದರ್ ಕುಲಾಲ್ ಪಿ ಉಪಾಧ್ಯಕ್ಷರಾಗಿ ಮೋಹನ್ ಕೆ , ಸದಸ್ಯರಾಗಿ ಭಾರತಿ ಎಸ್ ಎನ್ , ಸರೋಜಿನಿ, ಶೀನಪ್ಪ , ಗೀತಾ ಕೆ, ರುಕ್ಯ, ಪ್ರಕಾಶ ಕೆ, ಲತಾ ಪಿ., ಶ್ರುತಿ ಕೆ., ಅನಿತಾ, ಶಾರದಾ, ಚಿತ್ರಲತಾ, ರತ್ನಾವತಿ, ಶೋಭಾ, ಸುನೀತಾ, ಜಯಂತಿ, ಪ್ರೇಮ, ರವರು ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ವಿಷ್ಣು ಭಟ್ ಕೊಮ್ಮುಂಜೆ, ಸಹಶಿಕ್ಷಕಿ ಸರಿತಾ ನಾಯ್ಕ, ವಿದ್ಯಾರ್ಥಿ ನಾಯಕ ಅನ್ವಿತ್ ರವರು, ನಾಮ ನಿರ್ದೇಶಿತ ಸದಸ್ಯರಾಗಿ ಎಸ್ ಡಿಎಂಸಿಯ ಬಲವರ್ಧನೆಗೆ ಸಹಕಾರ ನೀಡುತ್ತಾ ಬಂದಿದ್ದಾರೆ. ಜೊತೆಗೆ ಪದನಿಮಿತ್ತ ಸದಸ್ಯರಾಗಿ ಪ್ರಭಾರ ಮುಖ್ಯ ಶಿಕ್ಷಕಿ ಸುಧಾ ಕುಮಾರಿ ಕೆ., ಆರೋಗ್ಯ ಕಾರ್ಯಕರ್ತೆ ಅಮಿತಾ ಹಾಗೂ ಅಂಗನವಾಡಿ ಕಾರ್ಯಕರ್ತೆ ರೇವತಿ ಸಹಕಾರ ನೀಡುತ್ತಿದ್ದಾರೆ.
ಈ ಗೌರವಕ್ಕೆ ಕಾರಣವಾದ ಪ್ರಮುಖ ಅಂಶಗಳು..> ಶಾಲೆಯ ಬೆಳವಣಿಗೆಯಲ್ಲಿ ಎಸ್‌ಡಿಎಂಸಿಯ ಸಕ್ರಿಯ ಕೊಡುಗೆ>ಮುಖ್ಯ ಶಿಕ್ಷಕರ ಹಾಗೂ ಶಿಕ್ಷಕರ ಕಾರ್ಯಕ್ಷಮತೆ>ಮಕ್ಕಳ ಶೈಕ್ಷಣಿಕ ಪ್ರಗತಿ>ಅಡುಗೆ ಸಿಬ್ಬಂದಿಗಳ ಶಿಸ್ತಿನ ಸೇವೆ>ಪೋಷಕರ ಪಾಲ್ಗೊಳ್ಳುವಿಕೆ>ಸಮುದಾಯದ ಸಹಕಾರ>ಹಿರಿಯ ವಿದ್ಯಾರ್ಥಿಗಳ ನೆರವು>ಸ್ಥಳೀಯ ಸಂಘ-ಸಂಸ್ಥೆಗಳ ಬೆಂಬಲ