ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ
ತಾಲೂಕಿನೆಲ್ಲೆಡೆ ಕಳೆದ 24 ಗಂಟೆಯಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೇತ್ರಾವತಿ ನದಿ ಅಪಾಯಮಟ್ಟವನ್ನು ಮೀರಿ 10 ಮೀಟರ್ ಎತ್ತರದಲ್ಲಿ ಹರಿಯುತ್ತಿದ್ದು, ನದಿಪಾತ್ರದ ಹಲವು ಗ್ರಾಮಗಳಿಗೆ ನೀರು ಆವರಿಸಿದೆ.ಗೂಡಿನಬಳಿ, ಆಲಡ್ಕ, ಜಕ್ರಿಬೆಟ್ಟು, ಬಸ್ತಿಪಡ್ಪು ಸಹಿತ ಹಲವೆಡೆಗಳಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ತಾಲೂಕಿನ ನದಿ ತೀರದ ಸಾಕಷ್ಟು ಮನೆಗಳು ಮುಳುಗಡೆಯಾಗಿವೆ. ನಾವೂರ ಗ್ರಾಮದ ಮೈಂದಾಳ ಎಂಬಲ್ಲಿ ಸುಮಾರು 8 ಮನೆಗಳಿಗೆ ನೀರು ನುಗ್ಗಿದ್ದು, ಗುಡ್ಡಯಂಗಡಿಯಲ್ಲಿ 5 ಹಾಗೂ ಆಲಡ್ಕದಲ್ಲಿ 15ಕ್ಕೂ ಅಧಿಕಮನೆಗಳು ಮುಳುಗಡೆಯಾಗಿವೆ. ಪಾಣೆಮಂಗಳೂರು, ಬಂಟ್ವಾಳ, ನಾವೂರು, ಸರಪಾಡಿ, ಮಣಿನಾಲ್ಕೂರು ಗ್ರಾಮಗಳಲ್ಲಿ ಕೃಷಿ ತೋಟಗಳು, ಗದ್ದೆಗಳು ಜಲಾವೃತಗೊಂಡಿವೆ.
ಬಂಟ್ವಾಳ- ಜಕ್ರಿಬೆಟ್ಟು ರಸ್ತೆಯ ಕೋಟೆಕಣಿ, ಬಿ.ಸಿ. ರೋಡಿನ ಬಸ್ತಿಪಡ್ಪು, ಆಲಡ್ಕ ಪ್ರದೇಶ ಮೊದಲಾದ ಪ್ರದೇಶದಲ್ಲಿ ರಸ್ತೆಗೆ ನೀರು ಬಿದ್ದು ಸಂಚಾರ ಕಡಿತಗೊಂಡಿದೆ. ಗುಡ್ಡಕುಸಿತ: ತಾಲೂಕಿನ ಹಲವು ಕಡೆಗಳಲ್ಲಿ ಗುಡ್ಡ ಕುಸಿತದ ಘಟನೆಗಳು ನಡೆದಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ವಿಟ್ಲ ಕಲ್ಲಡ್ಕದ ಮುಖ್ಯ ರಸ್ತೆಯಲ್ಲಿ ಗುಡ್ಡಕುಸಿತಕ್ಕೆ ಮಣ್ಣು ಜರಿದು ಬಿದ್ದಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ವಿದ್ಯುತ್ ಕಂಬ ಸಹಿತ ವಿದ್ಯುತ್ ತಂತಿ ರಸ್ತೆಗೆ ಬಿದ್ದಿದ್ದು, ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.ರಸ್ತೆ ಬದಿಯ ಗುಡ್ಡ ಜರಿತದಿಂದ ಗುಡ್ಡದಲ್ಲಿದ್ದ ಬಂಡೆಕಲ್ಲೊಂದು ರಸ್ತೆ ಕಡೆಗೆ ಬಾಗಿ ನಿಂತಿದ್ದು, ಈ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಅಮ್ಟಾಡಿ ಗ್ರಾಮದ ದೇವಿನಗರ ರುದ್ರಭೂಮಿ ಬಳಿ ಮರಬಿದ್ದು, ಗುಡ್ಡಜರಿದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಬಂಟ್ವಾಳ ಕಸ್ಬಾ ಗ್ರಾಮದ ಅಗ್ರಾರ್ - ಜಕ್ರಿಬೆಟ್ಟು ರಸ್ತೆಯಲ್ಲಿ ಗುಡ್ಡ ಕುಸಿತ ಉಂಟಾಗಿದೆ.
ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕಲ್ಲಡ್ಕ ಹೆದ್ದಾರಿಯಲ್ಲಿಯೂ ತೀವ್ರ ಮಳೆಯಿಂದಾಗಿ ಜಲಪ್ರವಾಹ ಉಂಟಾಗಿತ್ತು. ಇದರಿಂದ ರಸ್ತೆ ಸಂಚಾರಕ್ಕೆ ತೊಡಕುಂಟಾಯಿತು.ಅಪಾಯಕಾರಿ ಮನೆಗಳ ನಿವಾಸಿಗಳ ಸ್ಥಳಾಂತರಕ್ಕೆ ಶಾಸಕ ಸೂಚನೆ: ಕಳೆದ ಕೆಲವು ದಿನಗಳಿಂದ ಅತಿಯಾಗಿ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ, ಅಂತಹ ಅಪಾಯಕಾರಿ ಮನೆಗಳನ್ನು ಹಾಗೂ ಸುರಕ್ಷಿತವಲ್ಲದ ಮತ್ತು ನೀರು ನುಗ್ಗಿ ಅಪಾಯವಿರುವ ಮನೆಗಳ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವಂತೆ ಶಾಸಕ ರಾಜೇಶ್ ನಾಯ್ಕ್ ಅವರು, ತಾಲೂಕಿನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಳೆಯ ತೀವ್ರತೆಯ ನಡುವೆಯೂ ತಾಲೂಕಿನ ಹಲವು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಅವರು, ಸಂತ್ರಸ್ತರಿಗೆ ಅಗತ್ಯ ವಿರುವ ಎಲ್ಲ ವ್ಯವಸ್ಥೆ ಗಳನ್ನು ತಾಲೂಕು ಆಡಳಿತದ ಮೂಲಕ ಮಾಡಲು ತಿಳಿಸಿದ್ದೇನೆ. ಜಲಾವೃತಗೊಂಡಗಳ ಮನೆಗಳ ಕೆಸರನ್ನು ತೆಗೆಯಲು ತಾಲೂಕು ಆಡಳಿತ ಸೂಕ್ತವಾದ ವ್ಯವಸ್ಥೆ ಮಾಡುವಂತೆ ತಹಸೀಲ್ದಾರ್‌ಗೆ ಸೂಚನೆ ನೀಡಿರುವುದಾಗಿ ಶಾಸಕರು ಮಾಧ್ಯಮಗಳಿಗೆ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ತಹಸೀಲ್ದಾರ್ ಅರ್ಚನಾ ಭಟ್, ಕಂದಾಯ ನಿರೀಕ್ಷಕ ಜನಾರ್ದನ, ಗ್ರಾಮಾಂತರ ಎಸ್ಐ ಹರೀಶ್, ಜಿಲ್ಲಾ ಕಾರ್ಯದರ್ಶಿ ದೇವಪ್ಪ ಪೂಜಾರಿ, ಬಿಜೆಪಿ ಪ್ರಮುಖರಾದ ಎ. ಗೋವಿಂದ ಪ್ರಭು, ನಂದರಾಮ ರೈ, ಗಣೇಶ್ ರೈ ಮಾಣಿ, ಜನಾರ್ದನ, ಸದಾನಂದ ನಾವೂರ, ಧನಂಜಯ ಶೆಟ್ಟಿ ಸರಪಾಡಿ, ಅಶೋಕ್ ಶೆಟ್ಟಿ ಸರಪಾಡಿ, ದೇಜಪ್ಪ ಬಾಚಕೆರೆ, ಶಾಂತಪ್ಪ ಪೂಜಾರಿ ಹಟ್ಟದಡ್ಕ, ಚಂದ್ರಹಾಸ ಶೆಟ್ಟಿ ಹೊಳ್ಳರಗುತ್ತು, ಆನಂದ ಶೆಟ್ಟಿ ಬಾಚಕೆರೆ ಮತ್ತಿತರ ಉಪಸ್ಥಿತರಿದ್ದರು.
ನೆರೆಪೀಡಿತ ಪ್ರದೇಶಗಳಿಗೆ ಮಾಜಿ ಸಚಿವ ರಮಾನಾಥ ರೈ ಭೇಟಿ: ಬಂಟ್ವಾಳ ತಾಲೂಕಿನ ವಿವಿಧ ನೆರೆ ಪೀಡಿತ ಪ್ರದೇಶಗಳಾದ ಬಂಟ್ವಾಳ ಕೆಳಗಿನ ಪೇಟೆ, ಬಡ್ಡಕಟ್ಟೆ,ದರ್ಬೆ, ಕಾರಂಬಡೆ ಮೊದಲಾದ ಪ್ರದೇಶಗಳಿಗೆ ಮಾಜಿ ಸಚಿವ ಬಿ.ರಮಾನಾಥ ರೈ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಜಿಲ್ಲಾಧಿಕಾರಿ, ತಹಸೀಲ್ದಾರ್, ಪೊಲೀಸ್ ವರಿಷ್ಠಾಧಿಕಾರಿ ಅವರೊಂದಿಗೆ ದೊರವಾಣಿ ಕರೆಯ ಮೂಲಕ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಿ, ಸ್ಪಂದನ ನೀಡುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಬಂಟ್ವಾಳ ಬೂಡ ಅಧ್ಯಕ್ಷರಾದ ಬೇಬಿ ಕುಂದರ್,ಪುರಸಭಾ ಸದಸ್ಯರಾದ ವಾಸು ಪೂಜಾರಿ,ರಿಯಾಜ್ ಬಂಟ್ವಾಳ,ಮನೋಹರ ನೇರಂಬೋಳು, ಜಗದೀಶ್ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.