ವಿಶೇಷ ವರದಿ

ಕನ್ನಡಪ್ರಭವಾರ್ತೆ ಬಂಟ್ವಾಳ

ಒಂದೆಡೆಯಲ್ಲಿ ಜಿಲ್ಲೆಯ ರೈಲ್ವೇ ವ್ಯವಸ್ಥೆ ದಿನೇ ದಿನೇ ಆಧುನೀಕರಣದತ್ತ ಮುಖಮಾಡುತ್ತಿದ್ದರೆ, ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ಮೊಡಂಕಾಪು ಬಳಿಯ ರೈಲ್ವೇ ಮೇಲ್ಸೇತುವೆ ಮಾತ್ರ ಓಬಿರಾಯನ ಕಾಲದ ಸ್ಥಿತಿಯಲ್ಲೇ ಉಳಿದಿದೆ. ಜಿಲ್ಲೆಯ ಇತಿಹಾಸ ಪ್ರಸಿದ್ಧ ಕ್ಷೇತ್ರಗಳಿಗೆ ಹಾಗೂ ವಿಮಾನ‌ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಈ ಪ್ರಮುಖ ರಸ್ತೆಯ ಈ ರೈಲ್ವೇ ಮೇಲ್ಸೇತುವೆ, ಹಳೆಯ ವಿನ್ಯಾಸದಲ್ಲಿರುವುದು ವಿಪರ್ಯಾಸವೇ ಸರಿ.

ಈ ಸೇತುವೆಯ ಅಡಿಭಾಗದಲ್ಲಿ ಕಲ್ಲಿನಿಂದ ನಿರ್ಮಿಸಲಾದ ಬೃಹತ್ ಪಿಲ್ಲರ್ ಇದ್ದು, ರಸ್ತೆಯೇ ಎರಡು ಭಾಗಗಳಾಗಿ ವಿಭಜನೆಯಾಗಿದೆ. ಇದರಿಂದ ಒಂದೇ ಸಮಯದಲ್ಲಿ ಎದುರುಮುಖವಾಗಿ ವಾಹನಗಳು ಬಂದಾಗ ಚಾಲಕರು ಅಪಾಯವನ್ನು ಎದುರಿಸುತ್ತಾ ಸಾಗಬೇಕಾದ ಪರಿಸ್ಥಿತಿ ಉಂಟಾಗಿದೆ. ಮೇಲ್ಭಾಗದಲ್ಲಿ ಪ್ಯಾಸೆಂಜರ್ ಮತ್ತು ಸರಕು ರೈಲುಗಳು ನಿರಂತರವಾಗಿ ಸಂಚರಿಸುತ್ತಿದ್ದರೂ, ಕೆಳಭಾಗದ ರಸ್ತೆ ಮಾತ್ರ ಕಾಲಕ್ಕೆ ಅನುಗುಣವಾಗಿ ಸುಧಾರಣೆ ಕಂಡಿಲ್ಲ.

ಪೊಳಲಿ, ಕಟೀಲು, ಬಜಪೆ ವಿಮಾನ ನಿಲ್ದಾಣ, ಎಂಆರ್‌ಪಿಎಲ್ ಸೇರಿದಂತೆ ಪ್ರಮುಖ ಸ್ಥಳಗಳಿಗೆ ಹೋಗುವ ಮುಖ್ಯ ಸಂಪರ್ಕ ಮಾರ್ಗವೇ ಇದಾಗಿದ್ದು, ಪ್ರತಿದಿನ ಸಾವಿರಾರು ವಾಹನಗಳು ಇಲ್ಲಿ ಸಂಚರಿಸುತ್ತಿದ್ದರೂ, ಸುರಕ್ಷತಾ ಸೌಲಭ್ಯಗಳ ಕೊರತೆ ಇಲ್ಲಿದೆ.ಅಪಾಯಕಾರಿ ಕಮಾನುಗಳು: ಮೇಲ್ಸೇತುವೆಗಳ ಸುರಕ್ಷತೆ ದೃಷ್ಟಿಯಿಂದ ಘನ ವಾಹನಗಳ ನಿಯಂತ್ರಣಕ್ಕಾಗಿ ಅಳವಡಿಸಿದ ಕಬ್ಬಿಣದ ಕಮಾನುಗಳು ಈಗ ಅಪಘಾತಗಳಿಗೆ ಕಾರಣವಾಗುತ್ತಿವೆ. ಯಾವುದೇ ಎಚ್ಚರಿಕೆ ಫಲಕಗಳಿಲ್ಲದೆ, ಪ್ರತಿಬಿಂಬಿಸುವ ಬಣ್ಣಗಳಿಲ್ಲದೆ ಇರುವುದರಿಂದ, ವಿಶೇಷವಾಗಿ ರಾತ್ರಿ ಮತ್ತು ಮಳೆಗಾಲದಲ್ಲಿ ಅವು ಚಾಲಕರಿಗೆ ಕಾಣಿಸಿಕೊಳ್ಳುವುದೇ ಕಷ್ಟ. ಇದರಿಂದ ಕಳೆದ ಕೆಲ ತಿಂಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಕೆಲ ಸಂದರ್ಭಗಳಲ್ಲಿ ಜೀವಹಾನಿಯೂ ಸಂಭವಿಸಿದೆ.ಭದ್ರತಾ ಕ್ರಮಗಳ ಕೊರತೆ: ಸೇತುವೆ ಅಡಿಭಾಗದಲ್ಲಿ ರೈಲ್ವೇ ಸಿಬ್ಬಂದಿ ನಿಯೋಜನೆಯಿಲ್ಲದೇ ಇರುವುದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಸಂಚಾರ ನಿಯಂತ್ರಣದ ಅಭಾವ ಮತ್ತು ಮೂಲಭೂತ ಸುರಕ್ಷತಾ ವ್ಯವಸ್ಥೆಗಳ ಕೊರತೆ ಈ ಪ್ರದೇಶವನ್ನು ‘ಅಪಘಾತಗಳ ಹಾಟ್‌ಸ್ಪಾಟ್’ ಆಗಿ ಮಾರ್ಪಟ್ಟಿದೆ.


ಅಭಿವೃದ್ಧಿಯೇ ಪರಿಹಾರ: ಈ ಸಮಸ್ಯೆಗೆ ಶಾಶ್ವತ ಪರಿಹಾರವೆಂದರೆ ಸೇತುವೆಯ ಸಮಗ್ರ ಅಭಿವೃದ್ಧಿ. ಮಧ್ಯದಲ್ಲಿರುವ ಕಾಂಕ್ರೀಟ್ ಪಿಲ್ಲರ್ ತೆರವುಗೊಳಿಸಿ ರಸ್ತೆ ವಿಸ್ತರಣೆ ಮಾಡಿದರೆ ಮಾತ್ರ ಸುರಕ್ಷಿತ ಸಂಚಾರ ಸಾಧ್ಯ. ಜಿಲ್ಲೆಯ ಇತರ ಭಾಗಗಳಲ್ಲಿ ನಡೆದಿರುವಂತೆ, ಮೊಡಂಕಾಪು ಸೇತುವೆಯನ್ನೂ ತ್ವರಿತವಾಗಿ ಆಧುನೀಕರಣಗೊಳಿಸುವಂತೆ ಜನಪ್ರತಿನಿಧಿಗಳು ಒತ್ತಾಯಿಸಬೇಕಿದೆ.ಮೊಡಂಕಾಪು ಸೇತುವೆ ಹಳೆಯದಾಗಿದ್ದು, ಅದನ್ನು ಅಭಿವೃದ್ಧಿಪಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲೆಯ ಹಲವೆಡೆ ಸೇತುವೆಗಳು ಈಗಾಗಲೇ ಸುಧಾರಣೆಗೊಂಡಿವೆ. ಎಡಮಂಗಲ, ನರಿಮೊಗರು, ಬೆಳಂದೂರು, ಉಳ್ಳಾಲ ಸೇರಿದಂತೆ ಹಲವು ಕಡೆಗಳಲ್ಲಿ ಕಾಮಗಾರಿ ನಡೆದಿದೆ. ಮುಂದಿನ ದಿನಗಳಲ್ಲಿ ಮೊಡಂಕಾಪು ಸೇತುವೆಯೂ ಅಭಿವೃದ್ಧಿಯಾಗಲಿದೆ.

ಬ್ರಿಜೇಶ್ ಚೌಟ, ದ.ಕ. ಸಂಸದರು

ರೈಲ್ವೇ ಇಲಾಖೆ ಕೇಂದ್ರ ಸರ್ಕಾರದ ಅಧೀನದಲ್ಲಿದ್ದು, ಮಾರ್ಗಗಳ ನಿರ್ವಹಣೆ ಅವರ ಜವಾಬ್ದಾರಿ. ಹಳೆಯದಾದ ಮೊಡಂಕಾಪು ಸೇತುವೆ ಇನ್ನೂ ಅದೇ ಸ್ಥಿತಿಯಲ್ಲಿರುವುದು ವಿಷಾದಕರ. ನಿರಂತರ ರೈಲು ಸಂಚಾರ ಇರುವ ಈ ಭಾಗದಲ್ಲಿ ಸೇತುವೆಗಳ ಅಭಿವೃದ್ಧಿಯೂ ಅನಿವಾರ್ಯ.

ಬಿ. ರಮಾನಾಥ ರೈ, ಮಾಜಿ ಸಚಿವರು

ಪ್ರತಿದಿನ ಮೊಡಂಕಾಪು ಭಾಗದಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಇದನ್ನು ಗಮನಿಸುವವರು ಯಾರೂ ಇಲ್ಲ. ರೈಲ್ವೇ ಇಲಾಖೆಯ ನಿರ್ಲಕ್ಷ್ಯದಿಂದ ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಸದಾಶಿವ ಬಂಗೇರ, ಮಾಜಿ ಅಧ್ಯಕ್ಷರು, ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರ