ಸಾರಾಂಶ
ದಸರಾ ಹಬ್ಬವನ್ನು ನಾಡಹಬ್ಬವಾಗಿ ಆಚರಿಸುತ್ತೇವೆ. ಬೇರೆ ಧರ್ಮದವರನ್ನು ಉದ್ಘಾಟಕರನ್ನಾಗಿ ಆಹ್ವಾನಿಸಿದರೆ ಅವರಿಗೆ ಕುಂಕುಮ ಹಚ್ಚಿಕೊಂಡು ಬನ್ನಿ, ನೀವು ಹಿಂದೂಗಳಾಗಿ ಎನ್ನುವುದು ತರವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕನ್ನಡಪ್ರಭ ವಾರ್ತೆ ಮೈಸೂರು
ದಸರಾ ಹಬ್ಬವನ್ನು ನಾಡಹಬ್ಬವಾಗಿ ಆಚರಿಸುತ್ತೇವೆ. ಬೇರೆ ಧರ್ಮದವರನ್ನು ಉದ್ಘಾಟಕರನ್ನಾಗಿ ಆಹ್ವಾನಿಸಿದರೆ ಅವರಿಗೆ ಕುಂಕುಮ ಹಚ್ಚಿಕೊಂಡು ಬನ್ನಿ, ನೀವು ಹಿಂದೂಗಳಾಗಿ ಎನ್ನುವುದು ತರವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ, ಬಾನು ಮುಷ್ತಾಕ್ ಅವರು ಕುಂಕುಮ ಹಚ್ಚಿಕೊಂಡು ದಸರಾ ಉದ್ಘಾಟಸಲಿ ಎಂದು ಬಿಜೆಪಿಯವರು ಒತ್ತಾಯಿಸಿದ್ದಾರೆ. ಆದರೆ, ಬುಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಓರ್ವ ಮುಸ್ಲಿಂ ಮಹಿಳೆ. ಅವರು ಕುಂಕುಮ ಹಚ್ಚಿಕೊಳ್ಳುವುದು ಅವರ ಧರ್ಮದಲ್ಲಿಲ್ಲ. ಮುಸ್ಲಿಂ ಗುರುಗಳು, ‘ನಾನು ಮುಷ್ತಾಕ್ ಅವರ ವಿರುದ್ಧ ಫತ್ವಾ ಹೊರಡಿಸಿಲ್ಲ’ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದರು. ಹಿಂದೆ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರನ್ನು ಮಹಾರಾಜರು ಅಂಬಾರಿ ಮೇಲೆ ಕೂಡಿಸಿಕೊಂಡು ಮೆರವಣಿಗೆ ಮಾಡುತ್ತಿದ್ದರು. ಆಗ ಆರ್‌ಎಸ್‌ಎಸ್ ಹಾಗೂ ಬಿಜೆಪಿಯವರು ಎಲ್ಲಿ ಹೋಗಿದ್ದರು?. 2017ರಲ್ಲಿ ಕವಿ ನಿಸಾರ್ ಅಹಮದ್ ಅವರು ದಸರಾ ಉದ್ಘಾಟನೆ ಮಾಡಿದ್ದರು. ಆಗ ಇವರೆಲ್ಲ ಎಲ್ಲಿ ಹೋಗಿದ್ದರು?. ಬಾನು ಮುಷ್ತಾಕ್ ಅವರು ಕುಂಕುಮದ ಬಗ್ಗೆ ಮಾತನಾಡಿದ್ದಾರೆ ಎಂಬ ವಿಷಯ ನನಗೆ ಗೊತ್ತಿಲ್ಲ. ಅವರೊಬ್ಬ ಕನ್ನಡದ ಬರಹಗಾರ್ತಿ. ಕನ್ನಡದ ಮೇಲೆ ಅಭಿಮಾನವಿಲ್ಲದೆ ಇದ್ದರೆ, ಪ್ರೀತಿ ಇಲ್ಲದೆ ಇದ್ದರೆ, ಅವರು ಕನ್ನಡದಲ್ಲಿ ಬರೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.ಹಾಸನಕ್ಕೆ ತೆರಳಿ ಬಾನುಗೆ ದಸರಾ ಉದ್ಘಾಟಿಸಲು ಆಹ್ವಾನ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿ ಉದ್ಘಾಟಿಸಲಿರುವ ಪ್ರತಿಷ್ಠಿತ ಬುಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಅವರಿಗೆ ಮೈಸೂರು ಜಿಲ್ಲಾಡಳಿತವು ಬುಧವಾರ (ಸೆಪ್ಟೆಂಬರ್ 3) ಸಂಜೆ 4 ಗಂಟೆಗೆ ಅಧಿಕೃತ ಆಹ್ವಾನ ನೀಡಲಿದೆ. ಇದಕ್ಕಾಗಿ ಮೈಸೂರು ಜಿಲ್ಲಾಧಿಕಾರಿ ನೇತೃತ್ವದ ತಂಡವು ಹಾಸನಕ್ಕೆ ತೆರಳಲಿದೆ. ಹಾಸನದಲ್ಲಿ ವಾಸ ಇರುವ ಬಾನು ಮುಷ್ತಾಕ್ ಅವರನ್ನು ಅಧಿಕಾರಿಗಳ ತಂಡ ಭೇಟಿಯಾಗಿ ದಸರಾ ಮಹೋತ್ಸವದ ಉದ್ಘಾಟನೆಗೆ ಆಹ್ವಾನ ನೀಡಲಿದೆ. ಈ ಕುರಿತು ಜಿಲ್ಲಾಡಳಿತ ಅಧಿಕೃತ ಪ್ರಕಟಣೆ ಹೊರಡಿಸಿದೆ.