ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಬಾನು ಮುಷ್ತಾಕ್ ಅವರು ಪ್ರಶ್ನಿಸುವ ಮನೋಭಾವದವರು ಎಂದು ಸಾಹಿತಿ ವಸುಧೇಂದ್ರ ಬಣ್ಣಿಸಿದರು.ಕನ್ನಡ ಪುಸ್ತಕ ಪ್ರಾಧಿಕಾರವು ಮೈಸೂರು ದಸರಾ ಮಹೋತ್ಸವ ಅಂಗವಾಗಿ ಸ್ಕೌಟ್ ಮತ್ತು ಗೈಡ್ಸ್ ಮೈದಾನದಲ್ಲಿ ಏರ್ಪಡಿಸಿರುವ ಪುಸ್ತಕ ಮೇಳದಲ್ಲಿ ಬಾನು ಮುಷ್ತಾಕ್ ಅವರ ಬದುಕು ಬರೆಹ ಕುರಿತ ಚರ್ಚೆಯನ್ನು ಬಿ. ಶಿವಾನಂದ ರಚಿಸಿರುವ ಬುಕರ್ ಬಾನು ಕೃತಿಯನ್ನು ಹಣ ಕೊಟ್ಟು ಖರೀದಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಅನ್ಯ ಧರ್ಮ, ಅನ್ಯ ದೇಶ, ಅನ್ಯ ಭಾಷೆಯ ಬದಲು ತನ್ನ ಧರ್ಮದ ನ್ಯೂನತೆಗಳನ್ನು ಪ್ರಶ್ನಿಸಿದವರು. ಈ ರೀತಿಯ ಸ್ವವಿಮರ್ಶೆ ಸೃಜನಶೀಲ ಬರವಣಿಗೆ ಮೂಲಕ ಓದುಗರನ್ನು ತಲುಪುತ್ತದೆ ಎಂದರು.
ಈವರೆಗೆ ಎಲ್ಲಾ ಶಾಲಾ- ಕಾಲೇಜುಗಳಲ್ಲಿ ಪುರುಷರ ಪಟಗಳು ಇದ್ದವು. ಬಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿ ಅವರನ್ನು ಕನ್ನಡ ಸಾಹಿತ್ಯವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸುವ ಮೂಲಕ ಬುಕರ್ ಪ್ರಶಸ್ತಿ ಪಡೆದವರು. ಹೀಗಾಗಿ ಇನ್ನು ಮುಂದೆ ಮಹಿಳೆಯರ ಪಟಗಳು ರಾರಾಜಿಸಲಿವೆ ಎಂದರು.ಮಹಿಳೆಯರ ಸಾಹಿತ್ಯವನ್ನು ಅಡುಗೆ ಮನೆ ಸಾಹಿತ್ಯ ಎಂದು ಹೇಳಲಾಗುತ್ತಿತ್ತು. ಆದರೆ ಇವತ್ತು ಬಾನು ಮುಷ್ತಾಕ್ ಹಾಗೂ ದೀಪಾ ಭಾಸ್ತಿ ಅವರು ಬುಕರ್ ಪ್ರಶಸ್ತಿ ಪಡೆಯುವ ಮೂಲಕ ಕನ್ನಡಿಗರೆಲ್ಲಾ ಸಂಭ್ರಮಿಸುವಂತೆ ಮಾಡಿದ್ದಾರೆ ಎಂದು ಅವರು ಶ್ಲಾಘಿಸಿದರು.
''''''''''''''''ಅರಿವಂ ಪೊಸಯಿಸುವುದು ಧರ್ಮಂ, ಅಂತದರ ತಡೆಯುವುದು ಅಧರ್ಮಂ'''''''''''''''' ಎಂದು ಪಂಪ ಹೇಳಿದ್ದಾರೆ. ಧರ್ಮ ಬದಲಾಗಬೇಕು. ಧರ್ಮ ಧರ್ಮಕ್ಕೆ ಗೌರವ ಕೊಡೋಣ. ಆದರೆ ಧರ್ಮಾಂಧತೆಗೆ ಅಲ್ಲ. ''''''''''''''''ಹುಲಿಗೆ ಕಾಡೆ ರಕ್ಷೆ, ಕಾಡಿಗೆ ಹುಲಿಯೆ ರಕ್ಷೆ''''''''''''''''. ಹುಲಿ ಇದ್ದರೆ ಕಾಡು ಉಳಿಯುತ್ತದೆ. ಕಾಡು ನಾಶವಾಗಿ ಹುಲಿ ಹೊರಬಂದರೆ ಜನ ಕೊಲ್ಲುತ್ತಾರೆ ಎಂದು ಅವರು ಮಾರ್ಮಿಕವಾಗಿ ಹೇಳಿದರು.ದಸರಾ ಆಚರಣೆಗೆ ವಿಜಯನಗರ ಅರಸರು ಕಾರಣ. ಅದಾದ ನಂತರ ಮೈಸೂರು ಅರಸರು ದಸರಾ ಆಚರಿಸುತ್ತಾ ಬಂದವರು. ವಿಜಯನಗರ ಕಾಲದಲ್ಲಿ ದಸರಾ ಆಚರಣೆ ಎಂದರೆ ತೆರಿಗೆ ವಸೂಲಿಯಾಗಿತ್ತು. ಆದರೆ ಈಗ ರೈತರು ತೆರಿಗೆ ಕಟ್ಟುವ ಸಾಮರ್ಥ್ಯವೇ ಇಲ್ಲದಂತೆ ಮಾಡಿದ್ದಾರೆ ಎಂದು ಅವರು ವಿಷಾದಿಸಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮುಖ್ಯಅತಿಥಿಯಾಗಿದ್ದರು. ಪ್ರೀತಿ ನಾಗರಾಜ್, ಮಂಜುಳಾ ಕಿರುಗಾವಲು ಹಾಗೂ ಡಾ. ಸಿದ್ದರಾಮ ಹೊನ್ಕಲ್ ಚರ್ಚೆಯಲ್ಲಿ ಭಾಗವಹಿಸಿದ್ದರು. ಪ್ರಾಧಿಕಾರದ ಅಧ್ಯಕ್ಷ ಮಾನಸ ಅಧ್ಯಕ್ಷತೆ ವಹಿಸಿದ್ದರು,. ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್ ಸ್ವಾಗತಿಸಿದರು. ಬುಕರ್ ಬಾನು ಕೃತಿಯ ಲೇಖಕ ಬಿ. ಶಿವಾನಂದ, ಪುಸ್ತಕ ಮೇಳದ ಸಮನ್ವಯಾಧಿಕಾರಿಗಳಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಮೈವಿವಿ ಪ್ರಸಾರಾಂಗ ನಿರ್ದೇಶಕ ಪ್ರೊ.ಎಂ. ನಂಜಯ್ಯ ಹೊಂಗನೂರು, ಉಪ ಸಮಿತಿ ಸದಸ್ಯರಾದ ಎಂ. ಚಂದ್ರಶೇಖರ್, ಡಾ.ಎಂ. ಮಹೇಶ್ ಚಿಕ್ಕಲ್ಲೂರು, ಸುಚಿತ್ರಾ ಹೆಗಡೆ, ರಾಜಶೇಖರ ಕದಂಬ ಮೊದಲಾದವರು ಇದ್ದರು.