ಗಾಂಧೀಜಿಯವರು ನಡೆ- ನುಡಿಗಳು ಅವರು ನೀಡಿದ ಸಂದೇಶಗಳು, ಅವರ ತ್ಯಾಗಮಯ ಜೀವನ ಇಂದಿನ ಪೀಳಿಗಗೆ ಮಾದರಿಯಾಗಿದೆ.

ಹಳಿಯಾಳ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಸತ್ಯ, ಅಹಿಂಸೆ, ಸರಳತೆ ಮತ್ತ ಸೇವೆಯ ಸಂದೇಶಗಳು ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರಿ ಅವರ ಸರಳ ಜೀವನ, ಪ್ರಾಮಾಣಿಕತೆ ಮತ್ತು ದೇಶದ ಮೇಲಿನ ಅಚಲ ನಿಷ್ಠೆ ಇಂದಿಗೂ ದೇಶವಾಸಿಗಳಿಗೂ ಸ್ಫೂರ್ತಿಯ ಸೆಲೆಯಾಗಿವೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

ಶುಕ್ರವಾರ ಪಟ್ಟಣದಲ್ಲಿನ ಶಾಸಕರ ಕಾರ್ಯಾಲಯದಲ್ಲಿ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಗಾಂಧಿ ಜಯಂತಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರಿ ಅವರ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ದೇಶದ ಈ ಇಬ್ಬರು ಮಹಾನ್ ನಾಯಕರಿಗೆ ಗೌರವ ನಮನ ಸಲ್ಲಿಸಿ ಮಾತನಾಡಿದರು.

ಗಾಂಧೀಜಿಯವರು ನಡೆ- ನುಡಿಗಳು ಅವರು ನೀಡಿದ ಸಂದೇಶಗಳು, ಅವರ ತ್ಯಾಗಮಯ ಜೀವನ ಇಂದಿನ ಪೀಳಿಗಗೆ ಮಾದರಿಯಾಗಿದೆ. ಅದೇ ರೀತಿ ಮಾಜಿ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರಿಯವರು ನೀಡಿದ ಜೈ ಜವಾನ್, ಜೈ ಕಿಸಾನ್ ಎಂಬ ಘೋಷವಾಕ್ಯ ದೇಶದ ಭದ್ರತೆಗೆ ಶ್ರಮಿಸುವ ಸೈನಿಕರು ಹಾಗೂ ದೇಶದ ಬೆನ್ನೆಲುಬಾದ ರೈತರ ಮಹತ್ವವನ್ನು ಜಗತ್ತಿಗೆ ಸಾರಿದವು ಎಂದು ಸ್ಮರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ ವಹಿಸಿದ್ದರು. ಪಕ್ಷದ ವಕ್ತಾರ ಉಮೇಶ ಬೊಳಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಅಜರ್ ಬಸರಿಕಟ್ಟಿ, ಫಯಾಜ್ ಶೇಖ್, ಶಂಕರ ಬೆಳಗಾಂವಕರ, ಬಿ.ಡಿ. ಚೌಗಲೆ, ಸಂಬಾಜಿ ವಾಲೇಕರ, ಸತ್ಯಜಿತ ಗಿರಿ, ರವಿ ತೋರಣಗಟ್ಟಿ, ಮಾರುತಿ ಕಲಬಾವಿ, ವಿಷ್ಣು ಮಿಶಾಳೆ, ಶಿವಾಜಿ ಡಾಂಗೇ, ಎಚ್.ಪಿ. ಪರಶುರಾಮ, ಖಲೀದ ದುಸಗಿ, ಮಾಲಾ ಬೃಗಾಂಜಾ, ಸುವರ್ಣ ಮಾದರ ಹಾಗೂ ವಿವಿಧ ಘಟಕಗಳ ಅಧ್ಯಕ್ಷರು ಪದಾಧಿಕಾರಿಗಳು ಇದ್ದರು. ದೇಮಾಣಿ ಶಿರೋಜಿಯವರು ಕಾರ್ಯಕ್ರಮ ನಿರ್ವಹಿಸಿದರು.

ಸ್ವಚ್ಛತಾ ಆಂದೋಲನಕ್ಕೆ ತೆರೆ: ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆಯ ಸಿದ್ಧತೆಯ ಅಂಗವಾಗಿ ಹಳಿಯಾಳ ವಿಧಾನಸಭಾ ಕ್ಷೇತ್ರಾದ್ಯಂತ ಕಳೆದ ಏಳು ದಿನಗಳಿಂದ ಕೈಗೊಂಡ ಸ್ವಚ್ಛತಾ ಆಂದೋಲನವನ್ನು ಶುಕ್ರವಾರ ಪಟ್ಟಣದ ವಲ್ಲಭಬಾಯಿ ಉದ್ಯಾನವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಮಾಪ್ತಗೊಳಿಸಲಾಯಿತು.

ಸ್ವಚ್ಛತಾ ಆಂದೋಲನಕ್ಕೆ ತೆರೆ ಎಳೆದ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಶಾಸಕ ಆರ್.ವಿ. ದೇಶಪಾಂಡೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಳಿಯಾಳ ರೋಟರಿ ಕ್ಲಬಿನ್ ಅಧ್ಯಕ್ಷ ಕಮಲ ಸಿಕ್ವೇರಾ, ಪದಾಧಿಕಾರಿಗಳಾದ ಮಂಗಲಾ ಕಶೀಲಕರ, ವಕೀಲ ಸುರೇಖಾ ಗುನಗಾ, ಕರವೇ ಅಧ್ಯಕ್ಷ ಬಸವರಾಜ್ ಬೆಂಡಿಗೇರಿಮಠ, ಪಡ್ನೀಸ್, ಜಿ.ಡಿ., ಗಂಗಾಧರ, ಪುರಸಭೆಯ ಸಿಬ್ಬಂದಿ ಇದ್ದರು.

ಸ್ವಚ್ಛತಾ ಆಂದೋಲನದ ಅಂಗವಾಗಿ ತಾಲೂಕಾಡಳಿತ ಸೌಧದಲ್ಲಿ ಆಯೋಜಿಸಿದ ಶುಚಿತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಿದ ದೇಶಪಾಂಡೆಯವರು, ತಾಲೂಕಾಡಳಿತದ ಸಿಬ್ಬಂದಿ ಕೈಗೊಂಡಿರುವ ಆವರಣದ ಗೋಡೆಗೆ ಬಣ್ಣವನ್ನು ಹಚ್ಚುವ ಕಾರ್ಯದಲ್ಲಿ ಕೈಜೋಡಿಸಿ ಸಿಬ್ಬಂದಿಯನ್ನು ಅಭಿನಂದಿಸಿದರು.