ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ತಾಲೂಕಿನ ಮಾವಲಿ ಗ್ರಾಮದಲ್ಲಿ ಶಾಲೆಗೆ ಹಾದುಹೋಗುವ ದಾರಿ ಮಧ್ಯದಲ್ಲಿ ಮದ್ಯದಂಗಡಿ ತೆರೆದಿರುವ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ, ಶುಕ್ರವಾರ ಪ್ರತಿಭಟನೆ ನಡೆಸಿದರು.ಗ್ರಾಮದ ರೇಣುಕಮ್ಮ ಮಾತನಾಡಿ, ಸೊರಬ-ಶಿರಾಳಕೊಪ್ಪ ಮಾರ್ಗದ ಮುಖ್ಯ ರಸ್ತೆಯ ಮಾವಲಿ ಗ್ರಾಮದ ಶ್ರೀ ಉಮಾಮಹೇಶ್ವರ ಪ್ರೌಢಶಾಲೆಗೆ ಯಲವಳ್ಳಿ, ಜಿರಲೇಕೊಪ್ಪ, ಮನಮನೆ, ಗದ್ದೆಮನೆ, ಚನ್ನಾಪುರ, ಬಿಳವಾಣಿ ಸೇರಿದಂತೆ ಸುಮಾರು 10 ಗ್ರಾಮಗಳ ವಿದ್ಯಾರ್ಥಿಗಳು ಪ್ರತಿನಿತ್ಯ ಈ ಹೊಸ ಬಾರ್- ರೆಸ್ಟೋರೆಂಟ್ ಎದುರಿನಿಂದ ಹಾದು ಶಾಲೆ ತೆರಳುತ್ತಾರೆ. ಈ ಸಂದರ್ಭ ಮದ್ಯದ ಘಾಟು, ಪಾನಮತ್ತರಿಂದ ಬರುವ ಅವಾಚ್ಯ ಶಬ್ದಗಳಿಂದ ಸಭ್ಯರು, ಮಕ್ಕಳು ಈ ರಸ್ತೆಯಲ್ಲಿ ಓಡಾಡುವುದಕ್ಕೆ ಕಿರಿಕಿರಿಯಾಗುತ್ತಿದೆ. ಅಲ್ಲದೇ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರೆಸ್ಟೋರೆಂಟ್ ಸ್ಥಳಾಂತರಿಸುವಂತೆ ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಬಕಾರಿ ಇನ್‌ಸ್ಪೆಕ್ಟರ್ ಶ್ರೀನಾಥ್ ಮಾತನಾಡಿ, ಸ್ಥಳೀಯ ಗ್ರಾಮ ಪಂಚಾಯಿತಿ ಅನುಮತಿ ಪಡೆದು ಇಲಾಖೆಯ ಹಿರಿಯ ಅಧಿಕಾರಿಗಳು ಕಾನೂನುಬದ್ಧವಾಗಿ ಬಾರ್- ರೆಸ್ಟೋರೆಂಟ್ ತೆರೆಯಲು ಅನುಮತಿ ನೀಡಿದ್ದಾರೆ. ಇದಕ್ಕೆ ಆಕ್ಷೇಪ, ಪ್ರತಿಭಟನೆ ಅವಶ್ಯಕತೆ ಇಲ್ಲ. ಸೂಕ್ತ ಜಾಗದಲ್ಲಿ ಇಲಾಖೆ ಯಾರಿಗೂ ತೊಂದರೆ ಆಗದಂತೆ ಅವಕಾಶ ನೀಡಿದೆ ಎಂದು ಪ್ರತಿಭಟನಾಕಾರರ ಮನವೊಲಿಕೆಗೆ ಪ್ರಯತ್ನಿಸಿದರು.ಅಬಕಾರಿ ಇನ್‌ಸ್ಪೆಕ್ಟರ್ ಸಮಜಾಯಿಷಿಗೆ ಕೆರಳಿದ ಗ್ರಾಮಸ್ಥರು, ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮದ್ಯ ಮಾರಾಟ ಅಂಗಡಿಗೆ ಪರವಾನಗಿ ನೀಡಿರುವುದರಿಂದ ಗ್ರಾಮದಲ್ಲಿ ನೆಮ್ಮದಿ ಹಾಳಾಗಿದೆ. ವಿದ್ಯಾರ್ಥಿಗಳು ತಲೆತಗ್ಗಿಸಿ ಭಯದ ವಾತಾವರಣದಲ್ಲಿ ನಡೆದಾಡುವ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಕಾರಣಕ್ಕೂ ಶಾಲಾ ಸುತ್ತಮುತ್ತಲಿನ ಪ್ರದೇಶದಲ್ಲಿ ಬಾರ್ ತೆರೆಯಲು ಅವಕಾಶ ನೀಡದೇ ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಪಟ್ಟುಹಿಡಿದರು. ನಂತರ ಅಧಿಕಾರಿಗಳು ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಮಾವಲಿ ಗ್ರಾಮ ಸಲಹಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ರೇಣುಕಮ್ಮ, ಮಂಜುಳಾ ಪ್ರಕಾಶಗೌಡ, ತೋಪಪ್ಪ, ಕೆರಿಯಪ್ಪ, ಗುತ್ಯಮ್ಮ, ನಾಗರತ್ನ, ಗೌರಮ್ಮ, ಶಶಿಕಲಾ, ನಾಗವೇಣಿ, ಮೀನಾಕ್ಷಮ್ಮ, ರೇಣುಕಮ್ಮ, ಲಕ್ಷ್ಮಮ್ಮ, ದುರ್ಗಮ್ಮ, ಸವಿತಾ, ಸುಶೀಲಾ, ಜಯಮ್ಮ ಮೊದಲಾದವರು ಇದ್ದರು.- - - -20ಕೆಪಿಸೊರಬ01:
ಸೊರಬ ತಾಲೂಕಿನ ಮಾವಲಿ ಗ್ರಾಮದಲ್ಲಿ ಶಾಲೆಗೆ ಹಾದುಹೋಗುವ ದಾರಿಯಲ್ಲಿ ತೆರೆದಿರುವ ಬಾರ್-ರೆಸ್ಟೋರೆಂಟ್ ಶೀಘ್ರ ಸ್ಥಳಾಂತರಕ್ಕೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.