ಕನ್ನಡ ಅಭ್ಯರ್ಥಿಗಳಿಗೆ ಅನ್ಯಾಯ: ಬರಗೂರು

| Published : Sep 01 2024, 02:00 AM IST

ಸಾರಾಂಶ

ಆಡಳಿತ ಸೇವಾ ಅಧಿಕಾರಿಗಳ ಆಯ್ಕೆಗಾಗಿ ಕೆಪಿಎಸ್ಸಿಯಿಂದ ನಡೆದ ಪರೀಕ್ಷೆಯಲ್ಲಿ ಭಾಷಾಂತರದ ತಪ್ಪುಗಳ ಕಾರಣದಿಂದ ಕನ್ನಡದ ಅಭ್ಯರ್ಥಿಗಳಿಗೆ ಅನ್ಯಾಯವಾಗಿರುವುದು ಖಂಡನೀಯ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ಬೆಂಗಳೂರು: ಆಡಳಿತ ಸೇವಾ ಅಧಿಕಾರಿಗಳ ಆಯ್ಕೆಗಾಗಿ ಕೆಪಿಎಸ್ಸಿಯಿಂದ ನಡೆದ ಪರೀಕ್ಷೆಯಲ್ಲಿ ಭಾಷಾಂತರದ ತಪ್ಪುಗಳ ಕಾರಣದಿಂದ ಕನ್ನಡದ ಅಭ್ಯರ್ಥಿಗಳಿಗೆ ಅನ್ಯಾಯವಾಗಿರುವುದು ಖಂಡನೀಯ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ಕೆಪಿಎಸ್ಸಿ ಸೂಕ್ತ ಭಾಷಾಂತರಕಾರರ ನೆರವು ಪಡೆಯದೆ ಬೇಕಾಬಿಟ್ಟಿ ನಡೆದುಕೊಂಡಿರುವುದು ಸರ್ಕಾರಕ್ಕೂ ಕೆಟ್ಟ ಹೆಸರು ತರುತ್ತದೆ. ಆದ್ದರಿಂದ ಸರ್ಕಾರವು ಕೂಡಲೇ ಸೂಕ್ತ ತನಿಖೆಗೆ ಆದೇಶಿಸಿ ಇಂತಹ ಅನಾಹುತಕ್ಕೆ ಕಾರಣರಾದವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಕೆಪಿಎಸ್ಸಿ ಮರು ಪರೀಕ್ಷೆ ಮಾಡುವುದು ಮೊದಲ ಆದ್ಯತೆಯಾಗಬೇಕು. ಕಡೇ ಪಕ್ಷ ಸೂಕ್ತ ಭಾಷಾ ತಜ್ಞರಿಂದ ಭಾಷಾಂತರದಲ್ಲಿ ಅಪಾರ್ಥ ಕೊಡುವ ಪ್ರಶ್ನೆಗಳನ್ನು ಪತ್ತೆ ಹಚ್ಚಿ ಆ ಪ್ರಶ್ನೆಗಳಿಗೆ ಉತ್ತರಿಸಿದ ಎಲ್ಲ ಅಭ್ಯರ್ಥಿಗಳಿಗೂ ಸರಿ-ತಪ್ಪುಗಳನ್ನು ಎಣಿಸದೆ ಪೂರ್ಣಂಕ ನೀಡಬೇಕು.

ಒಟ್ಟಾರೆ ಇಡೀ ಪ್ರಕರಣದ ತನಿಖೆಗೆ ಸೂಕ್ತ ಸಮಿತಿಯನ್ನು ರಚಿಸಿ ಕೂಡಲೇ ಪರ್ಯಾಯ ಕ್ರಮಕ್ಕೆ ಸರ್ಕಾರ ಮುಂದಾಗಿ ಕನ್ನಡ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯ ಸರಿಪಡಿಸಬೇಕೆಂದು ಪತ್ರಿಕಾ ಹೇಳಿಕೆಯಲ್ಲಿ ಬರಗೂರು ರಾಮಚಂದ್ರಪ್ಪ ಒತ್ತಾಯಿಸಿದ್ದಾರೆ.