ಸಾರಾಂಶ
ತಿಪಟೂರು: ರಾಜ್ಯದಲ್ಲಿ ಮುಂದುವರಿದ ಬಾಣಂತಿಯರ ಸಾವು ಮಾಸುವ ಮುನ್ನವೇ ತಿಪಟೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿಯೂ ಶನಿವಾರ ಬೆಳಗಿನ ಜಾವ ಬಾಣಂತಿ ಸಾವನ್ನಪ್ಪಿದ ಘಟನೆ ನಡೆದಿದೆ.ಇಲ್ಲಿನ ಗಾಂಧೀನಗರದ ಪಾಷಿಜಾನ್ ಎಂಬುವವರ ಪುತ್ರಿ ಫಿರ್‌ದೋಷ್ ಎಂಬ ಮಹಿಳೆ 2ನೇ ಹೆರಿಗೆಗೆಂದು ಡಿ. 27ರ ಬೆಳಿಗ್ಗೆ ದಾಖಲಾಗಿದ್ದರು. ಅಂದೇ ಮಧ್ಯಾಹ್ನ ಮಹಿಳೆಗೆ ಹೊಟ್ಟೆ ನೋವು ಬಂದ ಕಾರಣ ಸಿಜೇರಿಯನ್ ಆಪರೇಷನ್ ಮಾಡಿ ಹೆರಿಗೆ ಮಾಡಲಾಗಿದೆ. ಆಗ ಬಾಣಂತಿ, ಮಗು ಆರೋಗ್ಯವಾಗಿದ್ದರು. ಆದರೆ ಶನಿವಾರ ಬೆಳಗಿನ ಜಾವ 2 ಗಂಟೆಯ ನಂತರ ಬಾಣಂತಿಗೆ ಕೆಮ್ಮು ಪ್ರಾರಂಭವಾಗಿ ಪಲ್ಮನರಿ (ಶ್ವಾಸಕೋಶ) ತೊಂದರೆಯಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಘಟನೆ ಹಿನ್ನೆಲೆ?; ಬಾಣಂತಿ ಫಿರ್‌ದೋಷ್ ಅವರನ್ನು ತಿಪಟೂರಿನಿಂದ ಬೆಂಗಳೂರಿನ ಕೆಜೆ ಹಳ್ಳಿಯ ಮೋದಿ ರಸ್ತೆಯ ಇನಾಯತ್ ಎಂಬುವವರಿಗೆ ಮದುವೆ ಮಾಡಿಕೊಡಲಾಗಿದ್ದು, ಈಗಾಗಲೇ 5 ವರ್ಷದ ಪುತ್ರಿ ಇದ್ದು, 2ನೇ ಹೆರಿಗೆಗೆಂದು ತಿಪಟೂರಿನ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಬಾಣಂತಿಗೆ ಹೊಟ್ಟೆ ನೋವು ಬಂದಿದ್ದರಿಂದ ಸಿಜೇರಿಯನ್ ಆಪರೇಷನ್ ಮಾಡಿ ಹೆರಿಗೆ ಮಾಡಲಾಗಿದೆ. ಆಗ ಬಾಣಂತಿ, ಮಗು ಆರೋಗ್ಯವಾಗಿದ್ದರು. ನಂತರ ಬಾಣಂತಿಗೆ ಕೆಮ್ಮು ಪ್ರಾರಂಭವಾಗಿ ಪಲ್ಮನರಿ (ಶ್ವಾಸಕೋಶ) ತೊಂದರೆಯಿಂದ ಸಾನ್ನಪ್ಪಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಈ ಸಾವಿನ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ರಾಜ್ಯದಲ್ಲಿ ಆಗುತ್ತಿರುವ ಬಾಣಂತಿಯರ ಸಾವಿನ ಪ್ರಕರಣಗಳಲ್ಲಿ ತಿಪಟೂರಿನದೇ ಮೊದಲ ಪ್ರಕರಣ ಎಂಬುದು ಜಿಲ್ಲಾ ಆರೋಗ್ಯ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ. ಆಸ್ಪತ್ರೆಗಳಿಗೆ ಕಳೆದ 2 ವರ್ಷದಿಂದ ಸರಬರಾಜಾಗುತ್ತಿರುವ ಔಷಧ, ಪ್ಲೂಯಿಡ್, ಆಪರೇಷನ್‌ಗೆ ಸಂಬಂಧಿಸಿದ ಉಪಕರಣ, ಕೈಗವಸು ತೀರಾ ಕಳಪೆಯದ್ದಾಗಿವೆ.ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಎಲ್ಲಾ ಮೇಲಧಿಕಾರಿಗಳಿಗೆ ಈ ಬಗ್ಗೆ ತಿಳಿಸಿದರೂ ಎಲ್ಲರೂ ನಿರ್ಲಕ್ಷ್ಯ ಮಾಡುತ್ತಿದ್ದಾರೆಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಇತ್ತೀಚಿನ ಬಾಣಂತಿಯರ ಸರಣಿ ಸಾವುಗಳು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಜನರು ಹಿಂದೇಟು ಹಾಕುವಂತೆ ಮಾಡಿದ್ದರೂ ಸರ್ಕಾರ ಉಡಾಫೆ ಉತ್ತರ ನೀಡುತ್ತಿದೆ. ಇದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಉಂಟಾಗುತ್ತಿದೆ.