ನಬಾರ್ಡ್ ಸಂಸ್ಥೆಯ ವಿವಿಧ ರಾಜ್ಯಗಳ ಹಿರಿಯ ವ್ಯವಸ್ಥಾಪಕರ ತಂಡ ತಮ್ಮ ಅಧ್ಯಯನ ಪ್ರವಾಸದ ಪ್ರಯುಕ್ತ ಇಲ್ಲಿನ ಭಾರತೀಯ ವಿಕಾಸ ಟ್ರಸ್ಟ್ ಗೆ ಭೇಟಿ ನೀಡಿ ಸಂಸ್ಥೆಯ ಕಾರ್ಯಕ್ರಮ, ಅನುಷ್ಠಾನ, ಸಂಸ್ಥೆಯ ಬೆಳವಣಿಗೆ ಬಗ್ಗೆ ತಿಳಿದುಕೊಂಡರು.
ಮಣಿಪಾಲ: ನಬಾರ್ಡ್ ಸಂಸ್ಥೆಯ ವಿವಿಧ ರಾಜ್ಯಗಳ ಹಿರಿಯ ವ್ಯವಸ್ಥಾಪಕರ ತಂಡ ತಮ್ಮ ಅಧ್ಯಯನ ಪ್ರವಾಸದ ಪ್ರಯುಕ್ತ ಇಲ್ಲಿನ ಭಾರತೀಯ ವಿಕಾಸ ಟ್ರಸ್ಟ್ ಗೆ ಭೇಟಿ ನೀಡಿ ಸಂಸ್ಥೆಯ ಕಾರ್ಯಕ್ರಮ, ಅನುಷ್ಠಾನ, ಸಂಸ್ಥೆಯ ಬೆಳವಣಿಗೆ ಬಗ್ಗೆ ತಿಳಿದುಕೊಂಡರು.ಭಾರತೀಯ ವಿಕಾಸ ಟ್ರಸ್ಟ್‌ನ ಮುಖ್ಯ ವ್ಯವಸ್ಥಾಪಕ ಮನೋಹರ ಕಟ್ಗೇರಿ ಅವರು ಎಲ್ಲರನ್ನೂ ಸ್ವಾಗತಿಸಿ, ಬಿವಿಟಿ ಪ್ರಾರಂಭಗೊಂಡ ಉದ್ದೇಶ ಹಾಗೂ ಸಂಸ್ಥೆಯ ರೂವಾರಿಯಾದ ಪದ್ಮಶ್ರೀ ಡಾ.ಟಿ. ಎ. ಪೈ ಇವರ ಸಮಾಜ ಅಭಿವೃದ್ಧಿ ಕನಸು, ವಸಂತಿ ಪೈ ಹಾಗೂ ಕೆ.ಎಮ್.ಉಡುಪ ಅವರ ದೂರದೃಷ್ಟಿ ಯೋಜನೆ ಹಾಗೂ ಯೋಚನೆಗಳು, ಬಿವಿಟಿ ಮತ್ತು ನಬಾರ್ಡ್ ಸಹಯೋಗದೊಂದಿಗೆ ಹಮ್ಮಿಕೊಂಡ ಕಾರ್ಯಕ್ರಮಗಳು - ಮಹಿಳಾ ಸಬಲೀಕರಣ, ಕೃಷಿ, ಸುಸ್ಥಿರ ಇಂಧನ ಸೌರ ಶಕ್ತಿ ಯೋಜನೆಗಳ ಬಗ್ಗೆ ನಬಾರ್ಡ್ ತಂಡಕ್ಕೆ ವಿವರಿಸಿದರು. ಸಂಸ್ಥೆಯ ಹಣಕಾಸು ಅಧಿಕಾರಿ ಹೆಚ್.ಆರ್ ಕೃಷ್ಣದಾಸ ಕಾನೂನು ಮತ್ತು ನಿಯಮದ ಬಗ್ಗೆ ಮಾಹಿತಿ ನೀಡಿದರು.
ಮಂಗಳೂರು ನಬಾರ್ಡ್ ಸಂಸ್ಥೆಯ ಉಪಪಹಾಪ್ರಬಂಧಕಿಯರಾದ ಶೀಲಾ ಭಂಡಾರ್‌ಕರ್ ಹಾಗೂ ಪ್ರೀತಿ ತೋಮಸ್ ಅವರು ಸಮಾಜದ ಅಭಿವೃದ್ಧಿಯಲ್ಲಿ ಬಿವಿಟಿ ಸಂಸ್ಥೆಯು ರಾಷ್ಟ್ರಕ್ಕೆ ನೀಡಿದ ಉತ್ತಮ ಯೋಜನೆಗಳೂ, ನಬಾರ್ಡ್ ಜೊತೆ ಸಂಸ್ಥೆ ಹೊಂದಿರುವ ಕಾರ್ಯತತ್ಪರತೆ ಹಾಗೂ ಪರಿಣಾಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ದೇಶದ ವಿವಿಧ ರಾಜ್ಯಗಳ 70 ಮಂದಿ ನಬಾರ್ಡ್ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಭಾಗವಹಿಸಿದರು. ಬಿವಿಟಿಯ ಹಿರಿಯ ಸಲಹೆಗಾರರಾದ ಜಗದೀಶ ಪೈ ಉಪಸ್ಥಿತರಿದ್ದರು.