ಮಹಿಳಾ ಮಣಿಗಳಿಂದ ಫೋನ್ ಕರೆಗಳ ಸುರಿಮಳೆ

| Published : Mar 09 2024, 01:32 AM IST

ಸಾರಾಂಶ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲೆಯ ತ್ರಿಶಕ್ತಿಗಳಾದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಪಂ ಸಿಇ ಜೊತೆಗೆ ಫೋನ್ ಇನ್ ಸಂವಾದ ಕಾರ್ಯಕ್ರಮಕ್ಕೆ ಜಿಲ್ಲೆಯ ಮಹಿಳೆಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲೆಯ ತ್ರಿಶಕ್ತಿಗಳಾದ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಪಂ ಸಿಇ ಜೊತೆಗೆ ಪೋನ್ ಇನ್ ಸಂವಾದ ಕಾರ್ಯಕ್ರಮಕ್ಕೆ ಜಿಲ್ಲೆಯ ಮಹಿಳೆಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.

ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಎಸ್ಪಿ ಅಮರನಾಥ ರೆಡ್ಡಿ ಹಾಗೂ ಜಿಪಂ ಸಿಇಒ ಅಧಿಕಾರಿ ಶಶಿಧರ ಕುರೇರ ಅವರು ಜಿಲ್ಲೆಯ ವಿವಿಧ ಭಾಗಗಳಿಂದ ಮಹಿಳೆಯರು ಮಾಡಿದ ಶೇ.50ಕ್ಕೂ ಅಧಿಕ ಕರೆಗಳನ್ನು ಸ್ವೀಕರಿಸಿದರು. ಹೆಚ್ಚಿನ ಮಹಿಳೆಯರು ವಯಕ್ತಿಕ ಬದುಕಿನ, ಕೌಟುಂಬಿಕ ಸಮಸ್ಯೆ ಕುರಿತು ಅಳಲು ತೋಡಿಕೊಂಡರು.

ಗಂಗಮ್ಮ ನಿರಲಕೇರಿ ಎಂಬ ಮಹಿಳೆ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ, ನನಗೆ ಹೆಣ್ಣು ಮಕ್ಕಳೆಂದರೆ ತುಂಬಾ ಪ್ರೀತಿ, ನನಗೆ ನನ್ನ ಮಗಳೆ ಸ್ಫೂರ್ತಿ. ಅವಳನ್ನು ಕೂಡ ನಿಮ್ಮಂತೆ ಅಧಿಕಾರಿಯಾಗುವಷ್ಟು ಶಾಲೆ ಓದಿಸುವೆ ಎಂದರು. ಲೋಕಾಪುರ ಪಡೆವ್ವ ಕಂಬಾರ ವಿಕಲಚೇತನ ಮಹಿಳೆ ಕರೆ ಮಾಡಿ, ಗೃಹಲಕ್ಷ್ಮೀ ಯೋಜನೆಯಡಿ ಅರ್ಜಿ ಸಲ್ಲಿಸಿದ್ದು, ಈವರೆಗೂ ಖಾತೆಗೆ ಹಣ ಜಮೆಯಾಗಿಲ್ಲ. ತ್ರಿಚಕ್ರ ವಾಹನ ಸೌಲಭ್ಯ ದೊರೆತಿಲ್ಲ ಎಂದಾಗ, ಜಿಲ್ಲಾಧಿಕಾರಿ ತಕ್ಷಣವೇ ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿಗೆ ದಾಖಲೆ ಪರಿಶೀಲಿಸಿ ಸೋಮವಾರ ಈ ಮಹಿಳೆಗೆ ತ್ರಿಚಕ್ರ ವಾಹನ ನೀಡುವ ವ್ಯವಸ್ಥೆಯಾಗಬೇಕು ಎಂದು ಸೂಚಿಸಿದರು.

ಕಟಗೂರ ಗ್ರಾಮದಿಂದ ಕರೆ ಮಾಡಿದ ಸುಮಾ ಎಂಬ ಮಹಿಳೆ ನಮ್ಮ ಗ್ರಾಮದಲ್ಲಿ ಸಮುದಾಯ ಶೌಚಾಲಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಿದಲ್ಲಿ ನನ್ನಂತಹ ಸಾಕಷ್ಟು ಮಹಿಳೆಯರಿಗೆ ಅನುಕೂಲವಾಗುತ್ತದೆ ಎಂದರೆ, ಲೋಕಾಪುರದ ರೇಖಾ ನರಹಟ್ಟಿ ಬೀದಿ ದೀಪಗಳನ್ನು ಮತ್ತು ನೀರಿನ ಸಮಸ್ಯೆ ಬಗೆ ಹರಿಸಿ, ಮಹಿಳಾ ದಿನಾಚರಣೆಗೊಂದು ಅರ್ಥ ಬರುತ್ತದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿಲ್ಪಾ ಹಿರೇಮಠ ಹಾಗೂ ಸಾಂತ್ವನ, ಸ್ವಾಧಾರ ಕೇಂದ್ರಗಳ ಸಮಾಲೋಚಕರು, ಸಿಬ್ಬಂದಿ ಇದ್ದರು.