ಸಾರಾಂಶ
ಕನ್ನಡಪ್ರಭ ವಾರ್ತೆ ಬೀಳಗಿ
ರೈತರ ಜಮೀನನ್ನು ವಕ್ಫ್ ಬೋರ್ಡ್ ಆಕ್ರಮಿಸಿಕೊಂಡಿರುವುದನ್ನು ಖಂಡಿಸಿ ಭಾರತೀಯ ಕಿಸಾನ್ ಸಂಘದ ವತಿಯಿಂದ ಬುಧವಾರ ಅನಗವಾಡಿ ಗ್ರಾಮದಲ್ಲಿ ಬಾರುಕೋಲು ಚಳವಳಿ ನಡೆಸಿತು. ರೈತರ ವ್ಯವಹಾರಗಳಿಗೆ ವಕ್ಫ್ ನಡೆ ಅಡ್ಡಿಯಾಗಿದ್ದು, ಈ ಕೂಡಲೇ ಅದನ್ನು ಸರಿಪಡಿಸಲು ಮುಖ್ಯಮಂತ್ರಿಗಳು ಮುಂದಾಗಬೇಕು ಎಂದು ರೈತರು ಇದೆ ವೇಳೆ ಆಗ್ರಹಿಸಿದರು.ಚಳವಳಿಯಲ್ಲಿ ನೂರಾರು ರೈತರು ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ವಿರುಪಾಕ್ಷಯ್ಯ ಪಂ.ಹಿರೇಮಠ, ತಾಲೂಕಿನ ಅನಗವಾಡಿ ಗ್ರಾಮದಲ್ಲಿ 209 ಎಕರೆ ಹಾಗೂ ಬೀಳಗಿ, ಬಾಡಗಂಡಿ ಸೇರಿದಂತೆ 200 ಎಕರೆಗಿಂತ ಹೆಚ್ಚು ಜಮೀನುಗಳು ವಕ್ಫ್ ಆಸ್ತಿ ಎಂದು ವಕ್ಫ್ ಬೋರ್ಡ್ ಘೋಷಿಸಿಕೊಂಡಿದೆ. ಕೋರ್ಟ್‌ನಿಂದ ವಕ್ಫ್ ಬೋರ್ಡ್ ತಡೆಯಾಜ್ಞೆ ತಂದು ನೋಂದಣಿ ಕಚೇರಿಯ ಸ್ಟೇ ಬುಕ್‌ನಲ್ಲಿ ನಮೂದಿಸಿದೆ. ಇದರಿಂದಾಗಿ ರೈತರು ಜಮೀನಿನ ಮೇಲೆ ಬ್ಯಾಂಕ್ ಸಾಲ, ಮಾರಾಟ, ಸರ್ಕಾರಿ ಸವಲತ್ತುಗಳನ್ನು ಪಡೆಯಲು ಬರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ಸ್ಟೇ ತೆರವುಗೊಳಿಸಲು ವಕ್ಫ್ ಬೋರ್ಡ್‌ಗೆ ಕಟ್ಟುನಿಟ್ಟಾದ ಆದೇಶ ನೀಡಿ, ರೈತರ ವ್ಯವಹಾರಗಳಿಗೆ ಅನೂಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು
ರಾಜ್ಯದ ಮುಖ್ಯಮಂತ್ರಿಗಳು ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ ಹೆಸರು ಕಡಿಮೆ ಮಾಡಲು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆಯೇ ಹೊರತು, ಸ್ಟೇಯನ್ನು (ತಡೆ) ತೆರವುಗೊಳಿಸಲು ವಕ್ಫ್‌ಗೆ ಸೂಚನೆ ನೀಡಿಲ್ಲ. ಪ್ರತಿಯೊಬ್ಬರು ಇದನ್ನು ಅರಿತು ನ್ಯಾಯ ದೊರೆಯುವವರಿಗೆ ಹೋರಾಟ ಮಾಡಲು ಅಣಿಯಾಗೋಣ ಎಂದು ಕರೆ ನೀಡಿದ ಅವರು, ವಕ್ಫ್ ಬೋರ್ಡ್ ರದ್ದುಗೊಳಿಸಲು ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ವಕ್ಫ್ ಬಾಧಿತರು ಭಾಗವಹಿಸಬೇಕು ಎಂದು ತಿಳಿಸಿದರು.ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರುನಾಥ ಬಗಲಿ ಮಾತನಾಡಿ, ವಕ್ಫ್ ಕಾನೂನು ರೈತರಿಗೆ ಹಾಗೂ ಸಾರ್ವಜನಿಕರಿಗೆ ಮಾರಕವಾಗಿದೆ. ಇದರ ವಿರುದ್ಧ ಚಳವಳಿ ಮಾಡಿ ವಕ್ಫ್ ಮಂಡಳಿ ತೊಲಗುವವರೆಗೆ ಹೋರಾಟ ಮಾಡೋಣ ಎಂದರು.
ಕಬ್ಬು ಬೆಳೆಗಾರರಾದ ಸುಬ್ಬರಾಯಗೌಡ ಪಾಟೀಲ, ಜಿಲ್ಲಾ ಕೋಶ್ಯಾಧ್ಯಕ್ಷ ಎಂ.ವೈ.ವಡವಾಣಿ, ಜಿಲ್ಲಾ ಕಾರ್ಯದರ್ಶಿ ಕುಮಾರ ಯಡಹಳ್ಳಿ, ಜಿಲ್ಲಾ ಉಪಾಧ್ಯಕ್ಷೆ ಪವಿತ್ರಾ ಜಕ್ಕಪ್ಪನವರ, ತಾಲೂಕು ಅಧ್ಯಕ್ಷ ಮಲ್ಲಪ್ಪ ಗಾಣಿಗೇರ, ಗ್ರಾಮದ ಹಿರಿಯರಾದ ಡಾ.ರಮೇಶ ಅಕ್ಕಿಮರಡಿ, ಮಲ್ಲಪ್ಪ ಮೇಟಿ ಮಹಾರುದ್ರಯ್ಯ ಕಂಬಿ, ಗುರುಪಾದಯ್ಯ ಕಂಬಿ, ಅಶೋಕ ಮಂತ್ರಿ, ಮಲ್ಲಿಕಾರ್ಜುನ ಕುಟಕನಕೇರಿ, ಶ್ರೀಶೈಲ ಉಣದ, ಮಲ್ಲು ಕುಟಕನಕೇರಿ ಬಸಯ್ಯ ಮೂತಿಮಠ, ರಮೇಶ ಮೇಟಿ, ರೇಷ್ಮಾ ಪಾಟೀಲ, ಎಚ್.ಎನ್.ಕೂಗಲಿ ಇದ್ದರು.-----------
ಕೋಟ್ ಕೆಲವೊಂದು ರೈತರ ಜಮೀನುಗಳು ಮಾತ್ರ ವಕ್ಫ್ ಮಂಡಳಿಗೆ ಹೋಗಿವೆ ಎಂದು ಉಳಿದ ರೈತರು ಸುಮ್ಮನೆ ಕುಳಿತುಕೊಳ್ಳಬಾರದು. ನೊಂದ ರೈತರಿಗೆ ನ್ಯಾಯ ಒದಗಿಸಲು ಪಕ್ಷ ಭೇದ ಹಾಗೂ ಜಾತಿ ಭೇದ ಮಾಡದೇ ವಕ್ಫ್ ಬಾಧಿತ ರೈತರಿಗೆ ಸಾಥ್ ನೀಡಬೇಕು. - ಅನುಸೂಯಾ ತಾಯಿ, ಅನಗವಾಡಿ