ದಶಕ‌ ಕಳೆದರೂ ಸೌಲಭ್ಯ ವಂಚಿತ ಬಸರಕೋಡ ನವಗ್ರಾಮ

| Published : Mar 09 2025, 01:48 AM IST

ಸಾರಾಂಶ

ರೋಣ ತಾಲೂಕಿನ ಬಸರಕೋಡ ನವಗ್ರಾಮಕ್ಕೆ ದಶಕ ಕಳೆದರೂ ರಸ್ತೆ, ಚರಂಡಿ, ಬೀದಿದೀಪ, ಶೌಚಾಲಯ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳು ಸಿಕ್ಕಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಲ್ಲಿ ಸಾಕಷ್ಟು ಬಾರಿ ಅಳಲು ತೋಡಿಕೊಳ್ಳುತ್ತಾ ಬಂದಿದ್ದರೂ ಸ್ಪಂದನೆ ಸಿಗದಿರುವುದು ವಿಪರ್ಯಾಸ.

ಪಿ.ಎಸ್.ಪಾಟೀಲ್

ಕನ್ನಡಪ್ರಭ ವಾರ್ತೆ ರೋಣ

ತಾಲೂಕಿನ ಬಸರಕೋಡ ನವಗ್ರಾಮಕ್ಕೆ ದಶಕ ಕಳೆದರೂ ರಸ್ತೆ, ಚರಂಡಿ, ಬೀದಿದೀಪ, ಶೌಚಾಲಯ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳು ಸಿಕ್ಕಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಲ್ಲಿ ಸಾಕಷ್ಟು ಬಾರಿ ಅಳಲು ತೋಡಿಕೊಳ್ಳುತ್ತಾ ಬಂದಿದ್ದರೂ ಸ್ಪಂದನೆ ಸಿಗದಿರುವುದು ವಿಪರ್ಯಾಸ.

ಮಲಪ್ರಭಾ ನದಿ ಹಿನ್ನೀರು ಹಾಗೂ ದೊಡ್ಡಳ್ಳದ ಪ್ರವಾಹದಿಂದ ಜಲಾವೃತಗೊಳ್ಳುತ್ತಿದ್ದ ತಾಲೂಕಿನ ಅಮರಗೋಳ ಗ್ರಾಪಂ ವ್ಯಾಪ್ತಿಯ ಬಸರಕೋಡ ಗ್ರಾಮವನ್ನು ಮೂಲಗ್ರಾಮದಿಂದ ಪೂರ್ವಕ್ಕೆ 1.3 ಕಿಮೀ ದೂರದಲ್ಲಿ ನೈನಾಪುರ ರಸ್ತೆಗೆ ಬಿ.ಎಸ್. ಬೇಲೇರಿ ನವಗ್ರಾಮಕ್ಕೆ ಹೊಂದಿಕೊಂಡೇ 2011ರಲ್ಲಿ ಸ್ಥಳಾಂತರಿಸಲಾಯಿತು.28 ಎಕರೆಯಲ್ಲಿ 234 ಸೂರು ನಿರ್ಮಾಣ: ತಾಲೂಕಿನ ನೈನಾಪುರ ರಸ್ತೆಯಲ್ಲಿ ಎಕರೆಗೆ ₹ 2.56 ಲಕ್ಷ ವೆಚ್ಚದಲ್ಲಿ ಒಟ್ಟು 28 ಎಕರೆ ಪ್ರದೇಶವನ್ನು ಸರ್ಕಾರ ಭೂಸ್ವಾಧೀನ ಪಡಿಸಿಕೊಂಡಿತು. ಈ ಪ್ರದೇಶದಲ್ಲಿ ಮೈಸೂರು ನಾಗರಿಕರ ವೇದಿಕೆ ಪುನರ್ವಸತಿ ಯೋಜನೆ, ಸುತ್ತೂರ ಮಠದ ಜೆ.ಎಸ್.ಎಸ್. ಮಹಾ ವಿದ್ಯಾಪೀಠದ ಸಂಸ್ಥೆಗಳ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ನೆರವಿನಿಂದ ಒಟ್ಟು ನಿರ್ಮಾಣವಾಗಬೇಕಿದ್ದ 242 ಮನೆಗಳ ಪೈಕಿ 234 ಮನೆಗಳನ್ನು ನಿರ್ಮಿಸಿ 2011ರಲ್ಲಿ ಸರ್ಕಾರಕ್ಕೆ ಹಸ್ತಾಂತರಿಸಿದರು. ಇನ್ನುಳಿದ 8 ಮನೆಗಳಿಗೆ ಅಡಿಪಾಯ ಮಾತ್ರ ಹಾಕಲಾಗಿದೆ. ಈ ಜಾಗೆಯಲ್ಲಿ ಬೀರಪ್ಪ ದೇವರ ಗುಡಿ ಮತ್ತು ಬೃಹತ್ತಾಕಾರದ ಮರವಿದೆ. ಇಲ್ಲಿನ ಗ್ರಾಮಸ್ಥರ ಪೂಜ್ಯನೀಯ ಮರವಾಗಿದ್ದರಿಂದ ಮರ ತೆರವಿಗೆ ತೀವ್ರ ವಿರೋಧ ಉಂಟಾಯಿತು. ಇದರಿಂದ 8 ಮನೆಗಳ ನಿರ್ಮಾಣಕ್ಕೆ ಹಾಕಲಾದ ಅಡಿಪಾಯವನ್ನು ಅಷ್ಟಕ್ಕೆ ನಿಲ್ಲಿಸಲಾಯಿತು.

ಹಕ್ಕುಪತ್ರ ವಿತರಣೆ ಕಗ್ಗಂಟು: ನಿರ್ಮಾಣಗೊಂಡ 234 ಮನೆಗಳಲ್ಲಿ 1ನೇ ಹಂತದಲ್ಲಿ 188 ಫಲಾನುಭವಿಗಳು, 2ನೇ ಹಂತದಲ್ಲಿ 46 ಫಲಾನುಭವಿಗಳು ಸೇರಿ ಒಟ್ಟು 234 ಫಲಾನುಭವಿಗಳನ್ನು ಆಯ್ಕೆ ಮಾಡಿ ಹಕ್ಕುಪತ್ರಗಳನ್ನು ವಿತರಿಸಲಾಯಿತು. ಆದರೆ ಹಕ್ಕುಪತ್ರ ಪಡೆದ ಬಹುತೇಕರಿಗೆ ತಮ್ಮ ಮನೆಗಳು ಯಾವುದೆಂದು ಈಗಲೂ ಗೊತ್ತಿಲ್ಲ. ಮೂಲ ಗ್ರಾಮದ ಪ್ರಕಾರ, ಹಕ್ಕುಪತ್ರದಲ್ಲಿದ್ದ ಮನೆ ನಂಬರ್‌ ಪ್ರಕಾರ ಅಂದಾಜಿಸಿಕೊಂಡು ನಮ್ಮ ಮನೆ(ಸೂರು) ಇದೇ ಇರಬಹುದೆಂದು ವಾಸವಾಗಿದ್ದಾರೆ. ದಶಕ ಕಳೆದರೂ ಹಕ್ಕುಪತ್ರ ಹಂಚಿಕೆ ಕಗ್ಗಂಟು ಇನ್ನು ಬಗೆಹರಿದಿಲ್ಲ. ಕೆಲ‌ಪ್ರಭಾವಿಗಳು 3ರಿಂದ 4 ಮನೆಗಳನ್ನು ಪಡೆದುಕೊಂಡಿದ್ದಾರೆ. ಮನೆ ಹಂಚಿಕೆ‌ ತಾರತಮ್ಯದಿಂದಾಗಿ ಶೇ.80 ರಷ್ಟು ಕುಟುಂಬಗಳು ಈವರೆಗೂ ಗ್ರಾಪಂನಲ್ಲಿ ಮನೆಗಳ ಹಕ್ಕುಪತ್ರ ನೋಂದಣಿ ಮಾಡಿಸಿಲ್ಲ. ಗ್ರಾಮದಲ್ಲಿ ಜರುಗುವ ಪ್ರತಿ ಸರ್ಕಾರಿ ಕಾರ್ಯಕ್ರಮ, ಗ್ರಾಮ ಸಭೆಯಲ್ಲಿ ಸಂತ್ರಸ್ತರು ಹಕ್ಕುಪತ್ರ ಹಂಚಿಕೆ ಗೊಂದಲ ಬಗ್ಗೆ ಪ್ರಸ್ತಾಪಿಸಿ, ಸಮಸ್ಯೆ ನಿವಾರಿಸುವಂತೆ ಆಗ್ರಹಿಸುತ್ತಾ ಬಂದಿದ್ದಾರೆ.

ಶೇ. 80ರಷ್ಟು ಹಕ್ಕಪತ್ರ ನೊಂದಾಗಿಲ್ಲ: 2007, 2009ರಲ್ಲಿ ಸ್ಥಳಾಂತರಗೊಂಡ ಬಸರಕೋಡ ನವಗ್ರಾಮದಲ್ಲಿ 2019ರ ವರೆಗೆ ಕೇವಕ 30 ಕುಟುಂಬಗಳು( ಶೇ.8ರಷ್ಟು) ಮಾತ್ರ ವಾಸವಾಗಿದ್ದವು. 2019ರಲ್ಲಿ ದೊಡ್ಡಹಳ್ಳ ಮತ್ರು ಮಲಪ್ರಭ ನದಿಯಿಂದ ಬಸರಕೋಡ ಜಲಾವೃತವಾಯಿತು. ಆಗ ಅಲ್ಲಿನ ಜನ ಎಚ್ಚೆತ್ತುಕೊಂಡು ಮೂಲಗ್ರಾಮ ತೊರೆದು ಆಸರೆ ನವಗ್ರಾಮದಲ್ಲಿ ಬಂದು ನೆಲೆಸಿದರು.

ಸಮಸ್ಯೆಗಳ ಸುಳಿಯಲ್ಲಿ ಜನತೆ: ಸದ್ಯ ಇಲ್ಲಿನ ಬಹುತೇಕ ಮನೆಗಳ ಬಾಗಿಲು, ಕಿಟಕಿ ಮತ್ತು ಶೌಚಾಲಯ ಪೈಪ್‌ ಲೈನ್‌ಗಳು ಕಿತ್ತೊಗಿವೆ. ರಸ್ತೆಗಳು ಹದಗೆಟ್ಟಿವೆ. ಗ್ರಾಮದಾದ್ಯಂತ ಒಂದೇ ಒಂದೂ ರಸ್ತೆಗೆ ಗಟಾರ ನಿರ್ಮಿಸಿಲ್ಲ. ಇದರಿಂದ‌ ಮಳೆಯಾದಾಗ ಮಳೆ ಮತ್ತು ಗಲೀಜು ನೀರು‌ ಮನೆಗಳಿಗೆ ನುಗ್ಗುತ್ತದೆ. ಗ್ರಾಮ‌ ಪ್ರವೇಶಿಸುವ ಮುಖ್ಯ ರಸ್ತೆಯುದ್ದಕ್ಕೂ ಜಾಲಿಕಂಟಿ ಹೆಮ್ಮರವಾಗಿ ಬೆಳೆದಿದ್ದು, ಈ ದಾರಿಯಲ್ಲಿ ತೆರಳಲು ಭಯ ಪಡುತ್ತಿದ್ದಾರೆ. ಜಾಲಿಕಂಟಿ ತೆರವಿಗೆ ಇಲ್ಲಿನ ಜನತೆ ಸಾಕಷ್ಟು ಬಾರಿ ಗ್ರಾಒಂ ಪಿಡಿಒ ಶಿವಕುಮಾರ ಡೊಳ್ಳಿನ ಅವರಿಗೆ ಹೇಳಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಶೌಚಾಲಯ ನಿರುಪಯುಕ್ತ: ಮನೆ ನಿರ್ಮಿಸಿ ದಶಕಗಳಿಂದ ಜನವಾಸವಿಲ್ಲದ್ದರಿಂದ ಇಲ್ಲಿನ ಬಹುತೇಕ ಮನೆಗಳು ಜಖಂಗೊಂಡಿವೆ. ಕಿಟಕಿ ಬಾಗಿಲುಗಳು ಕಿತ್ತೊಗಿವೆ. ಶೌಚಾಲಯಗಳ ಬಾಗಿಲು, ಕದ ಕಿತ್ತು ಹೋಗಿವೆ. ತ್ಯಾಜ್ಯ ಸಂಗ್ರಹ ಸೆಪ್ಟಿಕ್‌ ಟ್ಯಾಂಕ್‌ ಮಣ್ಣಲ್ಲೆ ಮಣ್ಣಾಗಿದೆ. ಸೆಪ್ಟಿಕ್‌ ಟ್ಯಾಂಕ್‌ಗೆ ಸಂಪರ್ಕ ಪೈಪ್‌ಗಳು ಹೊಡೆದೊಗಿವೆ. ಹೀಗಾಗಿ ಮನೆಯಲ್ಲಿನ ಶೌಚಾಲಯ ನಿರುಪಯುಕ್ತವಾಗಿದೆ. ಹದಗೆಟ್ಟ ಶೌಚಾಲಯ ಮರು ದುರಸ್ತಿಗಾಗಿ ಹಾಗೂ ಸಾರ್ವಜನಿಕ ಮಹಿಳಾ ಶೌಚಾಲಯ ನಿರ್ಮಿಸುವಂತೆ ಗ್ರಾಪಂಗೆ ಆಗ್ರಹಿಸಿದರೂ, ಇವೆರಡಕ್ಕೂ ಗ್ರಾಪಂನಲ್ಲಿ ಅವಕಾಶವಿಲ್ಲ, ನೀವಿದ್ದ ಮನೆಯಲ್ಲಿನ ಶೌಚಾಲಯ ನೀವೇ ದುರಸ್ತಿ ಮಾಡಿಕೊಳ್ಳುವಂತೆ ಗ್ರಾಪಂ ಕಡ್ಡಿ ತುಂಡು ಮುರಿದಂತೆ ಹೇಳುತ್ತಿದ್ದಾರಂತೆ.

ಜಿಲ್ಲಾ ಮತ್ತು ತಾಲೂಕು ಆಡಳಿತ ಮತ್ತು ಸ್ಥಳಿಯ ಗ್ರಾಪಂ‌ ಗಮನ ಹರಿಸಿ, ಅಲ್ಲಿನ ಜನತೆ ಎದುರಿಸುತ್ತಿರುವ ತೊಂದರೆಗೆ ಮುಕ್ತಿ ನೀಡುವಲ್ಲಿ ಕ್ರಮ ಕೈಗೊಳ್ಳಬೇಕಿದೆ.

ಹಕ್ಕುಪತ್ರ ವಿತರಣೆ ಸಮಸ್ಯೆ ಇನ್ನೂ ಬಗೆ ಹರಿದಿಲ್ಲ. ಮುಖ್ಯ ರಸ್ತೆ ಹಾಗೂ ಗ್ರಾಮದಾದ್ಯಂತ ರಸ್ತೆಗಳ ಜಾಲಿಕಂಟಿ ತೆರವು ಮಾಡಬೇಕು. ಶೌಚಾಲಯ ದುರಸ್ತಿಗಾಗಲಿ ಅಥವಾ ಸಾರ್ವಜನಿಕ ಮಹಿಳಾ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಬಸರಕೋಡ ನವಗ್ರಾಮ ನಿವಾಸಿ ಕಳಕಪ್ಪ‌ ಮಾದರ ಹೇಳಿದರು.ಜಾಲಿ ಕಂಟಿ ತೆರವಿಗೆ ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು. ಪ್ರತಿ ಕಂಬಕ್ಕೂ ಬೀದಿ ದೀಪ ಅಳವಡಿಸಲಾಗುವುದು. ರಸ್ತೆಗಳ ದುರಸ್ತಿ ಮತ್ತು ಸಿಸಿ‌ ರಸ್ತೆಗಳ ನಿರ್ಮಾಣಕ್ಕೆ ಶಾಸಕರಾದ ಜಿ.ಎಸ್.ಪಾಟೀಲ ಅವರು ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರದಲ್ಲಿ ಕಾಮಗಾರಿ ಕೈಗೊಳ್ಳಲಾಗುವುದು ಅಮರಗೋಳ ಗ್ರಾಪಂ ಪಿಡಿಒ ಶಿವಕುಮಾರ ಡೊಳ್ಳಿನ ಹೇಳಿದರು.