ಇಂದಿನಿಂದ ರಾಜ್ಯಾದ್ಯಂತ ಬಸವ ಸಂಸ್ಕೃತಿ ಅಭಿಯಾನ

| Published : Aug 31 2025, 02:00 AM IST

ಸಾರಾಂಶ

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ ಸೆ.೧ಕ್ಕೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿಯಿಂದ ಹಮ್ಮಿಕೊಂಡಿರುವ ಬಸವ ಸಂಸ್ಕೃತಿ ಅಭಿಯಾನ ಚಾಲನೆ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ೫-೧೦ ಸಾವಿರ ಜನರು ಬರುವ ನಿರೀಕ್ಷೆಯಿದೆ ಎಂದು ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.

ಕನ್ನಡಪ್ರಭವಾರ್ತೆ ಬಸವನಬಾಗೇವಾಡಿ

ಸೆ.೧ಕ್ಕೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿಯಿಂದ ಹಮ್ಮಿಕೊಂಡಿರುವ ಬಸವ ಸಂಸ್ಕೃತಿ ಅಭಿಯಾನ ಚಾಲನೆ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ೫-೧೦ ಸಾವಿರ ಜನರು ಬರುವ ನಿರೀಕ್ಷೆಯಿದೆ ಎಂದು ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.

ಪಟ್ಟಣದ ಬಸವೇಶ್ವರ ಸಿಬಿಎಸ್‌ಇ ಶಾಲಾ ಆವರಣದಲ್ಲಿರುವ ನಂದೀಶ್ವರ ರಂಗಮಂದಿರದಲ್ಲಿ ಶನಿವಾರ ಸಂಜೆ ಅಭಿಯಾನದ ವೇದಿಕೆ, ಪೆಂಡಾಲ್, ಪ್ರಸಾದ ವ್ಯವಸ್ಥೆ ಪರಿಶೀಲನೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ತಿಂಗಳಿಂದ ಬಸವ ಸಂಸ್ಕೃತಿ ಅಭಿಯಾನಕ್ಕೆ ಚಾಲನೆಗೆ ಸಿದ್ಧತೆ ಮಾಡಲಾಗುತ್ತಿದೆ. ಸಚಿವ ಶಿವಾನಂದ ಪಾಟೀಲ ಸಂಪೂರ್ಣ ಸಹಕಾರ ನೀಡಿದ್ದಾರೆ. ಇದಕ್ಕೆ ಹಲವು ಸಮಿತಿಗಳನ್ನು ರಚಿಸಿ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. ಕಾರ್ಯಕ್ರಮಕ್ಕೆ ನಾಡಿನ ನೂರಾರು ಸ್ವಾಮೀಜಿಗಳು, ಜನರು ಆಗಮಿಸುತ್ತಾರೆ. ಎಲ್ಲರ ಸಹಕಾರದಿಂದ ಕಾರ್ಯಕ್ರಮ ನಡೆದಿದೆ. ಸೆ.೧ ರಂದು ಬೆಳಗ್ಗೆ ೧೦ ರಿಂದ ರಾತ್ರಿಯವರೆಗೂ ನಿರಂತರ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಈ ಅಭಿಯಾನದ ಯಶಸ್ವಿಗೆ ಎಲ್ಲರೂ ಸ್ವ-ಇಚ್ಛೆಯಿಂದ ತಮ್ಮ ಕರ್ತವ್ಯವೆಂದು ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ ಎಂದು ಮನವಿ ಮಾಡಿದರು.ಬಸವೇಶ್ವರ ಸೇವಾ ಸಮಿತಿ ಸದಸ್ಯ ಎಂ.ಜಿ.ಆದಿಗೊಂಡ, ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸೆ.೧ರಂದು ಬೆಳಗ್ಗೆ ಬಸವಜನ್ಮ ಸ್ಮಾರಕದ ಮುಂದೆ ಬೆಳಗ್ಗೆ ೯ ಗಂಟೆಗೆ ಷಟ್‌ಧ್ವಜಾರೋಹಣ ನೆರವೇರಲಿದೆ. ನಂತರ ೧೦ಕ್ಕೆ ಬಸವೇಶ್ವರ ದೇವಸ್ಥಾನದಲ್ಲಿ ನಾಡಿನ ವಿವಿಧೆಡೆಗಳಿಂದ ಆಗಮಿಸುವ ಪರಮಪೂಜ್ಯರನ್ನು ಸ್ವಾಗತಿಸಿಕೊಳ್ಳಲಾಗುವದು. ನಂತರ ೧೧ಕ್ಕೆ ನಂದೀಶ್ವರ ರಂಗಮಂದಿರದಲ್ಲಿ ಕಾಲೇಜು ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರೊಂದಿಗೆ ವಿವಿಧ ಶ್ರೀಗಳಿಂದ ವಚನ ಸಂವಾದ ನಡೆಯಲಿದೆ. ಮಧ್ಯಾಹ್ನ ೩ಕ್ಕೆ ಬಸವಜನ್ಮಸ್ಮಾರಕ ಮುಂಭಾಗ ಬಸವ ಸಂಸ್ಕೃತಿ ಅಭಿಯಾನದ ರಥಯಾತ್ರೆಗೆ ಸಚಿವ ಶಿವಾನಂದ ಪಾಟೀಲ, ನಾಡಿನ ಪರಮಪೂಜ್ಯರು ಚಾಲನೆ ನೀಡಲಿದ್ದಾರೆ. ನಂತರ ಮೆರವಣಿಗೆಯಲ್ಲಿ ೧೧೦೦ ಮಹಿಳೆಯರು ವಚನ ಪುಸ್ತಕ ಹೊತ್ತು, ೭೭೦ ಯುವಕರು ಕೈಯಲ್ಲಿ ಬಸವ ಧ್ವಜ ಹಿಡಿದು ಸಾಗುವರು. ವಿವಿಧ ಕಲಾತಂಡಗಳು ಭಾಗವಹಿಸುವವು. ನಂತರ ಸಂಜೆ ೬ಕ್ಕೆ ಸಿಬಿಎಸ್‌ಸಿ ಶಾಲಾ ಆವರಣದಲ್ಲಿ ಅಭಿಯಾನದ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.ಯರನಾಳದ ಸಂಗನಬಸವ ಸ್ವಾಮೀಜಿ ಮಾತನಾಡಿ, ಶಿವನಾಗಬಹುದು. ಆದರೆ ಬಸವನಾಗಲು ಯಾರಿಂದಲೂ ಸಾಧ್ಯವಿಲ್ಲ. ಬಸವ ಸಂಸ್ಕೃತಿ ಮನುಜ ಕುಲ ಒಂದು ಎಂದು ಸಾರುತ್ತದೆ. ಬಸವ ಸಂಸ್ಕೃತಿಯನ್ನು ಎಲ್ಲರೂ ಒಪ್ಪಿಕೊಂಡು ಅದರಡಿ ಜೀವನ ಸಾಗಿಸಬೇಕು. ಇಂತಹ ಮಹಾತ್ಮ ಜನಿಸಿದ ನಾಡಿನಲ್ಲಿ ಅಭಿಯಾನ ನಡೆಯುತ್ತಿದೆ. ಇದು ಸಂತಸದಾಯಕ ಸಂಗತಿ. ಈ ನೆಲದಲ್ಲಿ ಮದ್ಯ ಮಾರಾಟ ನಿಷೇಧವಾಗುವಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕಿದೆ. ಈ ಸಂಸ್ಕ್ರತಿ ಅಭಿಯಾನ ದಿನದಂದು ತೆಗೆದುಕೊಂಡರೆ ಸೂಕ್ತ ಎಂದು ಅಭಿಪ್ರಾಯ ಪಟ್ಟರು. ಸುದ್ದಿಗೋಷ್ಠಿಯಲ್ಲಿ ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಮುಖಂಡರಾದ ಬಸವರಾಜ ಹಾರಿವಾಳ, ಶೇಖರ ಗೊಳಸಂಗಿ, ರವಿ ರಾಠೋಡ, ಎಫ್.ಡಿ.ಮೇಟಿ, ವಿವೇಕಾನಂದ ಕಲ್ಯಾಣಶೆಟ್ಟಿ, ಬಸವರಾಜ ರೊಟ್ಟಿ, ಗ್ರೇಡ್-೨ ತಹಸೀಲ್ದಾರ್‌ ಅರಕೇರಿ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ಬಾಕ್ಸ್‌

ವಚನ ಸಂಸ್ಕೃತಿಯನ್ನು ಬೇಕಂತಲೇ ಮುಚ್ಚಿಟ್ಟರುಜಾಗತಿಕ ಲಿಂಗಾಯತ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಡಾ.ಎಸ್.ಎಂ.ಜಾಮದಾರ ಮಾತನಾಡಿ, ೧೨ ನೇ ಶತಮಾನದಲ್ಲಿ ಬಸವೇಶ್ವರರು ಸ್ಥಾಪಿತ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಿದೆ. ನಂತರ ೨೦೦ ವರ್ಷಗಳ ಕಾಲ ಇದು ಅಜ್ಞಾತವಾಸದಲ್ಲಿತ್ತು. ಮುಂದೆ ೧೫ ನೇ ಶತಮಾನದಲ್ಲಿ ನಾಲ್ವರು ವಿದ್ವಾಂಸರು ಶೂನ್ಯಸಂಪಾದನೆ ಕೃತಿ ಮೂಲಕ ೨೦೪೦ ವಚನಗಳನ್ನು ತೆರೆದಿಟ್ಟರು. ವಚನ ಸಂಸ್ಕೃತಿಯನ್ನು ಕೆಲವರು ಬೇಕಂತಲೇ ಮುಚ್ಚಿಟ್ಟಿದ್ದರು. ನಂತರ ನಾಡಿನಲ್ಲಿ ವಚನ ಸಂಸ್ಕೃತಿ ಬೆಳೆಯುತ್ತಾ ಬಂದಿದೆ. ನಾಡಿನಲ್ಲಿ ಬಸವಣ್ಣನವರ ಹೆಸರಿನಲ್ಲಿ ೩೦೦ ಅಧಿಕ ವಿವಿಧ ಸಂಘ-ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಲಿಂಗಾಯತವು ಹಿಂದು ಧರ್ಮದ ಭಾಗವಲ್ಲ. ಇದೊಂದು ಸ್ವತಂತ್ರ ಧರ್ಮ ಎಂದು ಕಳೆದ ಏಳು ವರ್ಷದಿಂದ ರಾಜ್ಯದಲ್ಲಿ ಹೋರಾಟ ನಡೆಯುತ್ತಿದೆ. ಇದೀಗ ನಾಡಿನ ಎಲ್ಲ ಲಿಂಗಾಯತ ಮಠಾಧಿಪತಿಗಳು ಒಕ್ಕೂಟ ರಚಿಸಿ ಸೆ.೧ ರಿಂದ ಅ.೧ ರವೆರೆಗೆ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಂಡಿದ್ದಾರೆ. ಅಕ್ಟೋಬರ್ ಮೊದಲ ವಾರದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿಯಾನದ ಸಮಾರೋಪ ನಡೆಯಲಿದೆ ಎಂದರು. ಕರ್ನಾಟಕ, ಆಂಧ್ರ, ತೆಲಂಗಾಣ, ಕೇರಳ, ತಮಿಳುನಾಡು ರಾಜ್ಯ ಸೇರಿದಂತೆ ೩ ಕೋಟಿ ಲಿಂಗಾಯತರು ಇದ್ದಾರೆ. ಕರ್ನಾಟಕ ರಾಜ್ಯದಲ್ಲಿ ೧.೨೦ ಕೋಟಿ ಲಿಂಗಾಯತರು ಇದ್ದಾರೆ. ಕಳೆದ ಜಾತಿಗಣತಿಯಲ್ಲಿ ೬೬ ಲಕ್ಷ ಲಿಂಗಾಯತರು ಎಂದು ತೋರಿಸಲಾಗಿದೆ. ಲಿಂಗಾಯತರು ತಮ್ಮ ಜಾತಿ ಬರೆಸುವಾಗ ಸರಿಯಾಗಿ ಬರೆಸಿಲ್ಲ. ಸೆ.೨೨ ರಿಂದ ಮತ್ತೆ ರಾಜ್ಯದಲ್ಲಿ ಜಾತಿ ಗಣತಿ ಆರಂಭವಾಗಲಿದೆ. ಈಗಲಾದರೂ ಇದರ ಕಡೆಗೆ ಲಿಂಗಾಯತರು ಗಮನ ಹರಿಸಬೇಕು ಎಂದು ಹೇಳಿದರು.