ಸಾರಾಂಶ
ಯಾದಗಿರಿ: ಬಸವಾದಿ ಶರಣರ ಚಿಂತನೆಗಳನ್ನು ಜನಮಾನಸದಲ್ಲಿ ಬಿತ್ತುವ ಮಹತ್ವದ ಉದ್ದೇಶದಿಂದ, ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ರಾಜ್ಯಾದ್ಯಂತ ಸೆ.1 ರಿಂದ ಅ.5 ರವರೆಗೆ ಬಸವ ಸಂಸ್ಕತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಭಿಯಾನದ ಈ ರಥಯಾತ್ರೆ ಯಾದಗಿರಿ ಜಿಲ್ಲೆಗೆ ಸೆ.4ರ ಗುರುವಾರದಂದು ಸಂಜೆ 4 ಗಂಟೆಗೆ ಆಗಮಿಸಲಿದೆ ಎಂದು ಗುರುಮಠಕಲ್ ಖಾಸಾ ಮಠದ ಪೀಠಾಧಿಪತಿ ಹಾಗೂ ಜಿಲ್ಲಾ ಸಹಮತ ವೇದಿಕೆ ಗೌರವಾಧ್ಯಕ್ಷ ಶಾಂತವೀರ ಗುರು ಮುರುಘರಾಜೇಂದ್ರ ಮಹಾಸ್ವಾಮಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುವಾರ ಬೆಳಿಗ್ಗೆ 10.30ಕ್ಕೆ ನಗರದ ಪಾಟೀಲ್ ಕನ್ವೆನಷನ್ ಹಾಲ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ಭಾಲ್ಕಿಯ ನಾಡೋಜ ಡಾ.ಬಸವಲಿಂಗ ಪಟ್ಟದೇವರು ಸಾನ್ನಿಧ್ಯ ವಹಿಸಲಿದ್ದು, ಭಾಲ್ಕಿ, ಗದಗನ ಜಗದ್ಗುರು ತೋಂಟದಾರ್ಯ ಮಠದ ಜಗದ್ಗುರು ತೋಂಟದಾರ್ಯ ಸಿದ್ದರಾಮ ಮಹಾಸ್ವಾಮೀಜಿ, ಸಾಣೇಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ, ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಮಠದ ಗುರು ಮಹಾಂತ ಅಪ್ಪಗಳು ಹಾಗೂ ವಿವಿಧ ಮಠಾಧೀಶರು ಭಾಗವಹಿಸುವರು ಎಂದು ತಿಳಿಸಿದರು.ಸಭೆಯಲ್ಲಿ ವಚನಗಳಲ್ಲಿ ವೈಜ್ಞಾನಿಕತೆ ಕುರಿತು ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ದೊಡ್ಡಬಳ್ಳಾಪುರದ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜ ಉಪನ್ಯಾಸ ನೀಡಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಅವರ ಪ್ರಶ್ನೆಗಳಿಗೆ ಉತ್ತರಿಸುವರು. ಬಸವ ಮಾರ್ಗ ಪ್ರತಿಷ್ಠಾನ ಅಧ್ಯಕ್ಷರಾದ ವಿಶ್ವರಾಧ್ಯ ಸತ್ಯಂಪೇಟ್ ಅನುಭಾವ ನುಡಿಗಳನ್ನಾಡುವರು ಎಂದು ವಿವರಿಸಿದರು.
ಸಂಜೆ 4 ಗಂಟೆಗೆ ನಗರದ ನೇತಾಜಿ ವೃತ್ತದಲ್ಲಿ ಕಾರ್ಯಕ್ರಮದ ಅಭಿಯಾನ ಮೆರವಣಿಗೆಗೆ ಉದ್ಘಾಟನೆ ಮತ್ತು ಸಾಮರಸ್ಯ ನಡಿಗೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಚಾಲನೆ ನೀಡುವರು, ಈ ಸಂದರ್ಭದಲ್ಲಿ ರಾಯಚೂರ ಸಂಸದ ಜಿ.ಕುಮಾರ ನಾಯಕ್, ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರುಗಳಾದ ಚೆನ್ನಾರಡ್ಡಿ ಪಾಟೀಲ್ ತುನ್ನೂರ, ಶರಣಗೌಡ ಕಂದಕೂರ, ರಾಜಾ ವೇಣುಗೋಪಾಲ ನಾಯಕ, ಜಿಲ್ಲಾಧಿಕಾರಿ ಹರ್ಷಲ್ ಭೋಯರ ನಾರಾಯಣರಾವ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ ಮುಂತಾದವರು ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.ಸಂಜೆ 6 ಗಂಟೆಗೆ ಪಾಟೀಲ್ ಕನ್ವೆಷನ್ ಹಾಲ್‌ನಲ್ಲಿ ನಡೆಯಲಿರುವ ಉಪನ್ಯಾಸ ಕಾರ್ಯಕ್ರಮದಲ್ಲಿ, ಹಂದಿಗುಂದ ಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ "ಲಾಂಛನಕ್ಕೆ ತಕ್ಕ ಆಚರಣೆ ಇಲ್ಲದಿದ್ದಡೆ..: ಎಂಬ ವಿಷಯ ಕುರಿತು ಮಾತನಾಡಲಿದ್ದಾರೆ. "ಮಾತೆಂಬುದು ಜ್ಯೋತಿರ್‌ಲಿಂಗ " ಎಂಬ ವಿಷಯದ ಕುರಿತು ಗದಗಿನ ವಚನ ಟಿವಿಯ ಪ್ರೊ.ಸಿದ್ದು ಯಾಪಲಪರವಿ ಉಪನ್ಯಾಸ ನೀಡುವರು, ರಾತ್ರಿ 8.30ಕ್ಕೆ ಶಿವಸಂಚಾರ ಸಾಣೇಹಳ್ಳಿ ತಂಡದಿಂದ "ಜಂಗಮದೆಡೆಗೆ " ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಬಸವ ಸಂಸ್ಕೃತಿ ಅಭಿಯಾನ ಸಮಿತಿ ಹಾಗೂ ಸಹಮತ ವೇದಿಕೆ ಜಿಲ್ಲಾಧ್ಯಕ್ಷ ಡಾ.ಭೀಮಣ್ಣ ಮೇಟಿ ಮಾತನಾಡಿ, ಪ್ರಸಕ್ತ ದಿನಗಳಲ್ಲಿ ಬಸವ ತತ್ವದಿಂದ ಮಾತ್ರ ಸಮಾಜದಲ್ಲಿ ಶಾಂತಿ, ಸಾಮರಸ್ಯ, ಸಮಾನತೆ ಮೂಡಿ ಪರಿವರ್ತನೆಗೆ ಪ್ರೇರಣೆ ಸಿಗಲಿದೆ, ಈ ದೆಶೆಯಲ್ಲಿ ನಾವೆಲ್ಲರೂ ವೇದಿಕೆಯಡಿ ಸೇರಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ವೇದಿಕೆ ಕಾರ್ಯದರ್ಶಿ ಶಿವರಾಜ ಕಲಕೇರಿ ಸುರಪುರ, ಸೋಮಶೇಖರ ಮಣ್ಣೂರ, ವೆಂಕಣ್ಣ ಆಲೇಮನಿ, ಗುಂಡಪ್ಪ ಕಲಬುರಗಿ, ಅವಿನಾಶ ಜಗನ್ನಾಥ, ವಿಶ್ವನಾಥರಡ್ಡಿ ಗೊಂದೆಡಗಿ, ವಿಶ್ವನಾಥ ಶಿರವಾರ, ಡಾ. ಶಫಿ ತುನ್ನೂರ, ಬಸವರಾಜ ರಾಜಾಪೂರ, ಶ್ರೀಶೈಲ್ ಹೊಸಮನಿ, ಮರೆಪ್ಪ ಚಟ್ರೆಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.