ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಸೆ.೧ರಿಂದ ಅ.೫ರವರೆಗೆ ರಾಜ್ಯದ ಎಲ್ಲ ೩೨ ಜಿಲ್ಲೆಗಳಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಹಮ್ಮಿಕೊಂಡಿರುವ ಬಸವ ಸಂಸ್ಕ್ರತಿ ಅಭಿಯಾನವು ಸೆ.೧ರಂದು ಬಸವೇಶ್ವರರ ಜನ್ಮಸ್ಥಳ ಬಸವನಬಾಗೇವಾಡಿಯಿಂದ ಸಚಿವ ಶಿವಾನಂದ ಪಾಟೀಲ ಸೇರಿದಂತೆ ನಾಡಿನ ಅನೇಕ ಶ್ರೀಗಳು ಈ ಅಭಿಯಾನದ ಬಸವ ರಥಕ್ಕೆ ಚಾಲನೆ ನೀಡಲಿದ್ದಾರೆ ಎಂದು ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.ಪಟ್ಟಣದ ಬಸವೇಶ್ವರ ದೇವಾಲಯ ಸಿಬಿಎಸ್‌ಇ ಶಾಲಾ ಆವರಣದಲ್ಲಿರುವ ನಂದೀಶ್ವರ ರಂಗಮಂದಿರದಲ್ಲಿ ನಡೆದ ಬಸವ ಸಂಸ್ಕ್ರತಿ ಅಭಿಯಾನದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು. ಈ ಕಾರ್ಯಕ್ರಮಕ್ಕೆ ನಾಡಿನ ವಿವಿಧ ಭಾಗಗಳಿಂದ ಅನೇಕ ಶ್ರೀಗಳು, ಜನರು ಸಾಕ್ಷಿಯಾಗಲಿದ್ದಾರೆ. ಕಾರ್ಯಕ್ರಮದ ಯಶಸ್ವಿಗೆ ರಚಿಸಲಾಗುವ ಸ್ವಾಗತ ಸಮಿತಿ ಸೇರಿದಂತೆ ವಿವಿಧ ಸಮಿತಿಗಳಲ್ಲಿರುವ ಪದಾಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ರಾಜ್ಯದಲ್ಲಿಯೇ ಅಭೂತಪೂರ್ವಕ ಕಾರ್ಯಕ್ರಮವಾಗುವಂತೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಎಲ್ಲ ರೀತಿಯ ಸಹಕಾರ ನೀಡಬೇಕೆಂದರು.
ಬಸವ ಸಂಸ್ಕ್ರತಿ ಅಭಿಯಾನಕ್ಕೆ ವಿವಿಧ ಸಮಿತಿ ರಚಿಸಲಾಗುವುದು. ಸಮಿತಿಯಲ್ಲಿರುವ ಸದಸ್ಯರು ತಮಗೆ ವಹಿಸಿದ ಕಾರ್ಯವನ್ನು ಜವಾಬ್ದಾರಿಯುತವಾಗಿ ಮಾಡಬೇಕು. ಶ್ರೀಗಳ ವಾಸ್ತವ್ಯಕ್ಕೆ ಯಾತ್ರಿ ನಿವಾಸ, ಬಸವ ಭವನ, ಭಕ್ತರ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗುವುದು. ಅಭಿಯಾನಕ್ಕೆ ಬರುವ ಎಲ್ಲ ಜನರಿಗೆ ದಾಸೋಹ ವ್ಯವಸ್ಥೆ ಮಾಡಲಾಗುವುದು. ಶ್ರೀಗಳು ತಮ್ಮ ಭಕ್ತಸಮೂಹವನ್ನು ಈ ಕಾರ್ಯಕ್ರಮಕ್ಕೆ ಕರೆದುತರಬೇಕು. ಸೆ.೨೬ರಂದು ಸಚಿವ ಶಿವಾನಂದ ಪಾಟೀಲ ಅಧ್ಯಕ್ಷತೆಯಲ್ಲಿ ಇನ್ನೊಂದು ಸಭೆ ಇದೇ ಸ್ಥಳದಲ್ಲಿ ಸಂಜೆ ೪ಗಂಟೆಗೆ ಮಾಡಲಾಗುವುದು ಎಂದರು.ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಬಸನಗೌಡ ಹರನಾಳ ಮಾತನಾಡಿ, ಅಭಿಯಾನದ ಬಸವರಥ ಯಾತ್ರೆ ಮೆರವಣಿಗೆಯಲ್ಲಿ ಬೀದರಿನ ಬಸವರಾಜ ದನ್ನೂರ ಅವರು ೫ ಪೂಟ್ ವಿಭೂತಿ ತರುವರು. ನಾವು ಎರಡೂವರೆ ಪೂಟ್‌ದ ಲಿಂಗವನ್ನು ತರುತ್ತೇವೆ. ಅಭಿಯಾನಕ್ಕೆ ಬರುವ ಎಲ್ಲ ಜನರಿಗೆ ವಿಭೂತಿ ನೀಡುತ್ತೇವೆ. ಇದರೊಂದಿಗೆ ಶ್ರೀಗಳು ರುದ್ರಾಕ್ಷಿ ನೀಡುತ್ತಾರೆ. ಈ ಕಾರ್ಯಕ್ರಮದ ಕರಪತ್ರ ಜಿಲ್ಲೆಯ ತಾಲೂಕುಗಳಿಗೆ ಕಳುಹಿಸಿಕೊಡುವ ಮೂಲಕ ಜನರನ್ನು ಆಹ್ವಾನಿಸುತ್ತೇವೆ. ಅಭಿಯಾನದ ಕಾರ್ಯಕ್ರಮದಲ್ಲಿ ವೇದಿಕೆ, ಧ್ವನಿವರ್ದಕ ಸರಿ ಇರುವಂತೆ ಸಂಘಟಕರು ಗಮನ ಹರಿಸಬೇಕು. ದಾಸೋಹ ಅಚ್ಚುಕಟ್ಟಾಗಿ ನಡೆಯುವಂತಾಗಬೇಕೆಂದರು.
ಮೋಟಗಿಯ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ಈ ಅಭಿಯಾನಕ್ಕೆ ಎಲ್ಲ ಊರಿನ ಜನರು ತಮ್ಮ ಊರಿನಲ್ಲಿಯೇ ಚಾಲನೆ ನೀಡುವಂತೆ ಕೋರಿದ್ದರು. ಆದರೆ ಒಕ್ಕೂಟವು ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿಯಿಂದಲೇ ಚಾಲನೆ ನೀಡಬೇಕೆಂಬ ಆಶಯ ಹೊಂದಿದ ಫಲವಾಗಿ ಸೆ.೧ರಂದು ಇಲ್ಲಿಂದ ಚಾಲನೆ ಸಿಗಲಿದೆ. ಇಡೀ ಜಗತ್ತು ಬಸವಣ್ಣನವರ ತತ್ವಗಳಿಗೆ ಬೆನ್ನು ಹತ್ತುವ ಕಾಲ ಸನಿಹದಲ್ಲಿದೆ. ಇದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ. ಸೆ.೧ರಂದು ನಡೆಯುವ ಬಸವ ಸಂಸ್ಕ್ರತಿ ಅಭಿಯಾನ ಪರ್ವಕಾಲವಾಗಿದೆ. ಈ ಕಾರ್ಯಕ್ರಮವನ್ನು ಅಭೂತಪೂರ್ವಕವಾಗಿ ಯಶಸ್ವಿಯಾಗಲು ಅಭಿಯಾನದ ಎಲ್ಲ ಸಮಿತಿಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದರು.ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಈಗಾಗಲೇ ಈ ಅಭಿಯಾನದ ಕುರಿತು ಪಟ್ಟಣ ಸೇರಿ ತಾಲೂಕಿನಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಇದಕ್ಕೆ ಸಕರಾತ್ಮಕವಾಗಿ ಸ್ಪಂದನೆ ಸಿಗುತ್ತಿದೆ. ಬಸವ ಸಂಸ್ಕ್ರತಿ ಹೆಚ್ಚು ಪ್ರಸ್ತುತವಾಗಿದೆ. ಸರ್ಕಾರದಿಂದ ಅಧಿಕೃತವಾದ ಸಾಂಸ್ಕ್ರತಿಕ ನಾಯಕ ಬಸವಣ್ಣನವರ ಭಾವಚಿತ್ರವನ್ನು ತಮ್ಮ ಬ್ಯಾನರ್‌ಗಳಲ್ಲಿ ಹಾಕುವಂತಾಗಬೇಕು. ಅಭಿಯಾನದ ಯಶಸ್ವಿಗೆ ಎಲ್ಲರೂ ಶ್ರಮಿಸಬೇಕೆಂದರು.
ಜಾಗತಿಕ ಲಿಂಗಾಯತ ಮಹಾಸಭಾದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಹಾದೇವಿ ಗೋಕಾಕ, ಎಂ.ಜಿ.ಆದಿಗೊಂಡ ಮಾತನಾಡಿದರು. ವೇದಿಕೆಯಲ್ಲಿ ಚನ್ನಬಸವ ಸ್ವಾಮೀಜಿ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಉಪಾಧ್ಯಕ್ಷ ಅಶೋಕ ಹಾರಿವಾಳ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ಮರ್ತುರ, ಸಾಹಿತಿ ಲ.ರು.ಗೊಳಸಂಗಿ, ಬಾಲಚಂದ್ರ ಮುಂಜಾನಿ, ಶಿವನಗೌಡ ಬಿರಾದಾರ ಇತರರು ಇದ್ದರು. ಎಂ.ಜಿ.ಆದಿಗೊಂಡ ಸ್ವಾಗತಿಸಿ, ನಿರೂಪಿಸಿದರು.