ಸಕಲ ಜೀವಿಗೆ ಲೇಸು ಬಯಸುವ ಬಸವ ಧರ್ಮ ಪ್ರಗತಿಪರ ಧರ್ಮ: ಸಂಜಯ್ ಮಾಕಾಲ್

| Published : Oct 25 2024, 01:11 AM IST / Updated: Oct 25 2024, 01:12 AM IST

ಸಕಲ ಜೀವಿಗೆ ಲೇಸು ಬಯಸುವ ಬಸವ ಧರ್ಮ ಪ್ರಗತಿಪರ ಧರ್ಮ: ಸಂಜಯ್ ಮಾಕಾಲ್
Share this Article
  • FB
  • TW
  • Linkdin
  • Email

ಸಾರಾಂಶ

ಬಸವಗಿರಿಯ ಲಿಂಗಾಯತ ಮಹಾಮಠ ದಲ್ಲಿ ನಡೆದ ಮಾಸಿಕ ಶರಣ ಸಂಗಮ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಬೀದರ್

ಸಕಲ ಜೀವಿಗಳಿಗೆ ಲೇಸನ್ನೇ ಬಯಸುವ ಬಸವ ಧರ್ಮ ಪ್ರಗತಿಪರ ಧರ್ಮವಾಗಿದೆ ಎಂದು ಕಲಬುರಗಿಯ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಸಂಜಯ್ ಮಾಕಾಲ್ ಅಭಿಪ್ರಾಯಪಟ್ಟರು.

ಇಲ್ಲಿಯ ಬಸವಗಿರಿಯ ಲಿಂಗಾಯತ ಮಹಾಮಠದಲ್ಲಿ ನಡೆದ ಮಾಸಿಕ ಶರಣ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಪಂಚದ ಎಲ್ಲ ಧರ್ಮಗಳು ಜೀವ, ಜಗತ್ತು, ಈಶ್ವರ ಈ ಮೂರರ ಸಂಬಂಧ ತಿಳಿಸುತ್ತವೆ. ದೇವರು ಬಹುತೇಕ ಧರ್ಮಗಳ ಕೇಂದ್ರ ಬಿಂದು. ಆದರೆ, ಬಸವ ಧರ್ಮದಲ್ಲಿ ಜೀವಿಯೇ ಕೇಂದ್ರಬಿಂದು. ಬಸವಣ್ಣನವರು ಪ್ರತಿಪಾದಿಸಿದ್ದು ಜೀವಪರ ಧರ್ಮ ಎಂದು ನುಡಿದರು.

ಮನುಕುಲ ಸೌಖ್ಯವಾಗಿರಲು ಎಲ್ಲರೂ ಕಾಯಕ ಮಾಡಲೇಬೇಕು. ಇದರಲ್ಲಿ ಯಾರಿಗೂ ವಿನಾಯಿತಿ ಇಲ್ಲ. ಪ್ರತಿಯೊಬ್ಬರೂ ದುಡಿದು ಉಂಡರೆ ದೇಶದ ಪ್ರಗತಿ ಸಾಧ್ಯ ಎಂದು ಹೇಳಿದರು.

1945ರ ಮಹಾ ಯುದ್ಧದಲ್ಲಿ ಜಪಾನ್ ಅಣುಬಾಂಬ್‌ದಾಳಿಗೆ ತುತ್ತಾಗಿತ್ತು. ಆ ದೇಶದ ಜನರು ಕಾಯಕದಿಂದ ಕೆಲವೇ ವರ್ಷಗಳಲ್ಲಿ ತಮ್ಮ ದೇಶವನ್ನು ಮತ್ತೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಎದ್ದು ನಿಲ್ಲಿಸಿದರು. ಅಂತೆಯೇ ಬಸವಾದಿ ಪ್ರಮಥರು ಕಾಯಕದಲ್ಲೇ ದೇವರನ್ನು ಕಂಡರು. ಕಾಯಕವೇ ಕೈಲಾಸವೆಂದರು.

ನಮ್ಮ ನಾಡಿನಲ್ಲಿ ಬಸವ ತತ್ವ ತೋರಿಸಿ ಬೆಳೆಸಿದವರು ಅಕ್ಕ ಅನ್ನಪೂರ್ಣತಾಯಿ. ಅವರ ಕಾರ್ಯ ಲಿಂಗಾಯತ ಮಹಾ ಮಠದಿಂದ ನಡೆಯುತ್ತಿದೆ ಎಂದರು.

ಸಾನಿಧ್ಯ ವಹಿಸಿದ್ದ ಪ್ರಭುದೇವ ಸ್ವಾಮೀ ಮಾತನಾಡಿ, ಹಸಿದವರಿಗೆ ಅನ್ನವನಿಕ್ಕುವುದೇ ನಿಜವಾದ ಧರ್ಮ. ಹಸಿದವರ ಮೂಲಕ ದೇವರು ಉಣ್ಣುತ್ತಾನೆ. ಜಗತ್ತಿನಲ್ಲಿ ಯಾರೂ ಹಸಿವಿನಿಂದ ಬಳಲಬಾರದೆಂಬುದು ಬಸವಾದಿ ಶರಣರ ಆಶಯವಾಗಿತ್ತು ಎಂದು ತಿಳಿಸಿದರು.

ಶರಣರು ಜೀವ ಕಾರುಣ್ಯ ಉಳ್ಳವರಾಗಿದ್ದರು. ದೀನರು, ಶೋಷರು, ಕೆಳಗೆ ಬಿದ್ದವರಲ್ಲಿ ದೇವರನ್ನು ಕಂಡರು. ಬಸವಣ್ಣನವರು ಅಂತರಂಗ ಶುದ್ಧಿಗೆ ಮಹತ್ವ ನೀಡಿದರು. ಬದುಕಿನಲ್ಲಿ ಉಡುವ ಬಟ್ಟೆಗಿಂತ ನಡೆವ ಬಟ್ಟೆ ಮುಖ್ಯ. ನಡೆ-ನುಡಿ ಸರಿಯಾಗಿದ್ದರೆ ಜೀವನ ಆನಂದಮಯ. ಅದಕ್ಕಾಗಿ ಹಿಡಿದ ಆಚಾರ ಕೊನೆ ಮುಟ್ಟಿಸಬೇಕು. ಅರಿವು-ಆಚಾರಗಳ ಬುನಾದಿ ಮೇಲೆ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ಸಂಕಲ್ಪ- ವಿಕಲ್ಪಗಳನ್ನು ಅಳಿಸಿಕೊಂಡು ಸತ್ಯದ ದಾರಿಯಲ್ಲಿ ಸಾಗಬೇಕು ಎಂದರು.

ಅಮೆರಿಕ ಪ್ರವಾಸ ಮಾಡಿ ಬಂದ ಮಲ್ಲಮ್ಮ ಚಂದ್ರಶೇಖರ ಹೆಬ್ಬಾಳೆ, ವಿಶೇಷ ಸೇವೆಗೈದ ಪ್ರಕಾಶ ಮಠಪತಿ ಹಾಗೂ ಮಾಣಿಕಪ್ಪ ಗೋರನಾಳೆ ಅವರನ್ನು ಸನ್ಮಾನಿಸಲಾಯಿತು. ಉದ್ಯಮಿ ಚಂದ್ರಶೇಖರ ಹೆಬ್ಬಾಳೆ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ರಮೇಶ ಮಠಪತಿ ಪ್ರಾಸ್ತಾವಿಕ ಮಾತನಾಡಿದರು.

ಚನ್ನಬಸವ ಹಂಗರಗಿ ಅಧ್ಯಕ್ಷತೆ ವಹಿಸಿದ್ದರು. ನೀಲಮ್ಮನ ಬಳಗದ ಜಗದೇವಿ ಶಾಂತಕುಮಾರ ಪನಸಾಲೆ ಸಮ್ಮುಖ ವಹಿಸಿದ್ದರು. ಶ್ಯಾಮಲಾ ಎಲಿ, ಸಿದ್ದಮ್ಮ ಮಠಪತಿ ವಚನ ಗಾಯನ ಮಾಡಿದರು. ವನಿತಾ ಚಂದ್ರಕಾಂತ ಸೋಶೆಟ್ಟಿ ಭಕ್ತಿ ದಾಸೋಹಗೈದರು. ಶಿಲ್ಪಾ ಮಜಗೆ ಸ್ವಾಗತಿಸಿದರು.