ಗಂಗಾವತಿ: ಸಂಪಾದಕ ಮತ್ತು ಲೇಖಕ ಬಸವರಾಜ ಸ್ವಾಮಿ ಅವರು ಬರೆದ ‘ಬಸವಗೀತೆ’ ಪುಸ್ತಕ ಬಿಡುಗಡೆ ಸಮಾರಂಭ ಜಯನಗರದ ಗಂಗಾಧರೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಬಿಡುಗಡೆ ಮಾಡಿದರು. ಈ ವೇಳೆ ಮಾತನಾಡಿದ ಅವರು, ಬಸವ ಗೀತೆಗಳಲ್ಲಿ ವಿಶ್ವ ಮಾನವ ಬಸವಣ್ಣನವರ ವಚನಗಳ ಮೇಲೆ ವಿಶ್ಲೇಷಣೆ ನಡೆಸಿ ಅವುಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಬಸವರಾಜ ಸ್ವಾಮಿ ಅವರ ‘ಬಸವಗೀತೆ’ (9 ಗುಚ್ಛ ) ಪುಸ್ತಕ ತನು, ಮನ ಹಾಗೂ ಅರಿವು ಎಂಬ ಮೂರು ತತ್ವಗಳ ಮೇಲೆ ನಿಂತಿವೆ. ಜ್ಞಾನಕ್ಕಿಂತ ಅರಿವು ಕಡೆ ಹೆಚ್ಚು ಒಲವು ಹೊಂದಿದ್ದಾರೆ. ಈ ಕೃತಿಯು ಬಸವಣ್ಣವರ ವಿಚಾರಧಾರೆಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಮಹತ್ವದ ಕಾರ್ಯ ಮಾಡಿದ್ದಾರೆ ಎಂದರು.ಸಂಪಾದಕ, ‘ಬಸವಗೀತೆ’ ಗ್ರಂಥ ರಚನಕಾರರಾದ ಬಸವರಾಜ ಸ್ವಾಮಿ ಮಾತನಾಡಿ, 12ನೇ ಶತಮಾನದ ಬಸವಣ್ಣ ಸೇರಿದಂತೆ ಅನುಭವ ಮಂಟದಲ್ಲಿನ ವಿವಿಧ ಶರಣರ ವಚನಗಳನ್ನು ಕೇವಲ ಕೇಳಿದರೆ, ಚಪ್ಪಾಳೆ ತಟ್ಟಿದರೆ ಸಾಲದು. ವಚನಗಳಲ್ಲಿರುವ ರಹಸ್ಯವನ್ನು ಕೇಳಿ, ಅದನ್ನು ಪ್ರಸಾದ ಮಾಡಿಕೊಂಡು ಜೀರ್ಣಿಸಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಡಾ. ಶಿವರಾಜ ಗುರಿಕಾರ, ಪ್ರಾಚಾರ್ಯ ಡಾ. ಶರಣಬಸಪ್ಪ ಕೋಲ್ಕಾರ, ಡಾ. ರಾಜಶೇಖರ ನಾರನಾಳ, ಸಾಹಿತಿಗಳಾದ ರುದ್ರಮ್ಮ ಹಾಸಿನಾಳ, ಪವನಕುಮಾರ ಗುಂಡೂರು, ಎ.ಕೆ. ಮಹೇಶಕುಮಾರ, ನಾಗಭೂಷಣ ಅರಳಿ, ಡಾ. ಬಸವರಾಜ ಗೌಡನಭಾವಿ, ಡಾ. ಶಿವಕುಮಾರ ಮಾಲಿಪಾಟೀಲ್ ಭಾಗವಹಿಸಿದ್ದರು.ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಮಾಲಿಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕಾಧ್ಯಕ್ಷ ರುದ್ರೇಶ ಆರ‍್ಹಾಳ್, ರುದ್ರಗೌಡ ಪಾಟೀಲ್, ಸೋಮಶೇಖರ ಕಂಪ್ಲಿ ಉಪಸ್ಥಿತರಿದ್ದರು.