ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಪಟ್ಟಣದಲ್ಲಿ ಸೋಮವಾರ ಬಸವ ಜಯಂತಿ ಮೆರವಣಿಗೆಗೆ ಬಸವೇಶ್ವರ ಕಂಚಿನ ಮೂರ್ತಿಗೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಬಸವ ಜಯಂತಿಗೆ ಚಾಲನೆ ನೀಡಿದರು.ಪಟ್ಟಣದ ಮಡಹಳ್ಳಿ ರಸ್ತೆಯ ಜೆಎಸ್‌ಎಸ್ ಅನುಭವ ಮಂಟಪದ ಬಳಿ ಬೆಳ್ಳಿ ರಥದಲ್ಲಿ ಕೂರಿಸಿದ್ದ ಕಂಚಿನ ಬಸವಣ್ಣನ ಮೂರ್ತಿಗೆ ಸೋಮಹಳ್ಳಿ ಶೀಲಾ ಮಠಾಧೀಶ ಸಿದ್ದಮಲ್ಲಸ್ವಾಮೀಜಿ ಸಮ್ಮುಖದಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ಬಸವ ಜಯಂತಿಗೆ ಚಾಲನೆ ನೀಡಿ,ಕೆಲ ದೂರ ಮೆರವಣಿಗೆಗೆ ಭಾಗವಹಿಸಿದರು.ಬಳಿಕ ವಿವಿಧ ಕಲಾ ತಂಡಗಳೊಂದಿಗೆ ಮಡಹಳ್ಳಿ ರಸ್ತೆಯ ಮೂಲಕ ಮೈಸೂರು-ಊಟಿ ರಸ್ತೆ, ಹಳೇ ಬಸ್ ನಿಲ್ದಾಣದ, ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ, ಟಿಪ್ಪು ಸರ್ಕಲ್, ಚಾಮರಾಜನಗರ ರಸ್ತೆ ಮೂಲಕ ಮತ್ತೆ ಮೈಸೂರು-ಊಟಿ ರಸ್ತೆ ಮೂಲಕ ಮೆರವಣಿಗೆ ಸಾಗಿ ಸೋಮೇಶ್ವರ ವಿದ್ಯಾರ್ಥಿನಿಲಯದಲ್ಲಿ ಕೊನೆಗೊಂಡಿತು.
ಮೆರವಣಿಗೆಗೆ ಚಾಲನೆ ನೀಡುವ ಸಮಯದಲ್ಲಿ ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್,ಜಿಪಂ ಮಾಜಿ ಉಪಾಧ್ಯಕ್ಷ ಕೆ.ಎಸ್.ಮಹೇಶ್,ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ನಟೇಶ್,ಅಖಿಲ ಭಾರತ ವೀರಶೈವ ಮಹಾಸಭಾದ ಯುವ ಘಟಕದ ಅಧ್ಯಕ್ಷ ಚನ್ನಮಲ್ಲೀಪುರ ಬಸವಣ್ಣ,ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಹಂಗಳ ನಂದೀಶ್ ಹಾಗು ಚನ್ನಂಜಯ್ಯನಹುಂಡಿ ಡಾ.ಮಲ್ಲು ಸೇರಿದಂತೆ ಗೋಪಾಲಪುರ ಶ್ರೀಗಳು ಸೇರಿದಂತೆ ಸಾವಿರಾರು ಮಂದಿ ಇದ್ದರು.ಮೆರವಣಿಗೆಯಲ್ಲಿ ನೂರಾರು ಮಂದಿ ಯುವಕರು ಕುಣಿದು ಕುಪ್ಪಳಿಸುವುದನ್ನು ಕಂಡ ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಕೂಡ ಕೆಲ ಕಾಲ ಕೈ ಮೇಲೆತ್ತಿ ಡಿಜೆ ಸದ್ದಿಗೆ ಕುಣಿದರು.ಗಮನ ಸೆಳೆದ ಕೇಸರಿ ಪೇಟಾ: ಬಸವ ಜಯಂತಿ ಮೆರವಣಿಗೆ ಉದ್ಘಾಟನಾ ಸಮಯದಲ್ಲಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಸೇರಿ ಸ್ಥಳದಲ್ಲಿದ್ದ ಪ್ರಮುಖರು ಕೇಸರಿ ಪೇಟಾ ಗಮನ ಸೆಳೆಯಿತು. ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಅವರು ಕೇಸರಿ ಪೇಟಾ ಹಾಕಿದ್ದು ಇದೇ ಮೊದಲು ಅಲ್ಲದೆ ಶಾಸಕರ ಜೊತೆಯಲ್ಲಿದ್ದ ಮುಖಂಡರು ಕೂಡ ಕೇಸರಿ ಪೇಟಾ ಹಾಕಿಕೊಂಡರೆ ಮಾಜಿ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಕೇಸರಿ ಹೊಸದಲ್ಲ, ಹಿಂದೆಯಲ್ಲ ಹಾಕಿದ್ದರು.ಪೊಲೀಸರ ಮುಂದೆಯೇ ಡಿಜೆ ಸದ್ದು: ಜಯಂತಿ,ಮೆರವಣಿಗೆ, ಗಣಪತಿ ಕಾರ್ಯಕ್ರಮಗಳಿಗೆ ಸ್ಥಳೀಯ ಪೊಲೀಸರು ಡಿಜೆ ಹಾಕಲು ಅನುಮತಿ ನೀಡಿರಲಿಲ್ಲ. ಬಸವ ಜಯಂತಿಗೆ ಪೊಲೀಸರು ಅನುಮತಿ ನೀಡಿ, ಪೊಲೀಸರ ಮುಂದೆಯೇ ಭಾರಿ ಸದ್ದು ಮಾಡಿದೆ. ಪಟ್ಟಣದಲ್ಲಿ ಈ ಹಿಂದೆ ನಡೆದ ಕೆಲ ಜಯಂತಿಗಳಲ್ಲಿ ಡಿಜೆಗೆ ಸ್ಥಳೀಯ ಪೊಲೀಸರು ಅವಕಾಶ ನೀಡಿರಲಿಲ್ಲ.ಸುಪ್ರೀಂ ಕೋರ್ಟ್ ಆದೇಶವಿದೆ ಎಂದು ಹೇಳಿ, ಡಿಜೆಗೆ ಅವಕಾಶ ನೀಡದ ಪೊಲೀಸರು ಹೀಗೇಕೆ ಅವಕಾಶ ಮಾಡಿ ಕೊಟ್ಟಿದ್ದಾರೆ ಎಂದು ಪ್ರಶ್ನೆಯಾಗಿದೆ. ಮೆರವಣಿಗೆ ಸಾಗುವ ದಾರಿಯ ಬಾಲಕಿಯರ ಸರ್ಕಾರಿ ಕಾಲೇಜು,ದೊಡ್ಡಹುಂಡಿ ಭೋಗಪ್ಪ ಕಾಲೇಜು, ಮೈಸೂರು-ಊಟಿ ಹೆದ್ದಾರಿಯ ಊಟಿ ಶಾಲೆ,ಕಿತ್ತೂರು ರಾಣಿ ಚೆನ್ನಮ್ಮ ರಸ್ತೆಯ ಸರ್ಕಾರಿ ಶಾಲೆ(ಗಣಪತಿ ಸ್ಕೂಲ್)ಯಲ್ಲಿದ್ದ ಮಕ್ಕಳಿಗೆ ಡಿಜೆ ಸೌಂಡ್ ಡಿಸ್ಟರ್ರ್ಬ್ ಆಗಿದೆ. ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ರಸ್ತೆ ತುಂಬಾ ಕಿರಿದಾಗಿದೆ ಈ ರಸ್ತೆಯಲ್ಲಿ ಡಿಜೆ ಸೌಂಡಿಗೆ ವೃದ್ಧರು ಮಕ್ಕಳಿಗೆ ಚಿಟ್ಟು ಹಿಡಿಸಿದೆ ಎಂದು ನಿವಾಸಿಯೊಬ್ಬರು ಹೇಳಿದ್ದಾರೆ.ರಸ್ತೆ ಸಂಚಾರ ಅಸ್ತವ್ಯಸ್ತ: ಪಟ್ಟಣದಲ್ಲಿ ಬಸವ ಜಯಂತಿ ಮೆರವಣಿಗೆ ಸಾಗುವ ಮೈಸೂರು-ಊಟಿ ಹೆದ್ದಾರಿಯಲ್ಲಿ ತಾಸು ಗಟ್ಟಲೇ ವಾಹನಗಳ ನಿಂತ ಕಾರಣ ಮೈಸೂರು-ಊಟಿ ಹಾಗು ಗುಂಡ್ಲುಪೇಟೆ-ಕೇರಳ ರಸ್ತೆಯಲ್ಲಿ ಕಿಮಿ ಗಟ್ಟಲೇ ವಾಹನಗಳು ಸಾಲು ಗಟ್ಟಿ ನಿಂತಿದ್ದವು. ಬಸವ ಜಯಂತಿಗೆ ಪಟ್ಟಣದ ಜನರ ವಿರೋಧವಿಲ್ಲ ಆದರೆ ಜಯಂತಿಯ ಮೆರವಣಿಗೆ ಸಾಗುವ ದಾರಿ ರಾಷ್ಟ್ರೀಯ ಹೆದ್ದಾರಿಯಾಗಿದೆ.ನೂರಾರು ವಾಹನಗಳ ನಿಂತು ನಿಂತು ಕಾದು ಹೋಗುವ ಪರಿಸ್ಥಿಗೆ ಪೊಲೀಸರು ಅವಕಾಶ ಕೊಟ್ಟಿದ್ದಾರೆ ಇದು ಸರೀನಾ ಎಂದು ಪ್ರವಾಸಿಗ ಕೇರಳದ ಜಾನ್ ಪ್ರಶ್ನಿಸಿದ್ದಾರೆ.
ಪೊಲೀಸರಿಂದ ತಾರತಮ್ಯವೇಕೆ?ಪಟ್ಟಣದಲ್ಲಿ ನಡೆದ ಬಸವ ಜಯಂತಿಗೆ ಪೊಲೀಸರು ಡಿಜೆಗೆ ಅವಕಾಶ ನೀಡಿದ್ದಾರೆ ಆದರೆ ಈ ಹಿಂದೆ ನಡೆದ ಇತರೆ ಜಯಂತಿಗಳು ಹಾಗು ಗಣಪತಿ ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಿಸಿದ್ದಾರೆ, ಪೊಲೀಸರೇಕೆ ತಾರತಮ್ಯ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. ಪಟ್ಟಣದಲ್ಲಿ ಈ ಹಿಂದೆ ನಡೆದ ಇತರೆ ಮಹಾತ್ಮರ ಜಯಂತಿ ಕಾರ್ಯಕ್ರಮಗಳಿಗೆ ಡಿಜೆ ಹಾಕಲು ಅವಕಾಶ ನೀಡಿಲ್ಲ, ಕಳೆದ ವರ್ಷದ ಗಣೇಶ ಹಬ್ಬದಲ್ಲಿ ಗಣೇಶನ ವಿಸರ್ಜನೆ ಮಾಡುವ ಮೆರವಣಿಗೆಗೂ ನಿರಾಕರಿಸಿದ್ದರು. ಸೋಮವಾರ ನಡೆದ ಬಸವ ಜಯಂತಿಗೇಕೆ ಡಿಜೆಗೆ ಪೊಲೀಸರು ಅವಕಾಶ ಮಾಡಿ ಕೊಟ್ಟಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂಬುದು ಜನರ ಆಗ್ರಹ.