ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಾದ್ಯಂತ ಜನತೆ ಬಸವ ಜಯಂತಿಯನ್ನು ಅತ್ಯಂತ ಸಂಭ್ರಮ, ಸಡಗರ ಮತ್ತು ಭಕ್ತಿಪೂರ್ವಕವಾಗಿ ಆಚರಿಸಿದರು. ಶಿವಮೊಗ್ಗ ನಗರದ ಬಸವ ಕೇಂದ್ರದಲ್ಲಿ ಬಸವ ಜಯಂತಿ ಆಚರಿಸಲಾಯಿತು. ವೆಂಕಟೇಶ ನಗರದ ಪ್ರಮುಖ ರಸ್ತೆಗಳಲ್ಲಿ ಬಸವೇಶ್ವರರ ಭಾವಚಿತ್ರ, ಪುತ್ಥಳಿಯ ಪಲ್ಲಕ್ಕಿ ಉತ್ಸವವನ್ನು ಅದ್ಧೂರಿಯಾಗಿ ನಡೆಸಲಾಯಿತು.

ಬಸವೇಶ್ವರ ಜಯಂತಿ ವಿನೋಬ ನಗರದ ಶಿವಾಲಯ, ಗಾಂಧಿ ಬಜಾರಿನ ಬಸವೇಶ್ವರ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು.

ಅದ್ಧೂರಿ ಮೆರವಣಿಗೆ: ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿಯ ಅಂಗವಾಗಿ ಶಿವಮೊಗ್ಗ ನಗರದಲ್ಲಿ ಅದ್ಧೂರಿ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸರ್ಕಾರದ ಸಹಯೋಗದೊಂದಿಗೆ ಸಮಾಜವು ಅತ್ಯಂತ ಸಂಭ್ರಮದಿಂದ ಕಾರ್ಯಕ್ರಮ ರೂಪಿಸಿದೆ. ನಗರದ ಶ್ರೀ ಬಸವೇಶ್ವರ ದೇವಸ್ಥಾನದಿಂದ ರಾಜಬೀದಿ ಉತ್ಸವ ಆರಂಭಗೊಂಡು ಮೆರವಣಿಗೆಯು ಗಾಂಧಿ ಬಜಾರ್, ನೆಹರೂ ರಸ್ತೆ, ಗೋಪಿ ವೃತ್ತ ಹಾಗೂ ಮಹಾವೀರ ವೃತ್ತದ ಮೂಲಕ ಸಾಗಿ ಬಸವೇಶ್ವರ ವೃತ್ತ ತಲುಪಿತು. ಅಲ್ಲಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಮೆರವಣಿಗೆಯು ಕುವೆಂಪು ರಂಗಮಂದಿರ ತಲುಪಿತು. ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿ 20ಕ್ಕೂ ಹೆಚ್ಚು ಅಲಂಕೃತ ಎತ್ತಿನ ಗಾಡಿಗಳು ಹಾಗೂ ವಿವಿಧ ಕಲಾತಂಡಗಳು ಪಾಲ್ಗೊಂಡಿದ್ದವು. ಜಾನಪದ ಕಲೆಗಳ ವೈಭವದೊಂದಿಗೆ ಬಸವಣ್ಣನವರ ತತ್ವಗಳನ್ನು ಸಾರಲಾಯಿತು.


ನಮ್ಮೂರ ಬಳಗದಿಂದ ಆರೋಗ್ಯ ಶಿಬಿರ

ಶಿವಮೊಗ್ಗ: ನಮ್ಮೂರ ಬಳಗದ ವತಿಯಿಂದ ಅಲ್ಲಮಪ್ರಭು ಮೈದಾನ(ಫ್ರೀಡಂ ಪಾರ್ಕ್)ದಲ್ಲಿ ವಿಶ್ವಗುರು, ಸಾಂಸ್ಕೃತಿಕ ನಾಯಕ ಬಸವ ಜಯಂತಿಯ ಅಂಗವಾಗಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸಿಹಿ ವಿತರಿಸಿ ಆಚರಿಸಲಾಯಿತು.

ಬಸವ ಜಯಂತಿ ಅಂಗವಾಗಿ ಶಿವಮೊಗ್ಗ ಕಿಡ್ನಿ ಆಸ್ಪತ್ರೆ ಮತ್ತು ವಾಸನ್ ಕಣ್ಣಿನ ಆಸ್ಪತ್ರೆ ಸಹಯೋಗದೊಂದಿಗೆ ಆರೋಗ್ಯ ಹಾಗೂ ಕಣ್ಣಿನ ತಪಾಸಣಾ ಶಿಬಿರ ನಡೆಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಮ್ಮೂರ ಬಳಗದ ಸಂಚಾಲಕ ಎಚ್.ಪಿ ಗಿರೀಶ್, ೧೨ನೇ ಶತಮಾನದಲ್ಲಿಯೇ ಸಮ ಸಮಾಜದ ನಿರ್ಮಾಣಕ್ಕೆ ಅನುಭವ ಮಂಟಪದ ಮೂಲಕ ಸಂವಿಧಾನದ ಪರಿಕಲ್ಪನೆ, ಶಿಕ್ಷಣ, ದಾಸೋಹ ಸೇವೆ ಇಂದಿಗೂ ನಮಗೆಲ್ಲರಿಗೂ ಸ್ಪೂರ್ತಿದಾಯಕ. ವಚನ ಬಂಡಾರದ ಮುಖಾಂತರ ವಿಶ್ವಗುರು ಬಸವಣ್ಣನವರು ಮೂಡಿಸಿದ ವಚನ ಕ್ರಾಂತಿಯು ಇಡೀ ಪ್ರಪಂಚಕ್ಕೆ ಅತ್ಯವಶ್ಯಕವಾಗಿದೆ ಎಂದರು.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಿ.ವಿ.ಎಸ್ ಕಾಲೇಜಿನ ನಿವೃತ್ತ ಉಪನ್ಯಾಸಕ ನಾಗರಾಜ್ ರಾವ್, ವಚನಗಳ ಮೂಲಕ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ, ಮೇಲು-ಕೀಳು ಎಂಬ ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ಅವಿರತವಾಗಿ ಶ್ರಮಿಸಿದ ಕಾಯಕ ಯೋಗಿ ಬಸವಣ್ಣನವರ ಕಾರ್ಯ ಹಾಗೂ ಆದರ್ಶಗಳು ನಮಗೆ ಸದಾ ಸ್ಪೂರ್ತಿ. ಅದರಂತೆ ನಮ್ಮೂರ ಬಳಗದಿಂದ ಬಸವೇಶ್ವರ ಜಯಂತಿ ಅಂಗವಾಗಿ ಆರೋಗ್ಯ ಶಿಬಿರ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ನಮ್ಮೂರ ಬಳಗದ ಪ್ರಧಾನ ಸಂಚಾಲಕ ಕೆ.ರಂಗನಾಥ್, ಗೌರವ ಸಂಚಾಲಕರಾದ ನಾಗರಾಜ್ ಕಂಕಾರಿ, ಸಿ ರವಿ, ಸಂಚಾಲಕರಾದ ಕೆ.ಆರ್. ಸುರೇಶ್, ರಾಜೇಶ್ ಮಂದಾರ, ಟಿ. ಗುರುಪ್ರಸಾದ್, ಆರ್ ಕಿರಣ್, ಎಂ ರಾಕೇಶ್, ಕೇಬಲ್ ಲೋಕೇಶ್, ರಾಘವೇಂದ್ರ ರಾವ್, ಸುಬ್ರಮಣಿ, ಎಸ್ ಬಸವರಾಜ್, ಮನ್ವಿಕ್ ಜೈನ್, ಎಮ್ ಸುಹಾಸ್, ಜಯಪ್ರಕಾಶ್, ಮುರಳಿ ಸಣ್ಣಕ್ಕಿ, ಕೇಶವಮೂರ್ತಿ, ಶಿ.ವಿ. ಯೋಗೀಶ್, ಭವಾನಿರಾವ್, ನಂದನ್, ಕೇಶವ ಸಿಗೆಹಟ್ಟಿ, ಸಂದೇಶ್ ಇದ್ದರು.