ಕನ್ನಡಪ್ರಭ ವಾರ್ತೆ ವಿಜಯಪುರ ವಿಶ್ವಗುರು ಜಗಜ್ಯೋತಿ ಬಸವೇಶ್ವರರ 893ನೇ ಜಯಂತಿ ಉತ್ಸವ-2026 ಅನ್ನು ಏಪ್ರಿಲ್ 19 ಹಾಗೂ 20 ರಂದು ಎರಡು ದಿನಗಳ ಕಾಲ ಬಸವ ಜಯಂತಿ ಉತ್ಸವ ಸಮಿತಿ, ಜಿಲ್ಲಾಡಳಿತದೊಂದಿಗೆ ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದು ಬಸವ ಜಯಂತಿ ಉತ್ಸವ ಸಮಿತಿಯ ವಿ.ಸಿ.ನಾಗಠಾಣ ಹೇಳಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ವಿಶ್ವಗುರು ಜಗಜ್ಯೋತಿ ಬಸವೇಶ್ವರರ 893ನೇ ಜಯಂತಿ ಉತ್ಸವ-2026 ಅನ್ನು ಏಪ್ರಿಲ್ 19 ಹಾಗೂ 20 ರಂದು ಎರಡು ದಿನಗಳ ಕಾಲ ಬಸವ ಜಯಂತಿ ಉತ್ಸವ ಸಮಿತಿ, ಜಿಲ್ಲಾಡಳಿತದೊಂದಿಗೆ ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದು ಬಸವ ಜಯಂತಿ ಉತ್ಸವ ಸಮಿತಿಯ ವಿ.ಸಿ.ನಾಗಠಾಣ ಹೇಳಿದರು.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲ ವರ್ಗಗಳ ತರುಣರು, ಹಿರಿಯರು, ಮಹಿಳೆಯರು ಸೇರಿ ನಗರದ ಕಂದಗಲ್ಲ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ನಗರ ಶಾಸಕ ಬಸನಗೌಡ ಪಾಟೀಲ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಮುಖಂಡರು ಭಾಗವಹಿಸಲಿದ್ದಾರೆ. ಏ.19ರಂದು ಬೆಳಗೆ 9.30 ರಿಂದ 11ರ ವರೆಗೆ ಮಕ್ಕಳಿಂದ ವಚನ ಕಂಠಪಾಠ ಮತ್ತು ಮಕ್ಕಳಿಂದ ಕವಿಗೋಷ್ಠಿ ಇರಲಿದೆ. ಬೆಳಗ್ಗೆ 11 ರಿಂದ 1.30ರ ವರೆಗೆ ಯುವ ಕವಿಗೋಷ್ಠಿ, ಮಧ್ಯಾಹ್ನ 3ಕ್ಕೆ ಮುಖ್ಯ ವೇದಿಕೆ ಕಾರ್ಯಕ್ರಮ ಜರುಗಲಿದೆ. ಸಾಯಂಕಾಲ 6ರಿಂದ 9.30ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ, ವಚನಗಾಯನ, ನೃತ್ಯ, ಜಾನಪದ ಮತ್ತು ಭಗವಂತನ ಮರಣ ನಾಟಕ ಪ್ರದರ್ಶನವಿದೆ ಎಂದರು.ಏ.20ರಂದು ಬೆಳಗೆ 7ಕ್ಕೆ ಬಸವನ ಬಾಗೇವಾಡಿಯಿಂದ ಮ್ಯಾರಥಾನ್ ಮೂಲಕ ಬರುವ ಬಸವಜ್ಯೋತಿ ಸ್ವಾಗತಿಸುವುದು. ಬಸವ ಉತ್ಸವ ಸಮಿತಿ ಮತ್ತು ಜಿಲ್ಲಾಡಳಿತದಿಂದ ಬಸವ ಮೂರ್ತಿಗೆ ಪೂಜೆ ನೆರವೇರಿಸುವುದು. ಬೆಳಗ್ಗೆ 9 ರಿಂದ 10ರ ವರಗೆ ಕಾಯಕಯೋಗಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ಮಕ್ಕಳಿಂದ ಯೋಗ ಮತ್ತು ಮಲ್ಲಕಂಬ ಪ್ರದರ್ಶನ 10.30ರಿಂದ 2ರ ವರೆಗೆ ದಕ್ಷಿಣ ಭಾರತದ ವಿವಿಧ ರಾಜ್ಯದ ಮತ್ತು ಜಿಲ್ಲೆಯ ಹಿರಿಯ ಸಾಹಿತಿಗಳಿಂದ ಕಲ್ಯಾಣದ ಕ್ರಾಂತಿ ಬಹುಭಾಷೆಯ ಕವಿಗೋಷ್ಠಿ ನಡೆಯಲಿದೆ.
ಮಧ್ಯಾಹ್ನ 3ರಿಂದ 5ರ ವರೆಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಬಸವ ಜಯಂತಿ ಉತ್ಸವ ಸಮಿತಿ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ ಜಾನಪದ ವಾದ್ಯ ಮೇಳದ ಮೂಲಕ ವಚನಕಟ್ಟು ಮತ್ತು ವಚನ ಪ್ಲೇ ಕಾರ್ಡು ಹಾಗೂ ಶರಣ ಮತ್ತು ಶರಣೆಯರ ಭಾವಚಿತ್ರಗಳ ಮೆರವಣಿಗೆ ನಡೆಯಲಿದೆ.ಸಾಯಂಕಾಲ 5 ರಿಂದ 6.30ರ ವರೆಗೆ ಜಿಲ್ಲಾಡಳಿತ ಮತ್ತು ಬಸವ ಜಯಂತಿ ಉತ್ಸವ ಸಮಿತಿಯ ಮುಖ್ಯ ವೇದಿಕೆ ಕಾರ್ಯಕ್ರಮ ಜರುಗಲಿದೆ. ಸಾಯಂಕಾಲ 6.30 ರಿಂದ 9.30ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ನಾಟಕ ಪ್ರದರ್ಶನ ನಡೆಯಲಿದೆ. ಈ ವೇಳೆ ಬಹುಭಾಷಾ ವಚನಗಳ ವಾಚನ ಕಾರ್ಯಕ್ರಮ ಇರಲಿದೆ ಎಂದರು.
ಸಮಿತಿ ಪದಾಧಿಕಾರಿ ಮಹಾದೇವಿ ಗೋಕಾಕ ಮಾತನಾಡಿ, ಬಸವ ಜಯಂತಿಯಲ್ಲಿ ಎಲ್ಲ ವರ್ಗದ, ಎಲ್ಲ ಸಮಾಜದ ಮಹಿಳೆಯರು ಭಾಗವಹಿಸಲಿದ್ದಾರೆ. ಎಲ್ಲರೂ ಜಾತಿ, ಮತ, ಪಂಥಗಳನ್ನು ಬಿಟ್ಟು ಎಲ್ಲರೂ ಬಸವಣ್ಣನವರ ತತ್ವಗಳನ್ನು ಪಾಲಿಸೋಣ ಎಂದರು.ವಿದ್ಯಾರಾಣಿ ತುಂಗಳ ಮಾತನಾಡಿ, 2 ಸಾವಿರಕ್ಕೂ ಅಧಿಕ ಮಹಿಳೆಯರು ಉತ್ಸವದಲ್ಲಿ ಭಾಗವಹಿಸಲಿದ್ದು, ವಚನ ಕಟ್ಟುಗಳ ಮೆರವಣಿಗೆ ನಡೆಯಲಿದೆ ಎಂದರು.
ಬಸನಗೌಡ ಹರನಾಳ ಮಾತನಾಡಿ, ಬಸವನ ಬಾಗೇವಾಡಿಯಲ್ಲಿ ಈ ಹಿಂದೆ ಬಸವ ಸಂಸ್ಕ್ರತಿ ಉತ್ಸವ ಮಾಡಲಾಗಿತ್ತು. ಅದೇ ರೀತಿ ಇದೀಗ ಬಸವ ಜಯಂತಿ ಉತ್ಸವವನ್ನು ಅದ್ದೂರಿಯಿಂದ ಆಚರಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಮಲ್ಲಕಂಬ, ಯೋಗ ಪ್ರದರ್ಶನಗಳು ಇರಲಿವೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಸಂ.ಗು.ಸಜ್ಜನ, ಘನಶಾಮ ತೋಸನಿವಾಲ, ಎಸ್.ಹೆಚ್.ನಾಡಗೌಡ, ಡಾ.ರವಿಕುಮಾರ ಬಿರಾದಾರ, ಪ್ರಭುಗೌಡ ಪಾಟೀಲ, ಜಂಬುನಾಥ ಕಂಚಾಣಿ, ಶಕುಂತಲಾ ಮೋಸಲಗಿ, ಶಶಿಕಲಾ ಕೊಟಗಿ, ಸಂಗೀತಾ ಪೂಜಾರಿ ಇದ್ದರು.