ಬಸವ ಜಯಂತಿ ಉಗಮ ಸ್ಥಳ ದಾವಣಗೆರೆ ವಿರಕ್ತ ಮಠ

| Published : May 10 2024, 11:49 PM IST

ಸಾರಾಂಶ

ದಾವಣಗೆರೆಯಲ್ಲಿ ಮೊಟ್ಟಮೊದಲ ಬಾರಿಗೆ 1913ರಲ್ಲಿ ಬಸವ ಜಯಂತಿ ಆಚರಿಸಿದ ಹಿನ್ನಲೆಯಲ್ಲಿ ನಗರದ ದೊಡ್ಡಪೇಟೆಯ ವಿರಕ್ತ ಮಠದಲ್ಲಿ ಶುಕ್ರವಾರ ಬಸವ ಕೇಂದ್ರ, ಶಿವಯೋಗಾಶ್ರಮ ಟ್ರಸ್ಟ್, ಲಿಂಗಾಯತ ತರುಣ ಸಂಘದ ಸಹಯೋಗದಲ್ಲಿ 112ನೇ ವರ್ಷದ ಬಸವ ಜಯಂತಿ ಅಂಗವಾಗಿ 108ನೇ ವರ್ಷದ ಬಸವ ಪ್ರಭಾತ್ ಪೇರಿ ನಡೆಯಿತು.

- ಹರ್ಡೇಕರ್ ಮಂಜಪ್ಪನವರ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಬಸವಪ್ರಭು ಶ್ರೀ ಆಶೀರ್ವಚನ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆಯಲ್ಲಿ ಮೊಟ್ಟಮೊದಲ ಬಾರಿಗೆ 1913ರಲ್ಲಿ ಬಸವ ಜಯಂತಿ ಆಚರಿಸಿದ ಹಿನ್ನಲೆಯಲ್ಲಿ ನಗರದ ದೊಡ್ಡಪೇಟೆಯ ವಿರಕ್ತ ಮಠದಲ್ಲಿ ಶುಕ್ರವಾರ ಬಸವ ಕೇಂದ್ರ, ಶಿವಯೋಗಾಶ್ರಮ ಟ್ರಸ್ಟ್, ಲಿಂಗಾಯತ ತರುಣ ಸಂಘದ ಸಹಯೋಗದಲ್ಲಿ 112ನೇ ವರ್ಷದ ಬಸವ ಜಯಂತಿ ಅಂಗವಾಗಿ 108ನೇ ವರ್ಷದ ಬಸವ ಪ್ರಭಾತ್ ಪೇರಿ ನಡೆಯಿತು.

ಬಸವಣ್ಣನವರ ಪುತ್ಥಳಿ, ವಚನ ಗ್ರಂಥಗಳ ಮೆರವಣಿಗೆ, ಜನಜಾಗೃತಿ ಪಾದಯಾತ್ರೆ, ನವಜಾತ ಶಿಶುಗಳಿಗೆ ನಾಮಕರಣ, ಶ್ರೀ ಮೃತ್ಯುಂಜಯ ಅಪ್ಪಗಳು, ಹರ್ಡೇಕರ್ ಮಂಜಪ್ಪನವರ ಸ್ಮರಣೋತ್ಸವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಆಶೀರ್ವಚನ ನೀಡಿ, ಬಸವ ಜಯಂತಿಯ 112ನೇ ವರ್ಷದ ಕಾರ್ಯಕ್ರಮವನ್ನು ಬಸವ ಜಯಂತಿ ಪ್ರಾರಂಭವಾದ ಈ ವಿರಕ್ತ ಮಠದಲ್ಲಿ ಇಂದು ಆಚರಣೆ ಮಾಡಿದೆವು. ಅಂದು ಆರಂಭವಾದ ಈ ಬಸವ ಜಯಂತಿಯನ್ನು ಇಡೀ ವಿಶ್ವಾದ್ಯಂತ ಆಚರಣೆ ಮಾಡಲಾಗುತ್ತಿದೆ. ಗಂಗಾನದಿಯ ಉಗಮ ಸ್ಥಳ ಗಂಗೋತ್ರಿಯಾದರೆ, ಬಸವ ಜಯಂತಿಯ ಉಗಮ ಸ್ಥಳ ದಾವಣಗೆರೆಯ ವಿರಕ್ತ ಮಠವಾಗಿದೆ ಎಂದರು.

ಬಸವಣ್ಣನವರ ತತ್ವಗಳನ್ನು ನಾವೆಲ್ಲರೂ ಆಚರಣೆ ಮಾಡಬೇಕು. ಬಸವ ತತ್ವಗಳನ್ನು ಯಾರು ಬದುಕಿನಲ್ಲಿ ಆಚರಣೆ ಮಾಡುತ್ತಾರೋ ಅಂತಹರ ಮನೆಯಲ್ಲಿ ಜಗಳಗಳು ಇರುವುದಿಲ್ಲ. ಶಾಂತಿ- ನೆಮ್ಮದಿ ಇರುತ್ತದೆ. ಎಲ್ಲರನ್ನೂ ಪ್ರೀತಿ ಮಾಡುವಂತಹ ವಿಶ್ವಕುಟುಂಬ ಭಾವನೆಯನ್ನು ಬಸವಣ್ಣನವರು ಬಿತ್ತಿದ್ದಾರೆ. ಬಸವಣ್ಣ ತಿಳಿಸಿದಂತೆ ಮಾನವರಲ್ಲಿ ದೇವರನ್ನು ಕಾಣಲು ಹೇಳಿದ್ದಾರೆ. ಮಾನವರಲ್ಲಿ ದೇವರನ್ನು ಕಂಡಾಗ ಅಲ್ಲಿ ಜಗಳಗಳು ಇರಲು ಸಾಧ್ಯವಿಲ್ಲ. ಎಲ್ಲ ವರ್ಗದವರಿಗೂ ಸಮಾನತೆಯ ಬದುಕನ್ನು ನೀಡಿದವರು ಬಸವಣ್ಣ ಎಂದರು.

ಈ ಸಂದರ್ಭದಲ್ಲಿ ಕಣಕುಪ್ಪಿ ಮುರುಗೇಶಪ್ಪ, ಹಾಸಬಾವಿ ಕರಿಬಸಪ್ಪ, ಲಂಬಿ ಮುರುಗೇಶ, ಎಸ್.ಓಂಕಾರಪ್ಪ, ಚನ್ನಬಸವ ಶೀಲವಂತ್, ಕುದುರಿ ಉಮೇಶ, ಕುಂಟೋಜಿ ಚನ್ನಪ್ಪ, ಜಾಲಿಮರದ ಕೊಟ್ರೇಶ, ಮಹಾದೇವಮ್ಮ, ಎಂ.ಸಿ.ರೇಖಾ, ಅಕ್ಕಮಹಾದೇವಿ, ಸುಜಾತ, ಬೆಳ್ಳೂಡಿ ಮಂಜುನಾಥ, ಮಹೇಶ ಪಟ್ಟೇದ, ಚಿಂದೋಡಿ ಶಂಭುಲಿಂಗಪ್ಪ, ಮಹಾಲಿಂಗೇಶ, ಕೆ.ಜಿ.ಯಲ್ಲಪ್ಪ, ವಿನಾಯಕ, ವಿರಕ್ತ ಮಠ ಶಾಲೆಯ ರೋಷನ್, ಡಾ.ನಜೀರ್ ಅಹಮದ್, ಕೀರ್ತಿ, ಶರಣಬಸವ, ಕುಮಾರ ಸ್ವಾಮಿ, ಬೆಳ್ಳೂಡಿ ಮಂಜುನಾಥ, ಸಾಲಿಗ್ರಾಮ ಗಣೇಶ ಶೆಣೈ, ಶಶಿಧರ, ಅರುಣ ಇತರರು ಇದ್ದರು.

ಬಸವ ಕಲಾ ಲೋಕದ ಕಲಾವಿದರು ವಚನಗೀತೆಗಳನ್ನು, ಗಂಜಿಗಟ್ಟೆ ಕೃಷ್ಣಮೂರ್ತಿ ಜಾಗೃತಿ ಗೀತೆಗಳನ್ನು ಹಾಡಿದರು. ಮುಸ್ಲಿಂ ಸಮಾಜದ ಯುವಕ ಸಾಧಿಖ್ ಅನ್ನದಾಸೋಹದ ಸೇವೆಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಸವ ತತ್ವ ಪ್ರಚಾರ ಮಾಡಲು ತಯಾರಾದ ಗಣೇಶ, ಷಣ್ಮುಖಪ್ಪ ಸ್ವಾಮೀಜಿಗಳಿಂದ ಬಸವ ತತ್ವ ಪದ್ಧತಿಯಂತೆ ದೀಕ್ಷೆ ಪಡೆದರು.

ಜನಜಾಗೃತಿ ಪಾದಯಾತ್ರೆಯು ವಿರಕ್ತ ಮಠದಿಂದ ಹೊರಟು ಬಕ್ಕೇಶ್ವರ ದೇವಸ್ಥಾನ, ಹಾಸಬಾವಿ ವೃತ್ತ, ಬಸವರಾಜ ಪೇಟೆ, ಕಾಳಿಕಾದೇವಿ ರಸ್ತೆ ಮೂಲಕ ದೊಡ್ಡಪೇಟೆಯ ವಿರಕ್ತ ಮಠ ತಲುಪಿತು.

- - -

ಬಾಕ್ಸ್ ನವಜಾತ ಶಿಶುಗಳಿಗೆ ನಾಮಕರಣ

ದಾವಣಗೆರೆ: ದಾವಣಗೆರೆಯಲ್ಲಿ ಮೊಟ್ಟಮೊದಲ ಬಾರಿಗೆ 1913ರಲ್ಲಿ ಬಸವ ಜಯಂತಿ ಆಚರಿಸಲಾಗಿತ್ತು. ಈ ಹಿನ್ನೆಲೆ ನಗರದ ದೊಡ್ಡಪೇಟೆಯ ವಿರಕ್ತ ಮಠದಲ್ಲಿ ಶುಕ್ರವಾರ ಬಸವ ಜಯಂತಿಯಂದು ಶ್ರೀ ಬಸವಪ್ರಭು ಸ್ವಾಮೀಜಿ ನೇತೃತ್ವದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ 15 ನವಜಾತ ಶಿಶುಗಳಿಗೆ ಬಸವಣ್ಣ, ಅಕ್ಕಮಹಾದೇವಿ, ಚನ್ನಬಸವ, ಅಲ್ಲಮಪ್ರಭು, ಜಯದೇವ, ಬಸವರಾಜ, ದಾನೇಶ್ವರಿ, ಸತ್ಯಕ್ಕ, ಶಿವಯೋಗಿ, ನೀಲಾಂಬಿಕೆ, ಗಂಗಾಂಬಿಕೆ, ಪ್ರಭುದೇವ ಸೇರಿದಂತೆ ಅನೇಕ ಶರಣ, ಶರಣೆಯರ ಹೆಸರುಗಳನ್ನು ನಾಮಕರಣ ಮಾಡಲಾಯಿತು. ಮಗುವಿನ ಪೋಷಕರು, ಭಕ್ತರು, ಬಂಧು ಬಳಗದವರು ಪಾಲ್ಗೊಂಡಿದ್ದರು.- - -

-10ಕೆಡಿವಿಜಿ37ಃ:

ದಾವಣಗೆರೆಯಲ್ಲಿ ಶುಕ್ರವಾರ ಬಸವ ಜಯಂತಿ ಅಂಗವಾಗಿ ಬಸವ ಪ್ರಭಾತ್ ಪೇರಿಯ ಬಸವಣ್ಣನವರ ಪುತ್ಥಳಿ, ವಚನ ಗ್ರಂಥಗಳ ಮೆರವಣಿಗೆ, ಜನಜಾಗೃತಿ ಪಾದಯಾತ್ರೆಗೆ ಶ್ರೀ ಬಸವಪ್ರಭು ಸ್ವಾಮೀಜಿ ಚಾಲನೆ ನೀಡಿದರು. -10ಕೆಡಿವಿಜಿ38ಃ: 15 ನವಜಾತ ಶಿಶುಗಳಿಗೆ ಶರಣ, ಶರಣೆಯರ ಹೆಸರುಗಳನ್ನು ನಾಮಕರಣಗೊಳಿಸಲಾಯಿತು.