ಬಸವಣ್ಣನವರು ಕಾಯಕ, ದಾಸೋಹ, ಸಮಾನತೆ ಮತ್ತು ಮಾನವೀಯತೆಯನ್ನು ಸಾರಿದ ಮಹಾನ್ ಚಿಂತಕರು. ಅವರ ಕುರಿತು ಆಧಾರರಹಿತ ಹೇಳಿಕೆಗಳು ಸಮಾಜದ ಶಾಂತಿ ಹಾಗೂ ಸಾಮರಸ್ಯಕ್ಕೆ ಧಕ್ಕೆ ತರುತ್ತವೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ಹಳಿಯಾಳ: ವಿಶ್ವಗುರು ಬಸವಣ್ಣನವರ ಕುರಿತು ಬಸವ ಮಂಟಪ ಕೃತಿ ಹಾಗೂ ಅದಕ್ಕೆ ಸಂಬಂಧಿಸಿದ ಸಂದರ್ಶನಗಳಲ್ಲಿ ವ್ಯಕ್ತವಾಗಿರುವುದಾಗಿ ಹೇಳಲಾಗುವ ಹೇಳಿಕೆಗಳು ಸಮುದಾಯದ ಭಾವನೆಗೆ ನೋವುಂಟು ಮಾಡಿವೆ ಎಂದು ಆರೋಪಿಸಿ, ಮಂಗಳವಾರ ಪಟ್ಟಣದಲ್ಲಿ ವೀರಶೈವ ಲಿಂಗಾಯತ ಸಮುದಾಯದವರು ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ನೇತೃತ್ವದಲ್ಲಿ ಮೆರವಣಿಗೆ ನಡೆದು ತಾಲೂಕಾಡಳಿತ ಸೌಧ ತಲುಪಿತು. ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ಗ್ರೇಡ್- 2 ತಹಸೀಲ್ದಾರ್ ರವೀಂದ್ರ ನೇಸರಗಿ ಅವರಿಗೆ ಸಲ್ಲಿಸಲಾಯಿತು.

ಬಸವಣ್ಣನವರು ಕಾಯಕ, ದಾಸೋಹ, ಸಮಾನತೆ ಮತ್ತು ಮಾನವೀಯತೆಯನ್ನು ಸಾರಿದ ಮಹಾನ್ ಚಿಂತಕರು. ಅವರ ಕುರಿತು ಆಧಾರರಹಿತ ಹೇಳಿಕೆಗಳು ಸಮಾಜದ ಶಾಂತಿ ಹಾಗೂ ಸಾಮರಸ್ಯಕ್ಕೆ ಧಕ್ಕೆ ತರುತ್ತವೆ ಎಂದು ಮನವಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ಬಸವ ಮಂಟಪ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸರ್ಕಾರ ಸಂಪುಟ ನಿರ್ಧರಿಸಿರುವುದಾಗಿ ವರದಿಯಾಗಿರುವುದನ್ನು ಮನವಿಯಲ್ಲಿ ಉಲ್ಲೇಖಿಸಿ, ಈ ನಿರ್ಧಾರವನ್ನು ಸ್ವಾಗತಿಸಲಾಗಿದೆ. ಸರ್ಕಾರದ ಅಧಿಕೃತ ಆದೇಶವನ್ನು ಕಾನೂನುಬದ್ಧವಾಗಿ ಜಾರಿಗೊಳಿಸಬೇಕು. ತನಿಖೆ ಯಾವುದೇ ಪ್ರಭಾವಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಲೇಖಕ, ಪ್ರಕಾಶಕರು ಸೇರಿ ಸಂಬಂಧಪಟ್ಟವರ ಹೊಣೆಗಾರಿಕೆ ಪರಿಶೀಲಿಸಿ, ಕಾನೂನು ಉಲ್ಲಂಘನೆ ಕಂಡುಬಂದಲ್ಲಿ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಯಾವುದೇ ಪ್ರತಿಭಟನೆ, ಸಭೆ ಅಥವಾ ಸಾರ್ವಜನಿಕ ಪ್ರಕ್ರಿಯೆಯು ಶಾಂತಿಯುತವಾಗಿ ನಡೆಯುವಂತೆ ಹಾಗೂ ಸಾರ್ವಜನಿಕ ಆಸ್ತಿ, ಧಾರ್ಮಿಕ ಕೇಂದ್ರ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಬಸವಣ್ಣನವರ ಜೀವನ ಹಾಗೂ ವಚನಗಳ ಕುರಿತು ದಾಖಲೆ ಆಧರಿತ ಜಾಗೃತಿ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ತಾವು ಸಲ್ಲಿಸಿರುವ ಮನವಿಯು ಯಾವುದೇ ವ್ಯಕ್ತಿಯ ವಿರುದ್ಧದ ವೈಯಕ್ತಿಕ ದ್ವೇಷದಿಂದಲ್ಲ. ಸಂವಿಧಾನಬದ್ಧ ಅಭಿವ್ಯಕ್ತಿ, ಕಾನೂನಿನ ಸಾರ್ವಭೌಮತ್ವ ಹಾಗೂ ಸಾಮಾಜಿಕ ಶಾಂತಿ ಕಾಪಾಡುವ ಉದ್ದೇಶದಿಂದ ಸಲ್ಲಿಸಿರುವುದಾಗಿ ಸ್ಪಷ್ಟಪಡಿಸಲಾಗಿದೆ.

ಮೆರವಣಿಗೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ ಕಿತ್ತೂರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವದೇವ ದೇಸಾಯಸ್ವಾಮಿ, ಬಸವ ಕೇಂದ್ರದ ಪ್ರಮುಖರಾದ ಪ್ರಕಾಶ ಅಂಗಡಿ, ಸುಮಂಗಲಾ ಅಂಗಡಿ, ಮಹಾದೇವಿ ಅಂಗಡಿ, ಪುರಸಭಾ ಮಾಜಿ ಅಧ್ಯಕ್ಷ ಉಮೇಶ ಬೊಳಶೆಟ್ಟಿ, ಕರವೇ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ರವಿ ತೋರಣಗಟ್ಟಿ, ಸುಧಾಕರ ಕುಂಬಾರ, ಅನಿಲ್ ಮುತ್ನಾಳೆ, ಸೋಮೇಶ್ ಹುಂಡೇಕರ, ಶಂಕರ ಕಾಜಗಾರ, ಅಶೋಕ ಮೇಟಿ ಹಾಗೂ ಇತರರು ಇದ್ದರು.