ಬಸವಾದಿ ಪ್ರಮಥರಿಂದ ವಚನ ಸಾಹಿತ್ಯ ಪೋಷಣೆ

| Published : Mar 20 2025, 01:15 AM IST

ಸಾರಾಂಶ

ಮಾದಾರ ಚೆನ್ನಯ್ಯನವರು ಪಲ್ಲವರ ಮಹಾರಾಜ ಕಂಚಿಯ ಕರಿಕಾಲ ಚೋಳನ ಕುದುರೆ ಲಾಯದಲ್ಲಿ ಕುದುರೆಗಳಿಗೆ ಹುಲ್ಲು ತರುವ ಕಾಯಕ ಮಾಡುತ್ತಿದ್ದ ಶಿವನ ಪರಮ ಭಕ್ತನಾಗಿದ್ದರು

ಮುಂಡರಗಿ: 12ನೇ ಶತಮಾನದಲ್ಲಿ ಬಸವಾದಿ ಪ್ರಮಥರು ಅನುಭವ ಮಂಟಪದಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ಸಾಹಿತ್ಯಕ ಚಟುವಟಿಕೆ ಪೋಷಿಸಿದ ಕಾರಣ ವಚನ ಸಾಹಿತ್ಯ ಮೂಡಿ ಬಂತು ಎಂದು ಕೆಸಿಸಿ ಬ್ಯಾಂಕ್‌ ಸಹಾಯಕ ವ್ಯವಸ್ಥಾಪಕ ಎಸ್.ವಿ. ಪಾಟೀಲ ಹೇಳಿದರು.

ಅವರು ಮುಂಡರಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು ಮತ್ತು ಚೈತನ್ಯ ಶಿಕ್ಷಣ ಸಂಸ್ಥೆಯ ಸೌರಭ ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಚೈತನ್ಯ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಶರಣ ಚಿಂತನ ಮಾಲಿಕೆಯ 13ನೇ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಪಾಲ್ಗೊಂಡು ಮಾದಾರ ಚೆನ್ನಯ್ಯನ ಕುರಿತು ಮಾತನಾಡಿದರು.

ಮಾದಾರ ಚೆನ್ನಯ್ಯನವರು ಪಲ್ಲವರ ಮಹಾರಾಜ ಕಂಚಿಯ ಕರಿಕಾಲ ಚೋಳನ ಕುದುರೆ ಲಾಯದಲ್ಲಿ ಕುದುರೆಗಳಿಗೆ ಹುಲ್ಲು ತರುವ ಕಾಯಕ ಮಾಡುತ್ತಿದ್ದ ಶಿವನ ಪರಮ ಭಕ್ತನಾಗಿದ್ದನ್ನು ಎಂದು ವಿವರಿಸಿದರು.

ಕಾರ್ಯಕ್ರಮವನ್ನು ಕ.ರಾ. ಬೆಲ್ಲದ ಮಹಾವಿದ್ಯಾಲಯದ ಪ್ರಾ. ಡಾ.ಡಿ.ಸಿ. ಮಠ ಉದ್ಘಾಟಿಸಿ ಮಾತನಾಡಿ, ಕಲ್ಯಾಣದ ಶರಣರಲ್ಲಿ ಸಾಮಾನ್ಯವಾಗಿ ಬಸವಣ್ಣ, ಚೆನ್ನ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿಯರ ವಚನಗಳನ್ನು ಉಲ್ಲೇಖಿಸುವ ಜನರು ಇನ್ನೂ ಅನೇಕ ಶಿವಶರಣ, ಶಿವಶರಣೆಯರು ವಚನಗಳನ್ನು ರಚಿಸಿದರು ಎಂಬುದನ್ನು ಮರೆತೇ ಹೋಗಿರುವ ಕಾಲದಲ್ಲಿ ಉಪೇಕ್ಷಿತ ವಚನಕಾರರನ್ನು ಕುರಿತ ವಚನ ಮಾಲಿಕೆ ಪ್ರಾರಂಭಿಸಿರುವುದು ಎಲ್ಲರೂ ಮೆಚ್ಚುವಂತದ್ದು ಎಂದರು.

ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಪ್ರೊ. ಆರ್.ಎಲ್. ಪೊಲೀಸ್ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ವೀರಶೈವ ಲಿಂಗಾಯತ ಎಂದು ಭೇದಭಾವ ಮಾಡದೇ ನಮ್ಮ ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ನಾವು ಮುನ್ನಡೆಯಬೇಕು. ಶರಣ ಪರಂಪರೆಯಲ್ಲಿ ಭಕ್ತಿ, ದಾಸೋಹ ಮತ್ತು ಕಾಯಕ ಮುಖ್ಯವಾಗುತ್ತವೆಯೇ ಹೊರತು ಸಾಮಾಜಿಕ ಸ್ವಾಸ್ಥಕ್ಕೆ ಧಕ್ಕೆ ತರುವ ವಿಷಯಗಳಲ್ಲ ಎಂದರು.

ಕಾರ್ಯಕ್ರಮದಲ್ಲಿ ಎಸ್.ಬಿ.ಕರಿಭರಮಗೌಡರ, ಸಂತೋಷ ಹಿರೇಮಠ, ವಿ.ಕೆ.ಗುಡದಪ್ಪನವರ, ಹನುಮರೆಡ್ಡಿ ಇಟಗಿ, ಅಕ್ಕಮ್ಮ ಕೊಟ್ಟೂರ ಶೆಟ್ಟರ್, ಗಿರಿಜಾ ಕೋರಿ ಶೆಟ್ಟರ್, ಜಯಶ್ರೀ ಅಳವಂಡಿ, ಮಧುಮತಿ ಇಳಕಲ್, ಉಮಾ ದೊಡ್ಡಮನಿ, ಲೀಲಾ ಉಮಚಗಿ, ಶಶಿಕಲಾ ಕುಕನೂರು, ಎಂ.ಎಸ್.ಹೊಟ್ಟಿನ್, ಎನ್.ಎನ್. ಕಲಕೇರಿ, ಆರ್.ವೈ.ಪಾಟೀಲ್, ಕೃಷ್ಣ ಸಾವಕಾರ, ಎಂ.ಎಸ್. ಶೀರನಹಳ್ಳಿ, ಮಹೇಶ್ವರ ಮೇಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವೀಣಾ ಪಾಟೀಲ ನಿರೂಪಿಸಿದರು.