ಬಸವಾದಿ ಶರಣರು ಬಾಯುಪಚಾರದ ವಚನಗಳ ರಚಿಸಿಲ್ಲ

| Published : Jan 31 2025, 12:47 AM IST

ಸಾರಾಂಶ

ಜೇಡರ ದಾಸಿಮಯ್ಯ ಜಯಂತ್ಯುತ್ಸವದಲ್ಲಿ ಡಾ.ಬಸವಕುಮಾರ ಸ್ವಾಮೀಜಿ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬಸವಾದಿ ಶರಣರ ಒಂದೊಂದು ನುಡಿಗಳು ಅವರ ಅಂತರಂಗದ ಅನುಭಾವದ ಮಾತು. ಅವರು ಎಂದೂ ಬಾಯಿಪ್ರಚಾರದ ವಚನಗಳನ್ನು ರಚಿಸಲಿಲ್ಲ. ಬದುಕಿಗೆ ಹತ್ತಿರವಾಗುವಂತಹುಗಳಿಗೆ ಅಕ್ಷರ ರೂಪ ನೀಡಿದ್ದಾರೆಂದು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.

ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳ ಲೀಲಾವಿಶ್ರಾಂತಿ ತಾಣದ ಮುಂಭಾಗದಲ್ಲಿ ನಡೆದ ಶಿವಶರಣ ಆದ್ಯ ವಚನಕಾರ ಜೇಡರ ದಾಸಿಮಯ್ಯನವರ ಜಯಂತಿ ಆಚರಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಶರಣರ ವಚನಗಳು ಮನಸ್ಸನ್ನು ಹದಗೊಳಿಸುವಂತಹುಗಳಾಗಿದ್ದವು. 12ನೇ ಶತಮಾನದ ಆದ್ಯ ವಚನಕಾರರೆಂದೇ ಕರೆಯಲ್ಪಟ್ಟ ಜೇಡರ ದಾಸಿಮಯ್ಯನವರು ಜೀವನಾನುಭವದ ವಚನ ಸಾಹಿತ್ಯವನ್ನು ತಮ್ಮ 176 ವಚನಗಳಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದರು.

ಹಸಿವು ಸ್ವಾಭಾವಿಕವಾಗಿದ್ದು ಊಟ ಮಾಡಿದಾಗಲೇ ಅದನ್ನು ತಣಿಸುವ ಕೆಲಸ ಆಗುತ್ತದೆ. ಇಂತಹ ದೇಹದ ಹಸಿವಿನ ತೃಷೆಯನ್ನು ತಣಿಸಲು ದೇವರಿಂದ ಸಾಧ್ಯವೆ? ಎಂದು ದೇವರನ್ನೇ ಪ್ರಶ್ನಿಸುವ ಉದಾತ್ತ ಘನ ವ್ಯಕ್ತಿತ್ವ ಜೇಡರ ದಾಸಿಮಯ್ಯನವರದಾಗಿತ್ತು ಎಂದು ವಿವರಿಸಿದರು.

ದಾಸಿಮಯ್ಯನವರು ವಚನಕಾರರಲ್ಲಿ ಆದ್ಯರು ಎಂದು ತಿಳಿದುಬರುತ್ತದೆ. ಜೀವನಕ್ಕೆ ಬೇಕಾದ ಆದರ್ಶ ಮೌಲ್ಯಗಳನ್ನು ನೀಡಿದ ಎಲ್ಲ ಶರಣರ ಜಯಂತಿಗಳನ್ನು ಮಠಗಳು ಮಾಡಬೇಕಿದೆ. ಹಾಗೆಯೇ ಶ್ರೀ ಬೃಹನ್ಮಠದಲ್ಲಿ ಇಂತಹ ಶರಣ ಜಯಂತಿ ಕಾರ್ಯಕ್ರಮಗಳು ಹಿಂದಿನಿಂದ ನಡೆದಿವೆ. ಅದು ಮುಂದುವರಿಯುತ್ತಿದೆ. ಮುರುಘಾಮಠ ಶೂನ್ಯಪೀಠ ಪರಂಪರೆಯದ್ದಾಗಿದ್ದು ಶರಣತತ್ತ್ವ ವಿಚಾರಗಳಿಗೆ ಹೆಚ್ಚಿನ ಪ್ರಾಧಾನ್ಯವಿದೆ ಎಂದರು.

ಈ ಸಂದರ್ಭದಲ್ಲಿ ನೇಕಾರ ಸಮಾಜದ ಮುಖಂಡ ಗಿರೀಶ್ ಅವರು ಪ್ರಕಟಿಸಿದ್ದ 2025ರ ಜೇಡರ ದಾಸಿಮಯ್ಯನವರ ಭಾವಚಿತ್ರದ ಗೋಡೆ ಕ್ಯಾಲೆಂಡರನ್ನು ಡಾ.ಬಸವಕುಮಾರ ಶ್ರೀಗಳು ಬಿಡುಗಡೆಗೊಳಿಸಿದರು. ಬೃಹನ್ಮಠದ ಆವರಣದಲ್ಲಿರುವ ಎಸ್‌ಜೆಎಂ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ವೀರಭದ್ರಪ್ಪ ಹಾಗೂ ಸಹಶಿಕ್ಷಕ ಗಿರೀಶಾಚಾರ್ ಜೇಡರ ದಾಸಿಮಯ್ಯನವರ ಜೀವನ, ವ್ಯಕ್ತಿತ್ವ ಮತ್ತು ಸಾಧನೆ ಕುರಿತಾದ ಸಂಕ್ಷಿಪ್ತ ಪರಿಚಯ ಮಾಡಿಕೊಟ್ಟರು.

ಜೇಡರ ದಾಸಿಮಯ್ಯನವರ ಅರ್ಥಪೂರ್ಣ ನಾಲ್ಕಾರು ವಚನಗಳನ್ನು ತಮ್ಮ ಮಾಧುರ್ಯ ತುಂಬಿದ ಕಂಠ ಸಿರಿಯಿಂದ ಜಮುರಾ ಕಲಾಲೋಕದ ಕಲಾವಿದ ಉಮೇಶ್ ಪತ್ತಾರ್ ಹಾಡಿ ಮನಸ್ಸನ್ನು ಮುದಗೊಳಿಸಿದರು. ಈ ವೇಳೆ ನೇಕಾರ ಸಮಾಜದ ಗಿರೀಶ್, ಲಿಂಗಾಯತ ಮಹಾಸಭಾದ ಬಸವರಾಜ ಕಟ್ಟಿ, ಎಸ್‌ಜೆಎಂ ಕಾನೂನು ಕಾಲೇಜಿನ ಪ್ರಾಚಾರ್ಯ ಎಸ್.ದಿನೇಶ್, ಎಸ್‌ಜೆಎಂ ಕನ್ನಡ ಮಾಧ್ಯಮ ಶಾಲೆಯ ಶ್ರೀಧರ್, ನಾಗೇಂದ್ರಪ್ಪ, ನಾಗರಾಜ್, ಶಿವಮ್ಮ, ಮೇಘನ, ನೇತ್ರಾವತಿ ಮತ್ತಿತರರು ಉಪಸ್ಥಿತರಿದ್ದರು.