ಬಸವಕಲ್ಯಾಣ ಉದ್ಯಮಿ ಸುಗುರೆ ಹೈದ್ರಾಬಾದ್‌ನಲ್ಲಿ ಪತ್ತೆ

| Published : Oct 16 2024, 12:44 AM IST

ಬಸವಕಲ್ಯಾಣ ಉದ್ಯಮಿ ಸುಗುರೆ ಹೈದ್ರಾಬಾದ್‌ನಲ್ಲಿ ಪತ್ತೆ
Share this Article
  • FB
  • TW
  • Linkdin
  • Email

ಸಾರಾಂಶ

Basavakalyan entrepreneur Suguere found in Hyderabad

ಹೈದ್ರಾಬಾದ್‌ನಿಂದ ಕರೆತಂದ ಪೊಲೀಸ್‌, ಮಾನಸಿಕವಾಗಿ ಬಳಲಿರುವ ಸುಗುರೆ

ಶಾಸಕ ಸಲಗರ್‌ ವಿರುದ್ದ ಮೂರುವರೆ ಪುಟ ಬರೆದಿಟ್ಟಿದ್ದರು ಎನ್ನಲಾದ ಪತ್ರ ವೈರಲ್‌

ಶಾಸಕ ಶರಣು ಸಲಗರ ಅಕ್ರಮ ವ್ಯವಹಾರಗಳ ಮಾಹಿತಿ ಪೆನ್‌ಡ್ರೈವ್‌ನಲ್ಲಿರುವುದಾಗಿ ಹೇಳಿಕೆ

ಶಾಸಕರಿಂದ ಜೀವ ಬೆದರಿಕೆ, ಐದೂವರೆ ಕೋಟಿ ರು. ವಾಪಸ್‌ ಕೊಡಲು ಹಿಂದೇಟು

ನಿರಾಳರಾದ ಪೊಲೀಸರು, ಶಾಸಕ ಸಲಗರ ವಿರುದ್ದದ ಪತ್ರ ಪೊಲೀಸರಿಗೆ ತಲುಪಿಲ್ಲಕನ್ನಡಪ್ರಭ ವಾರ್ತೆ, ಬೀದರ್‌

ಮನೆಯಿಂದ ಭಾನುವಾರ ನಸುಕಿನ ಜಾವ ಹೊರ ಹೋಗಿ ನಾಪತ್ತೆಯಾಗಿದ್ದ ಉದ್ಯಮಿ ಸಂಜೀವಕುಮಾರ ಸುಗುರೆ ಹೈದ್ರಾಬಾದ್‌ನ ಲಾಡ್ಜವೊಂದರಲ್ಲಿ ಪತ್ತೆಯಾಗಿದ್ದಷ್ಟೇ ಅಲ್ಲ ತನ್ನ ಆಪ್ತ ಬಸವಕಲ್ಯಾಣ ಶಾಸಕ ಶರಣು ಸಲಗರ ವಿರುದ್ಧವೇ ಮೂರುವರೆ ಪುಟ ಬರೆದಿಟ್ಟಿದ್ದರು ಎನ್ನಲಾದ ಪತ್ರ ವೈರಲ್‌ ಆಗಿದೆ.

ಅ. 13ರ ಬೆಳಗಿನ ಜಾವ 4.05ರ ಸುಮಾರಿಗೆ ಮನೆಯಿಂದ ಹೊರಹೋಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ತದನಂತರ ಮಧ್ಯಾಹ್ನದ ವರೆಗೆ ಹುಡುಕಾಟ ನಡೆಸಿದ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಅವರು ಪತ್ತೆಯಾಗದ ಕಾರಣ ಬಸವಕಲ್ಯಾಣ ನಗರ ಠಾಣೆಗೆ ತೆರಳಿ ಪುತ್ರ ಸಾಗರ ಸುಗುರೆ ನಾಪತ್ತೆಯಾಗಿರುವ ದೂರು ದಾಖಲಿಸಿ ಪತ್ತೆ ಮಾಡಿಕೊಡುವಂತೆ ಮನವಿ ಮಾಡಿದ್ದರು.

ಈ ಮಧ್ಯ ಹಣಕಾಸು ವಿಚಾರದಲ್ಲಿ ಬೇಸರಗೊಂಡಿದ್ದರು, ಜನಪ್ರತಿನಿಧಿಯೊಬ್ಬರಿಗೆ ಕೋಟ್ಯಂತರ ರುಪಾಯಿ ಕೈಗಡ ನೀಡಿ ವಾಪಸ್ಸಾಗದೇ ಆತಂಕಕ್ಕೀಡಾಗಿರುವದು ಸೇರಿದಂತೆ ಹಲವಾರು ವ್ಯಾಖ್ಯಾನಗಳು ಜನರ ಬಾಯಲ್ಲಿ ಆಡತೊಡಗಿದ್ದವು, ಅಷ್ಟೇ ಏಕೆ ಶಾಸಕ ಶರಣು ಸಲಗರ ಅವರ ಹೆಸರೂ ಇಲ್ಲಿ ತಳಕು ಹಾಕಿಕೊಂಡಿತ್ತಾದರೂ ಅಧಿಕೃತವಾಗಿರಲಿಲ್ಲ ಇದೀಗ ನಾಪತ್ತೆಗುವ ಮುನ್ನ ಸುಗುರ ಬರೆದಿಟ್ಟಿದ್ದಾರೆ ಎನ್ನಲಾದ ಮೂರುವರೆ ಪುಟದ ಪತ್ರ ವೈರಲ್‌ ಆಗುತ್ತಿದ್ದಂತೆ ಅದರಲ್ಲಿ ಶಾಸಕರ ಹೆಸರಿದ್ದದ್ದು ಹಾಗೂ ಕೋಟ್ಯಂತರ ರುಪಾಯಿ ವ್ಯವಹಾರದ ಮಾಹಿತಿಗಳಿದ್ದದ್ದು ಇದಕ್ಕೆ ಪುಷ್ಠಿ ನೀಡುವಂತಿದೆ. ಆದರೂ ಈ ವಿಷಯ ಪೊಲೀಸರಿಗೆ ನೀಡಿದ ದೂರಿನಲ್ಲಿಲ್ಲ ಹಾಗೂ ಯಾವುದೇ ದೂರು ದಾಖಲಾಗಿಲ್ಲ.

ಪತ್ರದಲ್ಲೇನಿದೆ :

ಮನೆಯಿಂದ ನಾಪತ್ತೆಯಾಗಿದ್ದ ಉದ್ಯಮಿ ಸಂಜೀವಕುಮಾರ ಸುಗುರೆ, ಶರಣು ಸಲಗರ ಅವರಿಗೆ ನೀಡಿದ್ದ ಸಾಲ ವಾಪಸ್‌ ಕೇಳಿದ್ದಕ್ಕೆ ಜೀವ ಬೆದರಿಕೆ ಹಾಕ್ತಿದ್ದಾರೆ, ನನ್ನ ಪತ್ನಿ ಹಾಗೂ ಮಗನಿಗೆ ವಾಪಸ್‌ ಕೊಡಿಸಿ, ನನ್ನ ಕುಟುಂಬದ ಸದಸ್ಯರಿಗೆ ಏನಾದರೂ ಆದ್ರೆ ಅದಕ್ಕೆ ಸಲಗರ್‌ ಹೊಣೆ ಎಂಬ ಕುರಿತು ಎಳೆ ಎಳೆಯಾಗಿ ಮೂರುವರೆ ಪುಟಗಳ ಪತ್ರವನ್ನು ಬಸವಕಲ್ಯಾಣ ಪಿಎಸ್‌ಐ ನಗರಠಾಣೆ ಅವರ ಹೆಸರಿಗೆ ಬರೆದಿಟ್ಟಿದ್ದಾರೆ. ಆದರೆ ಇದು ಪೊಲೀಸರಿಗೆ ತಲುಪಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಶರಣು ಸಲಗರ ಅವರು ಬಸವಕಲ್ಯಾಣಕ್ಕೆ ಬಂದಾಗ ನನ್ನ ಮನೆಯ ವಿಳಾಸ ನೀಡಿಯೇ ಅವರಿಗೆ ವೋಟರ್‌ ಐಡಿ ಮಾಡಿಸಿಕೊಟ್ಟೆ. ಸ್ಥಳೀಯರನ್ನು ಎದುರು ಹಾಕಿಕೊಂಡು ಕ್ಷೇತ್ರದಾದ್ಯಂತ ತಿರುಗಾಡಿದೆ. ದುಡ್ಡು ಸಹ ಕೊಟ್ಟೆ, ಕಳೆದ 2023ರ ಚುನಾವಣೆಯನ್ನು ಗೆದ್ದಾಗ 15ಕೋಟಿ ರು. ಬಾಕಿ ಇತ್ತು. ಚುನವಣಾ ಪೂರ್ವದಲ್ಲಿ 6 ತಿಂಗಳಲ್ಲಿ ವಾಪಸ್‌ ಕೊಡುವದಾಗಿ ನನ್ನಿಂದ 6.5ಕೋಟಿ ರು. ಸಾಲ ಪಡೆದಿದ್ದರು. ಅದರಲ್ಲಿ 1ಕೋಟಿ ರುಪಾಯಿ ವಾಪಸ್‌ ನೀಡಿ ಇನ್ನುಳಿದ ಹಣ ವಾಪಸ್‌ ನೀಡುತ್ತಿಲ್ಲ. ಹಣ ಕೇಳಿದರೆ ಬೆದರಿಕೆ ಹಾಕುತ್ತಿದ್ದಾರೆ. ನನ್ನ ಕಾರನ್ನು ಹಿಂಬಾಲಿಸುತ್ತಿದ್ದಾರೆ. ಇದರಿಂದ ಮಾನಸಿಕವಾಗಿ ಜರ್ಝರಿತಗೊಂಡಿದ್ದೇನೆ. ನನ್ನ ಜೀವವಾಗಲಿ, ಕುಟುಂಬಸ್ಥರ ಜೀವಕ್ಕಾಗಲಿ ಏನಾದರೂ ಆದರೆ ಅದಕ್ಕೆ ಬಸವಕಲ್ಯಾಣ ಶಾಸಕ ಶರಣು ಸಲಗರ ಅವರೇ ನೇರ ಹೊಣೆ ಎಂದು ಸಲಗರ ಅವರ ಕೆಲ ಆಪ್ತರ ಹೆಸರನ್ನು ಪತ್ರದಲ್ಲಿ ಬರೆದಿದ್ದಾರೆ.

ಅಷ್ಟೇ ಅಲ್ಲ ಶರಣು ಸಲಗರ ಅವರ ಭ್ರಷ್ಟಾಚಾರ ಹಾಗೂ ದುಡ್ಡಿನ ವ್ಯವಹಾರವನ್ನ ಪೆಂಡ್ರೈವ್‌ನಲ್ಲಿ ಸಂಗ್ರಹಸಿಟ್ಟಿದ್ದೇನೆ.ಶರಣು ಸಲಗರ್‌ ನಾರಾಯಣಖೇಡ್‌ಗೆ ತೆರಳಿದ್ದಾಗ 25 ಬಾರಿ ಕರೆ ಮಾಡಿದ ಆಡಿಯೋ ವೈರಲ್‌ ಮಾಡಿದ್ರೆ ಸಲಗರ ಬಣ್ಣ ಬಟಾಬಯಲು ಆಗುತ್ತೆ. ಸಿಎಮ್‌ಸಿ ಕಾಮಗಾರಿ ವಿಚಾರವಾಗಿ 25 ಬಾರಿ ಕರೆ ಮಾಡಿ ಮಾತಾಡಿದ್ದಾರೆ. ಅದನ್ನೆಲ್ಲಾ ಜನತೆ ಮುಂದೆ ಇಟ್ರೆ ಮರ್ಯಾದೆ ಹೋಗುತ್ತೆ. ನಾನು ನಿನ್ನಂತೆ ಅಲ್ಲ ಎಂದು ಸಲಗರ ವಿರುದ್ಧ ಕಿಡಿ ಕಾರಿರುವ ಪತ್ರ ಇದೀಗ ವೈರಲ್‌ ಆಗಿದೆ.

ಅಷ್ಟಕ್ಕೂ ಪಿಎಸ್‌ಐ ನಗರಠಾಣೆ ಅವರಿಗೆ ಬರೆದಿರುವ ಈ ಪತ್ರದ ಪ್ರತಿಯೊಂದು ಪುಟಕ್ಕೆ ನಾಪತ್ತೆಯಾಗಿದ್ದ ಸುಗುರೆ ಸಹಿ ಹಾಕಿದ್ದಾರಾದರೂ ಎಲ್ಲವೂ ಸರಿ ಹೋದಲ್ಲಿ, ಒಪ್ಪಂದ ಆದಲ್ಲಿ ಉಲ್ಟಾ ಹೊಡೆದು ಪತ್ರ ನನ್ನದಲ್ಲ, ನಾನು ಬರದಿಲ್ಲ ನನ್ನ ಸಹಿಯೂ ಅಲ್ಲ, ನನ್ನೊಂದಿಗೆ ಶಾಸಕ ಸಲಗರ ಅವರ ಹಾಗೂ ಇತರ ಆಪ್ತರ ಸಂಬಂಧ ಅನ್ಯೋನ್ಯವಾಗಿದೆ ಎಂದರೂ ಅಚ್ಚರಿಯಿಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ.