ಬಸವಲಿಂಗ ಪಟ್ಟದೇವರು ಸೇರಿ ಮೂವರಿಗೆ ನಾಡೋಜ ಪದವಿ ಪ್ರದಾನ

| Published : Jan 11 2024, 01:31 AM IST / Updated: Jan 11 2024, 03:31 PM IST

ಸಾರಾಂಶ

ಬಳಿಕ ಮೂವರು ಸಾಧಕರಿಗೆ ನಾಡೋಜ ಗೌರವ ಪದವಿ ಪ್ರದಾನ, ಒಬ್ಬರಿಗೆ ಡಿ.ಲಿಟ್ ಹಾಗೂ ೨೭೫ ಸಂಶೋಧಕರಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಯಿತು.

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯ ಕೊಡಮಾಡುವ ಪ್ರತಿಷ್ಠಿತ ನಾಡೋಜ ಗೌರವ ಪದವಿಯನ್ನು ವಿವಿಯ ೩೨ನೇ ನುಡಿಹಬ್ಬ ಘಟಿಕೋತ್ಸವದಲ್ಲಿ ಬೀದರ್ ಭಾಲ್ಕಿ ಹಿರೇಮಠದ ಡಾ. ಬಸವಲಿಂಗ ಪಟ್ಟದೇವರು, ಆಂಧ್ರಪ್ರದೇಶದ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಡಾ. ತೇಜಸ್ವಿ ವಿ. ಕಟ್ಟಿಮನಿ, ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಸ್.ಸಿ.ಶರ್ಮಾ ಅವರಿಗೆ ಬುಧವಾರ ಪ್ರದಾನ ಮಾಡಲಾಯಿತು.

ಉನ್ನತ ಶಿಕ್ಷಣ ಸಚಿವರು ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ಎಂ.ಸಿ. ಸುಧಾಕರ್ ಅವರು ನಾಡೋಜ ಗೌರವ ಪದವಿ ಪ್ರದಾನ ಮಾಡಿದರು. ನಾಡೋಜ ಪುರಸ್ಕೃತರಿಗೆ ಬಿಳಿ ಶಲ್ಯ, ಸರಸ್ವತಿ ಮೂರ್ತಿ, ಫಲಕ ನೀಡಿ ಸತ್ಕರಿಸಲಾಯಿತು. ಕನ್ನಡ ವಿವಿ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ, ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಹಾಗೂ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು ಇದ್ದರು.

ಹಂಪಿ ಕನ್ನಡ ವಿಶ್ವವಿದ್ಯಾಲಯವು ರಾಷ್ಟ್ರಕವಿ ಕುವೆಂಪು, ಸಿದ್ದವನಹಳ್ಳಿ ನಿಜಲಿಂಗಪ್ಪ, ಗಂಗೂಬಾಯಿ ಹಾನಗಲ್, ಡಾ. ಪಾಟೀಲ ಪುಟ್ಟಪ್ಪ, ವರನಟ ಡಾ. ರಾಜ್‌ಕುಮಾರ ಸೇರಿದಂತೆ ಇಲ್ಲಿಯವರೆಗೆ ೯೫ ಗಣ್ಯರಿಗೆ ನಾಡೋಜ ಗೌರವ ಪದವಿ ನೀಡಿದೆ.

ನಾಡೋಜ ಎಂದರೇನು?
ಕನ್ನಡ ವಿಶ್ವವಿದ್ಯಾಲಯ ಪ್ರತಿವರ್ಷ ಆಚರಿಸುವ ನುಡಿಹಬ್ಬದಲ್ಲಿ ಕರ್ನಾಟಕದ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆಯ ಕ್ಷೇತ್ರಗಳಿಗೆ ಮಹತ್ವದ ಕೊಡುಗೆಗಳನ್ನು ಕೊಟ್ಟಿರುವ ಗಣ್ಯರನ್ನು ಗುರುತಿಸಿ ಅವರಿಗೆ ನಾಡೋಜ ಗೌರವ ಪದವಿ ನೀಡುತ್ತ ಬಂದಿದೆ. 

ಆದಿಕವಿ ಪಂಪನಿಗೆ ಸಂಬಂಧಿಸಿದ ನಾಡೋಜ ಎಂಬ ಪದವು ಕರ್ನಾಟಕದ ಪರಂಪರೆಯ ಸಾತತ್ಯವನ್ನೂ ನಾಡನ್ನು ಕಟ್ಟಿದವರು ಎಂಬ ಮನ್ನಣೆಯನ್ನೂ ಸೂಚಿಸುವಂಥದ್ದಾಗಿದೆ.

ಘಟಿಕೋತ್ಸವದ ಮೆರವಣಿಗೆ: ದೇಸಿ ಮಾದರಿಯಲ್ಲಿ ನಡೆದ ನುಡಿಹಬ್ಬ ಘಟಿಕೋತ್ಸವದ ಭವ್ಯ ಮೆರವಣಿಗೆ ವಿವಿಯ ಅಕ್ಷರ ಗ್ರಂಥಾಲಯದ ಬಳಿಯಿಂದ ನವರಂಗ ಬಯಲು ರಂಗಮಂದಿರದವರೆಗೆ ಸಾಗಿ ಬಂದಿತು. ಬಳಿಕ ಕಲಶ ಸ್ಥಾಪನೆ ಮಾಡಿ, ಸಮ ಕುಲಾಧಿಪತಿಗಳಿಂದ ಘಟಿಕೋತ್ಸವ ಪ್ರಾರಂಭದ ಘೋಷಣೆ ನಡೆಯಿತು.

ಬಳಿಕ ಮೂವರು ಸಾಧಕರಿಗೆ ನಾಡೋಜ ಗೌರವ ಪದವಿ ಪ್ರದಾನ, ಒಬ್ಬರಿಗೆ ಡಿ.ಲಿಟ್ ಹಾಗೂ ೨೭೫ ಸಂಶೋಧಕರಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಯಿತು. ಗಣ್ಯರ ಭಾಷಣದ ಬಳಿಕ ಘಟಿಕೋತ್ಸವದ ಮೆರವಣಿಗೆ ನಿರ್ಗಮಿಸಿತು.