ಶೈಕ್ಷಣಿಕ ಕ್ಷೇತ್ರದ ಏಳಿಗೆಗೆ ಪಟ್ಟದ್ದೇವರ ಕೊಡುಗೆ ಅನನ್ಯ: ಸಚಿವ ಈಶ್ವರ ಖಂಡ್ರೆ

| Published : Apr 11 2024, 12:48 AM IST

ಶೈಕ್ಷಣಿಕ ಕ್ಷೇತ್ರದ ಏಳಿಗೆಗೆ ಪಟ್ಟದ್ದೇವರ ಕೊಡುಗೆ ಅನನ್ಯ: ಸಚಿವ ಈಶ್ವರ ಖಂಡ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಭಾಲ್ಕಿ ತಾಲೂಕಿನ ಕರಡ್ಯಾಳದ ಅನುಭವ ಮಂಟಪದಲ್ಲಿ ರಾಜ್ಯಕ್ಕೆ 7, 8ನೇ ರ್‍ಯಾಂಕ್‌ ಪಡೆದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿನಿಯರನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸನ್ಮಾನಿಸಿ ಮಾತನಾಡಿದರು.

ಭಾಲ್ಕಿ: ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಏಳಿಗೆಯಲ್ಲಿ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರ ಕೊಡುಗೆ ಅನನ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.

ತಾಲೂಕಿನ ಕರಡ್ಯಾಳದ ಅನುಭವ ಮಂಟಪದಲ್ಲಿ ರಾಜ್ಯಕ್ಕೆ 7, 8ನೇ ರ್‍ಯಾಂಕ್‌ ಪಡೆದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಪಟ್ಟದ್ದೇವರ ವಿಶೇಷ ಕಾಳಜಿಯ ಫಲವಾಗಿ ಆರಂಭವಾದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿನಿಯರಾದ ರಕ್ಷಿತಾ ಸಂಜೀವಕುಮಾರ, ರಕ್ಷಿತಾ ಶರಣಬಸವರೆಡ್ಡಿ 600ಕ್ಕೆ ಕ್ರಮವಾಗಿ 592, 591 ಅಂಕ ಪಡೆದು ರಾಜ್ಯಕ್ಕೆ 7, 8ನೇ ರ್‍ಯಾಂಕ್‌ ಪಡೆದಿರುವುದು ಸಂತಸ ವಿಷಯ. ಗುರುಕುಲದಲ್ಲಿ ದೊರೆಯುತ್ತಿರುವ ಗುಣಾತ್ಮಕ ಶಿಕ್ಷಣವೇ ಇದಕ್ಕೆ ಪ್ರಮುಖ ಕಾರಣ ಎಂದು ನುಡಿದರು.

ಶಿಕ್ಷಣದಿಂದಲೇ ಎಲ್ಲ ಸಮಸ್ಯೆಗಳನ್ನು ಪರಿಹರಿಸಬಹುದು ಎಂಬುವದನ್ನು ಅರಿತಿರುವ ಪಟ್ಟದ್ದೇವರು ಗ್ರಾಮೀಣ ಭಾಗದಲ್ಲಿ ಶಾಲಾ, ಕಾಲೇಜುಗಳನ್ನು ಆರಂಭಿಸಿ ಬಡ, ಪ್ರತಿಭಾನ್ವಿತ ವಿದ್ಯಾರ್ಥಿಗಳ ಬಾಳು ಬೆಳಗುತ್ತಿದ್ದಾರೆ ಎಂದು ಶ್ಲಾಘಿಸಿದರು.

ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ, ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಿಕೊಡಲಾಗಿದೆ. ಉಪನ್ಯಾಸಕರ ಉತ್ತಮ ಬೋಧನೆ ವಿದ್ಯಾರ್ಥಿಗಳ ಗಮನಾರ್ಹ ಸಾಧನೆಗೆ ಸಹಕಾರಿ ಆಗಿದೆ ಎಂದು ಹೇಳಿದರು.

ಹಿರೇಮಠದ ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ, ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ ಸೇರಿದಂತೆ ಇತರರು ಇದ್ದರು.