ಸಾರಾಂಶ
ಧಾರವಾಡ: ಸದಾ ಎಲ್ಲರೊಂದಿಗೆ ಬೆರೆತು ನಕ್ಕು ನಗಿಸುತ್ತ ಉತ್ತರ ಕರ್ನಾಟಕದ ಎಲ್ಲ ಜಾನಪದ ಪ್ರಕಾರಗಳನ್ನು ಕರಗಿಸಿಕೊಂಡು ನಾಡಿನ ಜನತೆಗೆ ಹಂಚಿಕೊಳ್ಳುತ್ತಿದ್ದ ಬಸವಲಿಂಗಯ್ಯ ಹಿರೇಮಠ ಪ್ರಾಮಾಣಿಕ ಹಾಗೂ ಭಾವುಕ ವ್ಯಕ್ತಿತ್ವ ಹೊಂದಿದ್ದರು ಎಂದು ಹಿರಿಯ ಪತ್ರಕರ್ತ ಡಾ. ಬಂಡು ಕುಲಕರ್ಣಿ ಹೇಳಿದರು.
ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಜಾನಪದ ಸಂಶೋಧನ ಕೇಂದ್ರ ಹಾಗೂ ಗಾನ ಗಾರುಡಿಗ ಬಸವಲಿಂಗಯ್ಯ ಹಿರೇಮಠ ಪ್ರತಿಷ್ಠಾನದ ಸಹಯೋಗದಲ್ಲಿ ನಡೆದ ಅವರ 65ನೇ ಜನ್ಮದಿನದಲ್ಲಿ ಅವರು ಮಾತನಾಡಿ, ಅಪರೂಪದ ಕಲಾವಿದರಾಗಿದ್ದ ಅವರೊಂದಿಗೆ ಕೃಷ್ಣ ಪಾರಿಜಾತದಲ್ಲಿ ತಾವು ಮರಿ ಭಾಗವತನಾಗಿ ನಟಿಸಿ, ಕರ್ನಾಟಕದ ಅತ್ಯಂತ ಯಶಸ್ವಿ ಪ್ರಯೋಗ ಮಾಡಿದ್ದನ್ನು ಸ್ಮರಿಸಿಕೊಂಡರು.ಇಂದು ಆ ಪ್ರಾಮಾಣಿಕತೆ, ಪ್ರಯತ್ನ, ದುಡಿಮೆಗಳ ಕೊರತೆ ಕಲಾವಿದರಲ್ಲಿ ಎದ್ದು ಕಾಣುತ್ತಿದೆ. 30 ವರ್ಷಗಳಿಂದ ಜಾನಪದ ಸಂಶೋಧನ ಕೇಂದ್ರವನ್ನು ನಡೆಸಿಕೊಂಡು ಬಂದು ಅನೇಕ ಮೌಲಿಕ ಪುಸ್ತಕಗಳನ್ನು ಹೊರ ತಂದಿದ್ದಾರೆ. ಗಜಾನನ ಚಿನಗುಡಿ ಅವರು ಅವರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿಯನ್ನು ಇಟ್ಟು ದತ್ತಿ ಆರಂಭಿಸಿದ್ದು ಶ್ಲಾಘನೀಯ ಎಂದರು.
ಬಾಗಲಕೋಟೆ ಜಿಲ್ಲೆಯ ಬೆಳಗಿ ತಾಲೂಕಿನ ಎಳ್ಳಿಗುತ್ತಿ ಗ್ರಾಮದ ತತ್ವಪದ ಕಲಾವಿದ ರಂಗಪ್ಪ ಹಲಕುರ್ಕಿ ಅವರಿಗೆ ಬಸವಲಿಂಗಯ್ಯ ಹೆಸರಿನ ₹10 ಸಾವಿರ ಮೌಲ್ಯದ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪ್ರದಾನ ಮಾಡಿದ ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಬಸವಲಿಂಗಯ್ಯ ಸ್ವತಃ ಒಬ್ಬ ಕವಿ ಹಾಗೂ ಹಾಡುಗಾರರಾಗಿದ್ದಾರೆ. ಜಾನಪದಕ್ಕೆ ಅವರು ಕೊಟ್ಟ ಕೊಡುಗೆ ಅಪಾರ. ಅವರ ಹೆಸರಿನ ಪ್ರಶಸ್ತಿಯನ್ನು ಬೀಳಗಿಯ ರಂಗಪ್ಪ ಹಲಕುರ್ಕಿ ಅವರಿಗೆ ನೀಡಿದ್ದು ಸಾರ್ಥಕ ಎಂದರು.ಪ್ರಕಾಶ ಉಡಿಕೇರಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಡಾ. ಆನಂದ ಪಾಂಡುರಂಗಿ ಮಾತನಾಡಿ, ಇಂದು ಶಿಕ್ಷಣದಲ್ಲಿ ಜಾನಪದ ಕಲೆಗಳನ್ನು ಅನಾವರಣಗೊಳಿಸುವ ಬಹಳ ಮುಖ್ಯವಾಗಿದೆ. ವಿದ್ಯಾರ್ಥಿಗಳಿಗೆ ಸಂಸ್ಕಾರ ಮುಖ್ಯ. ಜಾನಪದ ಸಂಶೋಧನ ಕೇಂದ್ರ ಪ್ರತಿ ಹಬ್ಬಗಳನ್ನು ಸಾರ್ವಜನಿಕವಾಗಿ ಮಾಡಿ ಜಾನಪದೀಯ ವೇಷಭೂಷಣ ಹಾಗೂ ರೀತಿಯಲ್ಲಿ ಮಾಡುತ್ತಾ ಬಂದಿದ್ದು ಇಂದು ಯುವ ಜನಾಂಗಕ್ಕೆ ಮಾದರಿ ಎಂದರು.ಬಸವಲಿಂಗಯ್ಯನವರ ಕನಸನ್ನು ಇಂದು ಪತ್ನಿ ವಿಶ್ವೇಶ್ವರಿ ಹಾಗೂ ಮಗ ನಾಗಭೂಷಣ ಮುಂದುವರಿಸಬೇಕಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಜಾನಪದ ಕ್ಷೇತ್ರಕ್ಕೆ ಬಸಲಿಂಗಯ್ಯ ಅಪರೂಪದ ಮನುಷ್ಯ. ಹುಕ್ಕೇರಿ ಬಾಳಪ್ಪನವರ ಆನಂತರ ಆ ಪರಂಪರೆಯನ್ನು ಬೆಳೆಸಿಕೊಂಡು ಬಂದು ನಾಡಿನಾದ್ಯಂತ ಅವರು ದೇಶದಲ್ಲೂ ಕೀರ್ತಿಗಳಿಸಿದವರು. ಆಡು ಮುಟ್ಟದ ಗಿಡ ಇಲ್ಲ ಅನ್ನುವ ಹಾಗೆ ಬಸಲಿಂಗಯ್ಯ ಹಾಡಿದ ಪ್ರಕಾರಗಳು ಉಳಿದಿದ್ದಿಲ್ಲ. ಅವರೊಬ್ಬ ಅದ್ಭುತ ಕಲಾವಿದರು ಎಂದರು.ಬಾಗಲಕೋಟಿ ಕಸಾಪ ಅಧ್ಯಕ್ಷ ಶಿವಾನಂದ ಶಲ್ಲಿಕೇರಿ, ವಿವೇಕ್ ಕುರುಗುಂದ, ದತ್ತಿದಾನಿ ಗಜಾನನ ಚಿನಗುಡಿ, ಪ್ರತಿಷ್ಠಾನದ ಅಧ್ಯಕ್ಷ ಎನ್.ಎಸ್. ಗಲಗಲಿ ಇದ್ದರು. ಆರಂಭದಲ್ಲಿ ಜಾನಪದ ಸಂಶೋಧನಾ ಕೇಂದ್ರದ ಸಂಗೀತ ಬಳಗ ಬಸಲಿಂಗಯ್ಯ ಅವರ ತತ್ವಪದಗಳನ್ನು ಪ್ರಸ್ತುತಪಡಿಸಿದ್ದರು. ನಾಗಭೂಷಣ ಹಿರೇಮಠ ಸ್ವಾಗತಿಸಿದರು. ವಿಶ್ವೇಶ್ವರಿ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು, ಜಾನಪದ ಸಂಶೋಧನ ಕೇಂದ್ರದ ಅಧ್ಯಕ್ಷ ಗು.ರು. ಕಲ್ಮಠ ವಂದಿಸಿದರು.