ಶಿವರಾತ್ರಿ ಎಲ್ಲರ ಬಾಳಲ್ಲಿ ಜಾಗೃತಿ ಆಗಲಿ

| Published : Feb 28 2025, 12:46 AM IST

ಸಾರಾಂಶ

ಶಿವರಾತ್ರಿಯ ಆಚರಣೆಗೆ ವೈಜ್ಞಾನಿಕ ಕಾರಣಗಳೂ ಇವೆ. ಈ ದಿನ ರಾತ್ರಿಯಲ್ಲಿ ಎಚ್ಚರ ಇದ್ದು ಪೂಜೆ ಮಾಡುವುದರಿಂದ ಮನಸ್ಸು ಪ್ರಶಾಂತವಾಗಿ ಸನ್ಮಾನದ ಕಡೆಗೆ ಹೋಗುತ್ತದೆ

ಕನ್ನಡಪ್ರಭ ವಾರ್ತೆ ಮೈಸೂರುಮಹಾಶಿವರಾತ್ರಿ ನಮ್ಮ ಬಾಳಿನಲ್ಲಿ ಜಾಗೃತಿ ರಾತ್ರಿ ಆಗಬೇಕು ಎಂದು ಬಸವಮಾರ್ಗ ಫೌಂಡೇಷನ್ ಸಂಸ್ಥಾಪಕ ಎಸ್. ಬಸವಣ್ಣ ಹೇಳಿದರು.ನಗರದ ಹೆಬ್ಬಾಳಿನಲ್ಲಿರುವ ಬಸವಮಾರ್ಗ ಫೌಂಡೇಶನ್ ನಲ್ಲಿ ಶಿವರಾತ್ರಿ ಹಬ್ಬದ ಜಾಗರಣೆ ಹಿನ್ನೆಲೆಯಲ್ಲಿ ಬುಧವಾರ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿವರಾತ್ರಿ ಆಚರಣೆಗೆ ಅನೇಕ ಹಿನ್ನೆಲೆಯಿದೆ. ಅನೇಕ ಕಥೆಗಳಿವೆ. ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನವಾಗಿದೆ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹಿಸುತ್ತಾನೆ ಎನ್ನುತ್ತದೆ ಶಿವಪುರಾಣ ಎಂದರು.ಶಿವರಾತ್ರಿಯ ಆಚರಣೆಗೆ ವೈಜ್ಞಾನಿಕ ಕಾರಣಗಳೂ ಇವೆ. ಈ ದಿನ ರಾತ್ರಿಯಲ್ಲಿ ಎಚ್ಚರ ಇದ್ದು ಪೂಜೆ ಮಾಡುವುದರಿಂದ ಮನಸ್ಸು ಪ್ರಶಾಂತವಾಗಿ ಸನ್ಮಾನದ ಕಡೆಗೆ ಹೋಗುತ್ತದೆ. ಶಿವನು, ಪಾರ್ವತಿ ದೇವಿಯನ್ನು ವಿವಾಹವಾದ ದಿನವಾಗಿ ಶಿವರಾತ್ರಿಯೆಂದು ಹೇಳಲಾಗುತ್ತದೆ. ಅಲ್ಲದೆ, ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ ಎಂದು ಅವರು ತಿಳಿಸಿದರು.ಬಸವಮಾರ್ಗ ಫೌಂಡೇಶನ್ ನಲ್ಲಿ ಪ್ರತಿ ಹಬ್ಬ, ವಿಶೇಷ ದಿನವನ್ನು ಅದ್ದೂರಿಯಾಗಿ ಆಚರಿಸುತ್ತದೆ. ಆ ದಿನ ವಿಶೇಷ ಧಾರ್ಮಿಕ ಕಾರ್ಯಗಳನ್ನು ಆಯೋಜಿಸಿ ವ್ಯಸನಿಗಳ ಮನಃ ಪರಿವರ್ತನೆಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡುತ್ತದೆ. ಶಿವರಾತ್ರಿಯ ದಿನವೂ ನಮ್ಮಲ್ಮಿ ಶಿವನಿಗೆ ವಿಶೇಷ ಪೂಜೆ ಮಾಡಲಾಗಿದೆ. ಕೈಗೆ ಕಂಕಣ ಕಟ್ಟಲಾಗಿದೆ. ವಿಭೂತಿ, ಬಿಲ್ವಪತ್ರೆಯನ್ನು ಪ್ರಸಾದ ರೂಪವಾಗಿ ನೀಡಲಾಗಿದೆ ಎಂದರು.ಅಗ್ನಿಹೋತ್ರ ಹೋಮ ಹಾಗೂ ಜ್ಯೋತಿರ್ ತ್ರಾಟಕ ಆಯೋಜಿಸಿ ಧಾರ್ಮಿಕ ಕಾರ್ಯ ಮಾಡಲಾಗಿದೆ. ಕೊನೆಗೆ ಮಹಾ ಮಂಗಳಾರತಿ ನೆರವೇರಿಸಿ ತೀರ್ಥ, ಪ್ರಸಾದವನ್ನು ನೀಡಲಾಗಿದೆ. ವ್ಯಸನಿಗಳು ಈ ರೀತಿಯ ಕಾರ್ಯಕ್ರಮಗಳನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಬೇಕು. ಆ ಮೂಲಕ ನಿಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.ಯೋಗ ಶಿಕ್ಷಕ ಎಚ್.ಪಿ. ನವೀನ್ ಕುಮಾರ್, ಸಿಬ್ಬಂದಿ ಸಂಜಯ್ ಇದ್ದರು‌.