ಸಾರಾಂಶ
ಸೊರಬ: ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಸೇರಿದಂತೆ ಹಲವು ಅನಿಷ್ಠ ಪದ್ಧತಿಗಳು ಆಚರಣೆಯಲ್ಲಿದ್ದ ಕಾಲಘಟ್ಟದಲ್ಲಿ ಸರಳ ವಚನಗಳ ಮೂಲಕ ಸಮಾಜದಲ್ಲಿ ಸುಧಾರಣೆ ತಂದವರು ವಚನಕಾರ ಬಸವಣ್ಣನವರು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಗುರುಕುಮಾರ ಪಾಟೀಲ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ತಾಲೂಕು ಆಡಳಿತ, ತಾಪಂ, ಪುರಸಭೆ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಟೌನ್ ವೀರಶೈವ ಸಮಾಜದ ವತಿಯಿಂದ ಹಮ್ಮಿಕೊಂಡ ಶ್ರೀ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಾಯಕವೇ ಕೈಲಾಸ ಎಂದು ಮನುಕುಲಕ್ಕೆ ಪಾಠ ಕಲಿಸಿಕೊಟ್ಟ ಬಸವಣ್ಣನವರು ಯಾವುದೇ ಜಾತಿಗೆ ಸೀಮಿತರಲ್ಲ. ದಯವೇ ಧರ್ಮದ ಮೂಲವಯ್ಯ ಎನ್ನುತ್ತಾ ಜಗತ್ತಿಗೆ ಮಾನವೀಯತೆಯ ಸಂದೇಶವನ್ನು ಸಾರಿದರು. ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಅನುಭವ ಮಂಟಪವನ್ನು ಸ್ಥಾಪಿಸಿದರು. ಈ ಮೂಲಕ ೧೨ ನೇ ಶತಮಾನದಲ್ಲಿಯೇ ಪ್ರಜಾಪ್ರಭುತ್ವದ ಮಹತ್ವ ತಿಳಿಸಿದರು. ಬಸವಣ್ಣನವರ ತತ್ವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಕೆ. ಜಯಶೀಲಗೌಡ ಮಾತನಾಡಿ, ಬಸವಣ್ಣನವರನ್ನು ಜಾತಿಗೆ ಸೀಮಿತಗೊಳಿಸುವುದು ಸಲ್ಲದು. ಜಗತ್ತಿನಲ್ಲಿಯೇ ಮೊದಲು ಸ್ತ್ರೀಯರಿಗೆ ಸ್ಥಾನಮಾನ ದೊರೆಕಿಸಿಕೊಟ್ಟು ಹಾಗೂ ಸಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದರು. ಪ್ರಸ್ತುತ ಇಂದಿಗೂ ಸಮಾಜದಲ್ಲಿ ಜಾತಿಯತೆ, ಕಂದಾಚಾರ, ಮೌಢ್ಯಗಳು ಜೀವಂತವಾಗಿರುವುದು ದುರ್ದೈವದ ಸಂಗತಿ ಎಂದರು.ಇದಕ್ಕೂ ಮೊದಲು ಶ್ರೀ ರಂಗನಾಥ ದೇವಸ್ಥಾನದ ಮುಂಭಾಗದಿಂದ ಮುಖ್ಯರಸ್ತೆ ಮಾರ್ಗವಾಗಿ ತಾಲೂಕು ಕಚೇರಿ ವರೆಗೆ ಬಸವಣ್ಣನವರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಗೆ ಡೊಳ್ಳು ಕುಣಿತ ಮೆರಗು ತಂದಿತು.
ಬಸವಣ್ಣನವರ ಕುರಿತು ಮಹಾಂತೇಶ್ ಕಳ್ಳಿಕೋನೆ ಉಪನ್ಯಾಸ ನೀಡಿದರು. ಸಾಮಾಜಿಕ ಚಿಂತಕ ರಾಜಪ್ಪ ಮಾಸ್ತರ್ ಮಾತನಾಡಿದರು.ತಹಸೀಲ್ದಾರ್ ಮಂಜುಳಾ ಬಿ. ಹೆಗಡಾಳ್, ಪುರಸಭೆ ಅಧ್ಯಕ್ಷ ಪ್ರಭು ಮೇಸ್ತ್ರಿ, ಕೆಎಂಎಫ್ ನಿರ್ದೇಶಕ ದಯಾನಂದಗೌಡ ತ್ಯಾವಗೋಡು, ಪಿಎಸ್‌ಐ ನಾಗರಾಜ್, ಟೌನ್ ವೀರಶೈವ ಸಮಾಜದ ಅಧ್ಯಕ್ಷ ವಿಶ್ವನಾಥ ಗೌಡ, ವೀರಶೈವ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಕುಸುಮಾ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಉಮೇಶ್ ಪಾಟೀಲ್, ತಾಲೂಕು ಅಧ್ಯಕ್ಷ ಈಶ್ವರಪ್ಪ, ಜಿಲ್ಲಾ ಸಂಚಾಲಕ ಮಂಜುನಾಥ ಆರೇಕೊಪ್ಪ, ಪಶು ಇಲಾಖೆಯ ಆಡಳಿತಾಧಿಕಾರಿ ಡಾ.ಎನ್‌ಆರ್. ಪ್ರದೀಪ್ ಕುಮಾರ್, ವೀರಶೈವ ಯುವ ವೇದಿಕೆ ಮಾಜಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ, ವಿಜೇಂದ್ರಸ್ವಾಮಿ ಎಣ್ಣೆಕೊಪ್ಪ, ಚಂದ್ರಪ್ಪ ಗಂಗೊಳ್ಳಿ, ಶರತ್‌ಸ್ವಾಮಿ ಇತರರು ಇದ್ದರು. ರೂಪ ಮಧುಕೇಶ್ವರ ನಿರ್ವಹಿಸಿದರು. ಆರಾಧ್ಯ ಪ್ರಾರ್ಥಿಸಿದರು.