ಸಾರಾಂಶ
ಶಿರಸಿ: ಪ್ರತಿಯೊಬ್ಬರು ತಮ್ಮ ಜವಾಬ್ದಾರಿಗಳನ್ನು ಅರಿತು ಕೆಲಸ ನಿರ್ವಹಿಸಿದಾಗ ಬಸವಣ್ಣನವರು ಕಂಡ ಕನಸು ನನಸಾಗಿಸಲು ಸಾಧ್ಯ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಅವರು ಬುಧವಾರ ನಗರ ಆಡಳಿತಸೌಧದ ಸಭಾಂಗಣದಲ್ಲಿ ತಾಲೂಕಾಡಳಿತ, ನಗರಸಭೆ, ತಾಲೂಕಾ ಪಂಚಾಯತ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಶಿರಸಿ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡ ಬಸವ ಜಯಂತಿಯನ್ನು ಉದ್ಘಾಟಿಸಿ, ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು.ಸಮಾನತೆಯ ಮೂಲಕ ಸಮಾಜದ ಅಭಿವೃದ್ಧಿಗೆ ಬಸವಣ್ಣ ಶ್ರಮಿಸಿದ್ದರು. ೧೨ನೇ ಶತಮಾನದಲ್ಲಿ ಬಾಳಿ ಬದುಕಿದಂತ ಮಹಾನ್ ಶ್ರೇಷ್ಠರಾಗಿ ಇಂದಿಗೂ ಎಲ್ಲರ ಮನಸ್ಸಿನಲ್ಲಿ ಬಸವಣ್ಣ ಶಾಶ್ವತವಾಗಿ ನೆಲೆಯೂರಿದ್ದಾರೆ. ಬಸಸಣ್ಣನವರ ಜಯಂತಿ ಆಚರಣೆಗೆ ಮಾತ್ರ ಸೀಮಿತವಾಗಿರಬಾರದು. ಅವರ ಆದರ್ಶಗಳನ್ನು ನಾವು ಅಳವಡಿಸಿಕೊಳ್ಳಬೇಕಿದೆ. ಎಲ್ಲವನ್ನೂ ಸರ್ಕಾರಗಳು ಮಾಡಲು ಸಾಧ್ಯವಿಲ್ಲ. ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ಕಾಯಕವೇ ಕೈಲಾಸ ಎಂದು ಪ್ರಾಮಾಣಿಕವಾಗಿ ಜವಾಬ್ದಾರಿಯಿಂದ ತಮ್ಮ ಕರ್ತವ್ಯ ನಿರ್ವಹಿಸಬೇಕು. ಬಡವ, ಬಲ್ಲಿದ ಎಂಬ ಭಾವನೆ ದೂರವಾಗಬೇಕು ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಮಾತನಾಡಿ, ಬಸವಣ್ಣನವರು ೧೨ನೇ ಶತಮಾನದಲ್ಲಿ ಬಾಳಿದಂತಹ ಶ್ರೇಷ್ಠ ವಚನಕಾರರು. ತಮ್ಮ ವಚನದ ಮೂಲಕ ವಿಶ್ವಗುರು ಎಂದು ಪ್ರಸಿದ್ಧಿ ಪಡೆದಿದ್ದರು. ಅವರ ತತ್ವಾದರ್ಶಗಳು ನಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಡಿಎಸ್‌ಪಿ ಕೆ.ಎಲ್.ಗಣೇಶ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ತಾಪಂ ಕಾರ್ಯನಿರ್ವಹಣಾಧಿಕಾರಿ ಸತೀಶ ಹೆಗಡೆ, ಬಿಇಓ ನಾಗರಾಜ ನಾಯ್ಕ, ತಾಲೂಕಾ ಆರೋಗ್ಯಾಧಿಕಾರಿ ಡಾ.ವಿನಾಯಕ ಭಟ್ಟ, ವೀರಶೈವ ಅಭಿವೃದ್ಧಿ ಸಮಾಜದ ಅಧ್ಯಕ್ಷ ಶಿವಯೋಗಿ ಹಂದ್ರಾಳ, ಸಮಾಜದ ಪ್ರಮುಖರಾದ ಜ್ಯೋತಿ ಪಾಟೀಲ್, ಶಶಿಕಲಾ ಚಂದ್ರಪಟ್ಟಣ ಮತ್ತಿತರರು ಉಪಸ್ಥಿತರಿದ್ದರು.
ಬಸವೇಶ್ವರರ ಜೀವನದ ಕುರಿತು ಸಿದ್ದಲಿಂಗೇಶ ನಾಶಿ ಉಪನ್ಯಾಸ ನೀಡಿದರು. ಗ್ರೇಡ್ ೨ ತಹಸೀಲ್ದಾರ ರಮೇಶ ಹೆಗಡೆ ಸ್ವಾಗತಿಸಿದರು. ಬಸವ ಬಳಗದ ಮಾತೆಯರು ಪ್ರಾರ್ಥಿಸಿದರು. ಬಸವರಾಜ ಚಕ್ರಸಾಲಿ ನಿರೂಪಿಸಿದರು.