ಬಸವಣ್ಣನವರು ಸಾರ್ವಕಾಲಿಕ ಸಾಂಸ್ಕೃತಿಕ ನಾಯಕ

| Published : Apr 30 2025, 12:30 AM IST

ಸಾರಾಂಶ

ಜನವಾಣಿಯನ್ನು ಲೋಕವಾಣಿಯಾಗಿಸಿ ಕಾಯಕ -ದಾಸೋಹಕ್ಕೆ ಮಹತ್ವ ನೀಡಿ ದುಡಿದು ಉಣ್ಣುವುದನ್ನು ಕಲಿಸಿಕೊಟ್ಟರು

ಬಳ್ಳಾರಿ: ಸಮ-ಸಮಾಜ ನಿರ್ಮಾಣದ ಆಶಯ ಹೊಂದಿದ್ದ ಬಸವಣ್ಣನವರು ಸಾರ್ವಕಾಲಿಕ ಸಾಂಸ್ಕೃತಿಕ ನಾಯಕ ಎಂದು ಉಪನ್ಯಾಸಕ ಡಾ. ಯು. ಶ್ರೀನಿವಾಸ ಮೂರ್ತಿ ಹೇಳಿದರು.

ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದ ಶ್ರೀ ವೆಂಕಾವಧೂತರ ಮಠದಲ್ಲಿ ಅಕ್ಷಯ ತೃತೀಯ ಅಮಾವಾಸ್ಯೆ ಪ್ರಯುಕ್ತ ಏರ್ಪಡಿಸಿದ್ದ ಪ್ರವಚನ ಮಾಲಿಕೆ ಕಾರ್ಯಕ್ರಮದಲ್ಲಿ "ವರ್ತಮಾನದಲ್ಲಿ ವಚನ ವಾಙ್ಮಯ " ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ವಚನಗಳು ಅನುಭವ ಮತ್ತು ಅನುಭಾವಿ ಸಾಹಿತ್ಯವಾಗಿದೆ. ವರ್ಣವ್ಯವಸ್ಥೆಯನ್ನು ತಿರಸ್ಕರಿಸಿ, ಲಿಂಗ ತಾರತಮ್ಯ, ವರ್ಗ ತಾರತಮ್ಯ, ಜಾತಿ ಎಂಬ ಮೈಲಿಗೆಯನ್ನು ಹೋಗಲಾಡಿಸಿ ಸಮಸಮಾಜ ನಿರ್ಮಾಣ ಮಾಡಲು ಅವಿರತ ಪ್ರಯತ್ನ ಪಟ್ಟರು. ಜನವಾಣಿಯನ್ನು ಲೋಕವಾಣಿಯಾಗಿಸಿ ಕಾಯಕ -ದಾಸೋಹಕ್ಕೆ ಮಹತ್ವ ನೀಡಿ ದುಡಿದು ಉಣ್ಣುವುದನ್ನು ಕಲಿಸಿಕೊಟ್ಟರು. ಬದುಕಿಗೆ ಹೊಸ ಪರಿಕಲ್ಪನೆ ನೀಡಿದರು ಎಂದರು.

ಸಂಗೀತ ಕಲಾವಿದ, ಹಾಡುಗಾರ ಎರ್ರಿಗೌಡ ಬಳ್ಳಾರಿಯವರ ಹಾಡುಗಳು ಜನರ ಮನ ರಂಜಿಸಿದವು. ಅವರಿಗೆ ತಬಲ ಸಾಥಿ ರಾಘವೇಂದ್ರ, ಹಾರ್ಮೋನಿಯಂ ಸಾಥ್ ಕರಿಬಸವನ ಗೌಡ ಬಾದನಟ್ಟಿ ನೀಡಿದರು. ಶ್ರೀ ವೆಂಕಾವಧೂತರ ಮಠದ ಟ್ರಸ್ಟ್ ಅಧ್ಯಕ್ಷ ಎಸ್.ಎಂ. ಬಸವೇಶ್ವರ ಸ್ವಾಮಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ನೂರಾರು ಭಕ್ತರು ಶ್ರೀ ವೆಂಕಾವದೂತರ ಪಲ್ಲಕ್ಕಿ ಸೇವೆ, ಉಚ್ಚಾಯ ಸೇವೆಯಲ್ಲಿ ಭಾಗವಹಿಸಿ ಪ್ರವಚನ ಕೇಳಿದರು. ಉಪನ್ಯಾಸಕ ಸಿದ್ದಲಿಂಗಯ್ಯ ಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.