ಮನುಷ್ಯನ್ನೇ ದೇವರು ಎಂದವರು ಬಸವಣ್ಣ: ಗಂಗಾಂಬಿಕೆ ಬಸವರಾಜ್

| Published : May 06 2025, 12:20 AM IST

ಸಾರಾಂಶ

ಹೊಳೆಹೊನ್ನೂರು: ಎಲ್ಲಾ ಪ್ರವಾದಿಗಳು ಮನುಷ್ಯನನ್ನು ದೇವರ ಕಡೆ ಹೋಗುವಂತೆ ಪ್ರೇರಿಪಿಸಿದರು. ಆದರೆ ಬಸವಣ್ಣ ಮಾತ್ರ ಮನುಷ್ಯನನ್ನೇ ದೇವರು ಎಂದರು ಎಂದು ಗಂಗಾಂಬಿಕೆ ಬಸವರಾಜ್ ಹೇಳಿದರು.

ಹೊಳೆಹೊನ್ನೂರು: ಎಲ್ಲಾ ಪ್ರವಾದಿಗಳು ಮನುಷ್ಯನನ್ನು ದೇವರ ಕಡೆ ಹೋಗುವಂತೆ ಪ್ರೇರಿಪಿಸಿದರು. ಆದರೆ ಬಸವಣ್ಣ ಮಾತ್ರ ಮನುಷ್ಯನನ್ನೇ ದೇವರು ಎಂದರು ಎಂದು ಗಂಗಾಂಬಿಕೆ ಬಸವರಾಜ್ ಹೇಳಿದರು.

ಸಮೀಪದ ಅರಕೆರೆಯ ಶ್ರೀ ಕರಿಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿದ್ಯದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಹಾಗೂ ಭದ್ರಾವತಿ ತಾಲೂಕು ಮಹಿಳಾ ಘಟಕದ ಸಹಯೋಗದಲ್ಲಿ ನಡೆದ ಸಾಂಸ್ಕೃತಿಕ ನಾಯಕ ಶ್ರೀ ಬಸವಣ್ಣನವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

12ನೇ ಶತಮಾನದಲ್ಲಿ ಸಮಾನತೆಯ ಪರವಾಗಿ ನಿಂತ ಮಹಾನ್ ನಾಯಕ ಬಸವಣ್ಣ. ಜಾತಿ, ಧರ್ಮ, ಮೇಲು-ಕೀಳು, ಉಚ್ಚ-ನೀಚ, ಬಡವ-ಶ್ರೀಮಂತ ಎಂಬ ಭೇದ ಭಾವವಿಲ್ಲದೆ ಎಲ್ಲರಲ್ಲೂ ಸೋದರತೆಯ ಮನೋಭಾವವನ್ನು ಹುಟ್ಟುಹಾಕಲು ಹಗಲಿರುಳು ಶ್ರಮಿಸಿದರು ಎಂದು ಸ್ಮರಿಸಿದರು.

12ನೇ ಶತಮಾನಲ್ಲಿಯೇ ಅಂತರ್ಜಾತಿ ವಿವಾಹವನ್ನು ನಡೆಸಿ ಪ್ರಬಲರ ಕೆಂಗಣ್ಣಿಗೆ ಗುರಿಯಾಗಿದ್ದರೂ ಅಂಜದೆ, ಅಳುಕದೆ ತನ್ನ ತತ್ವ ಸಿದ್ಧಾಂತಗಳಿಗೆ ಕಟಿಬದ್ಧರಾಗಿದರು. ಅವರ ವಚನಗಳು ಇನ್ನೂ ಹತ್ತು ತಲೆಮಾರುಗಳು ಉರುಳಿದರೂ ಕೂಡ ಅಂದಿಗೂ ಅನ್ವಯವಾಗಬಲ್ಲವುಗಳಾಗಿವೆ ಎಂದು ಹೇಳಿದರು.

ಕರ್ನಾಟಕ ಸೇರಿದಂತೆ ಇಡೀ ಭಾರತ ದೇಶವೇ ವಚನಗಳಿಗೆ ಮಾರುಹೋಗಿದೆ. ಮುಂದೊಂದು ದಿನ ಬಸವಣ್ಣ ರಾಜ್ಯದ ಸಾಂಸ್ಕೃತಿಕ ನಾಯಕ ಅಷ್ಟೇ ಅಲ್ಲ, ವಿಶ್ವದ ಸಾಂಸ್ಕೃತಿಕ ನಾಯಕ ಎಂದು ಘೋಷಣೆಯಾದರೂ ಅಚ್ಚರಿ ಇಲ್ಲ ಎಂದು ಹೇಳಿದರು.ದಿವ್ಯ ಸಾನಿಧ್ಯ ವಹಿಸಿದ ಶ್ರೀ ಕರಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯಿತ ಎಂಬುದು ಅವಿಭಜನೀಯ ಧರ್ಮ. ಆದರೆ ಕೆಲವರು ನಮ್ಮ ಸಂಖ್ಯೆಯನ್ನು ಕಡಿಮೆ ಮಾಡಿ, ನಮ್ಮ ನಮ್ಮಲ್ಲಿ ಒಡಕು ಮೂಡಿಸಲು ಉಪಜಾತಿಗಳಾಗಿ ವಿಂಗಡಿಸಲು ಯತ್ನಿಸುತ್ತಿದ್ದಾರೆ. ಸಾಧುಲಿಂಗಾಯ್ತ, ನೊಣಬ, ಬಣಜಿಗ, ಪಂಚಮಸಾಲಿ ಹೀಗೆ ಹಲವಾರು ಭಾಗಗಳಾಗಿ ವಿಭಜಿಸಿ, ನಮ್ಮ ಒಗ್ಗಟ್ಟನ್ನು ಒಡೆಯುವ ಉನ್ನಾರ ನಡೆದಿದೆ. ಆದ್ದರಿಂದ ಸಮಾಜದ ಬಂಧುಗಳು, ರಾಜಕಾರಿಣಿಗಳು ಮತ್ತು ಸಮಾಜದ ಯುವಕರು ಎಚ್ಚೆತ್ತುಕೊಳ್ಳಬೇಕು. ಅನ್ಯಾಯ ಆಗದಂತೆ ಸಮಾಜವನ್ನು ಕಾಪಾಡಬೇಕು. ಆಗಾದಾಗ ಮಾತ್ರ ವೀರಶೈವ ಲಿಂಗಾಯಿತರಿಗೆ ಉಳಗಾಲವಿದೆ ಎಂದು ತಿಳಿಸಿದರು.

ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸಾಕಮ್ಮ ಮಹೇಶ್ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ನಾಗರತ್ನ ವಾಗಿಶ್ ಕೋಠಿ, ಶಿವಕುಮಾರ್, ಕೆ.ಎಮ್.ಸಾಗರ್, ಕೆ.ಪಿ.ಕಿರಣ್‌ ಕುಮಾರ್, ಮಲ್ಲಾಪುರದ ಜಗದೀಶ್, ಕೂಡ್ಲಿಗೆರೆ ಜಗದೀಶ್, ಎಚ್.ಜಿ.ಮಲ್ಲಯ್ಯ, ಚನ್ನಪ್ಪಗೌಡ, ಸಮಾಜದ ಎಲ್ಲಾ ಪದಾಧಿಕಾರಿಗಳು, ಸಂಘ ಸಂಸ್ಥೆಯ ಪ್ರಮುಖರು, ಗ್ರಾಮಸ್ಥರು, ಸಾರ್ವಜನಿಕರು ಭಾಗವಹಿಸಿದ್ದರು.