ಬಸವಣ್ಣನವರು ಪರಿವರ್ತನೆಯ ಹರಿಕಾರರು: ಡಾ. ನಿಷ್ಠಿ ರುದ್ರಪ್ಪ

| Published : Dec 07 2024, 12:34 AM IST

ಬಸವಣ್ಣನವರು ಪರಿವರ್ತನೆಯ ಹರಿಕಾರರು: ಡಾ. ನಿಷ್ಠಿ ರುದ್ರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

. 12ನೇ ಶತಮಾನದಲ್ಲಿ ಬಸವಣ್ಣ ಹುಟ್ಟಿ ಬರದಿದ್ದರೆ ವೈದಿಕತೆ, ಮೌಢ್ಯತೆ, ಅಂಧಕಾರ, ಬಡತನ ಇನ್ನೂ ಹೆಚ್ಚಾಗುತ್ತಿತ್ತು. ಬಸವಣ್ಣ ಪರಿವರ್ತನೆಯ ಹರಿಕಾರರು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಅಭಿಪ್ರಾಯಪಟ್ಟರು.

ಸಂಡೂರು: ಸಮಾಜದಲ್ಲಿ ಮನೆ ಮಾಡಿದ್ದ ಮೂಢನಂಬಿಕೆ, ಅಂಧ ಶ್ರದ್ಧೆಗಳನ್ನು ಹೋಗಲಾಡಿಸಲು ಹಾಗೂ ಸಮಾಜದಲ್ಲಿ ಸಮಾನತೆ ಕಲ್ಪಿಸಲು ಶ್ರಮಿಸಿದವರು ಬಸವಣ್ಣನವರು. 12ನೇ ಶತಮಾನದಲ್ಲಿ ಬಸವಣ್ಣ ಹುಟ್ಟಿ ಬರದಿದ್ದರೆ ವೈದಿಕತೆ, ಮೌಢ್ಯತೆ, ಅಂಧಕಾರ, ಬಡತನ ಇನ್ನೂ ಹೆಚ್ಚಾಗುತ್ತಿತ್ತು. ಬಸವಣ್ಣ ಪರಿವರ್ತನೆಯ ಹರಿಕಾರರು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಡಾ. ನಿಷ್ಠಿ ರುದ್ರಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀಪ್ರಭುದೇವರ ಸಂಸ್ಥಾನ ವಿರಕ್ತಮಠದಲ್ಲಿ ಬುಧವಾರ ನಡೆದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಕನ್ನಡ ಕವಿಗಳು ಕಂಡ ಬಸವಣ್ಣ ಎಂಬ ವಿಷಯ ಕುರಿತು ತಮ್ಮ ಚಿಂತನೆಗಳನ್ನು ಮಂಡಿಸಿದರು.

ಕವಿ ಸಿದ್ದಯ್ಯ ಪುರಾಣಿಕರು ಬಸವಣ್ಣನವರನ್ನು ಭೂಮಿಯ ಬೆಳಕು ಎಂದು ಉಲ್ಲೇಖಿಸಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರು ಬಸವಣ್ಣನವರನ್ನು ಕಾರ್ತಿಕದ ಕತ್ತಲಲ್ಲಿ ಆಕಾಶ ದೀಪವಾಗಿ ನೀ ಬಂದೆ ಎಂದು ವರ್ಣಿಸಿದ್ದಾರೆ ಎಂದರು.

ಕನ್ನಡ ಜನಪದೀಯರು ಕಂಡ ಬಸವಣ್ಣ ಎಂಬ ವಿಷಯ ಕುರಿತು ಜಾನಪದ ವಿದ್ವಾಂಸರಾದ ಡಾ. ಎ.ಎನ್. ಸಿದ್ದೇಶ್ವರಿ ಉಪನ್ಯಾಸ ನೀಡಿ, ಜಾತಿ ವ್ಯವಸ್ಥೆ, ಅಸಮಾನತೆ ನೆಲೆಸಿದ್ದ ಸಮಾಜದಲ್ಲಿ ಸಮಾನತೆಯನ್ನು ತರಲು ಬಸವಣ್ಣನವರು ಶ್ರಮಿಸಿದರು. ಅವರ ಕಾರ್ಯಗಳು ಇಂದಿಗೂ ಸ್ಫೂರ್ತಿದಾಯಕವಾಗಿವೆ. ಹೆಣ್ಣು ಕೇವಲ ಮನೆಯ ಸೇವಕಿ ಎಂಬ ಮನಸ್ಥಿತಿ ಇದ್ದ ಸಂದರ್ಭದಲ್ಲಿ ತನ್ನ ಕುಟುಂಬದಿಂದಲೇ ಹೆಣ್ಣಿಗೆ ಸಮಾನತೆ, ಸ್ವಾತಂತ್ರ್ಯ ಕಲ್ಪಿಸಿ, ಹೊಸತನವನ್ನು ಬಸವಣ್ಣನವರು ಹುಟ್ಟು ಹಾಕಿದರು. ಇಷ್ಟಲಿಂಗದ ಪರಿಕಲ್ಪನೆ ತಂದು ಮೌಢ್ಯಗಳನ್ನು ಕಿತ್ತೆಸೆದರು ಎಂದು ಅಭಿಪ್ರಾಯಪಟ್ಟರು.

ತುಮಕೂರಿನ ಆಯುರ್ವೇದ ವೈದ್ಯ ಡಾ. ಬಿ. ನಂಜುಂಡಸ್ವಾಮಿ ವಚನ ಶಾಸ್ತ್ರಸಾರ ಆವೃತ್ತಿಗಳು ಎಂಬ ವಿಷಯ ಕುರಿತು ಉಪನ್ಯಾಸ ನೀಡಿ, ಫ.ಗು ಹಳಕಟ್ಟಿಯವರು ರಚಿಸಿದ ವಚನ ಶಾಸ್ತ್ರಸಾರ ಸಮಗ್ರ ಸಾಹಿತ್ಯದಲ್ಲಿ ಸೃಷ್ಟಿಯ ರಚನೆ, ಸ್ವರೂಪ, ಇಷ್ಟಲಿಂಗ ಮುಂತಾದ ವಿಷಯಗಳ ಬಗ್ಗೆ ವಿವರಿಸಿದ್ದಾರೆ. ಹಸ್ತಪ್ರತಿಗಳ ಮೂಲಕ ವಚನಗಳನ್ನು ಸಂಗ್ರಹಿಸಿ, ಅವುಗಳ ಮೂಲಕ ರಚಿಸಿದ ವಚನ ಶಾಸ್ತ್ರಸಾರ ಕೃತಿಯನ್ನು ಪ್ರಕಟಿಸಲು ಅವರು ತುಂಬಾ ಶ್ರಮಿಸಿದರು. ಶರಣರ ವಚನಗಳು ನಮಗೆ ದಾರಿದೀಪ ಎಂದರು. ಪ್ರಭುಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಕ್ಕನ ಬಳಗದವರು ಪ್ರಾರ್ಥಿಸಿದರು. ಎಂ. ಚರಂತಯ್ಯನವರು ಸ್ವಾಗತಿಸಿದರು. ಡಾ. ತಿಪ್ಪೇರುದ್ರ ಕೊಟಿಗಿ ನಿರೂಪಿಸಿದರು. ನಿರ್ಮಲಾ ವಂದಿಸಿದರು. ಹಲವು ಸಾಹಿತ್ಯಾಸಕ್ತರು ಹಾಗೂ ಶ್ರೀಮಠದ ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.