ಸಾರಾಂಶ
ಶಿರಸಿ: ಡಿ. ೯ರಂದು ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಕದಂಬ ಕನ್ನಡ ಪ್ರತ್ಯೇಕ ಜಿಲ್ಲೆ ಮತ್ತು ಬನವಾಸಿ ತಾಲೂಕು ರಚನೆಯ ಕೂಗು ಮುಟ್ಟಬೇಕಿದೆ. ಹಾಗಾಗಿ ಜನರ ಧ್ವನಿಯನ್ನು ಸರ್ಕಾರಕ್ಕೆ ತಲುಪಿಸುವ ಕೆಲಸ ನಡೆಯಲಿದೆ ಎಂದು ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ತಿಳಿಸಿದರು.
ಶುಕ್ರವಾರ ಬನವಾಸಿಯಲ್ಲಿ ಕದಂಬ ಜಿಲ್ಲೆ ಮತ್ತು ಬನವಾಸಿ ತಾಲೂಕು ರಚನೆಗಾಗಿ ಆಗ್ರಹಿಸಿ ನಡೆದ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿ ಮಾತನಾಡಿದರು.ಪ್ರತ್ಯೇಕ ಜಿಲ್ಲಾ ಹೋರಾಟಕ್ಕೆ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಬೆಂಬಲ ಸೂಚಿಸಿದ್ದಾರೆ. ಅದೇ ರೀತಿ ಶಾಸಕ ಭೀಮಣ್ಣ ನಾಯ್ಕ ಅವರೂ ಸಹಕಾರ ನೀಡುವುದರ ಜತೆಗೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿಸುವ ಮಾತನ್ನು ಹೇಳಿದ್ದಾರೆ. ಮಾಜಿ ಸಚಿವ ಆರ್.ವಿ. ದೇಶಪಾಂಡೆಯವರೂ ಪ್ರತ್ಯೇಕ ಜಿಲ್ಲೆಯಾದರೆ ನಮ್ಮದೇನೂ ಅಭ್ಯಂತರವಿಲ್ಲ ಎಂದಿದ್ದಾರೆ. ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಶಿರಸಿಯನ್ನು ಶೈಕ್ಷಣಿಕ ಜಿಲ್ಲೆಯನ್ನಾಗಿಸುವ ಮೂಲಕ ಪ್ರತ್ಯೇಕ ಜಿಲ್ಲೆ ಹೋರಾಟಕ್ಕೆ ಅಡಿಪಾಯವನ್ನು ಹಾಕಿಕೊಟ್ಟಿದ್ದಾರೆ ಎಂದರು.
ಬನವಾಸಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಉದಯಕುಮಾರ ಕಾನಳ್ಳಿ ಮಾತನಾಡಿ, ಬನವಾಸಿ ಬಗ್ಗೆ ಅಭಿಮಾನ ಎಲ್ಲ ಕಡೆಗಿದೆ. ಆದರೆ ಅಭಿವೃದ್ಧಿಯಲ್ಲಿ ಬನವಾಸಿಗೆ ಸ್ಥಾನವಿಲ್ಲದಿರುವುದು ಶೋಚನೀಯ. ಸಾಹಿತ್ಯ ಸಮ್ಮೇಳನದಲ್ಲಿ ಬನವಾಸಿ ಬಗ್ಗೆ ಸಾಕಷ್ಟು ಹೊಗಳಿಕೆಯ ಮಾತುಗಳು ಕೇಳಿ ಬಂದವು. ಆದರೆ ಬನವಾಸಿಯ ಅಭಿವೃದ್ಧಿ ಬಗ್ಗೆ ಕೇವಲ ಭಾಷಣಗಳಿಗಷ್ಟೇ ಸೀಮಿತವಾದುದು ದುರ್ದೈವದ ಸಂಗತಿ. ನಮಗೆ ಕದಂಬ ಕನ್ನಡ ಜಿಲ್ಲೆ ಆಗಬೇಕು, ಜತೆಗೆ ಬನವಾಸಿಯನ್ನು ತಾಲೂಕಾಗಿ ಘೋಷಿಸಬೇಕು ಎಂದರು.ಸಂಘಟನೆಯ ವಿ.ಎಂ. ಭಟ್ಟ ಮಾತನಾಡಿ, ಪ್ರತಿಯೊಂದು ಹೋರಾಟಕ್ಕೆ ನಾಯಕತ್ವದ ಅವಶ್ಯಕತೆ ಇದ್ದೇ ಇರುತ್ತದೆ. ಪ್ರತ್ಯೇಕ ಜಿಲ್ಲೆ ಅನಂತಮೂರ್ತಿ ಅವರಿಗೆ ಬೇಕೋ ಬೇಡವೋ ಗೊತ್ತಿಲ್ಲ, ಆದರೆ ಜನಸಾಮಾನ್ಯರಿಗೆ ಜಿಲ್ಲೆಯ ಅವಶ್ಯಕತೆ ಇದೆ. ನಮಗೆ ರೈಲ್ವೇ ಇಲ್ಲ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಲ್ಲ, ವಿಮಾನ ನಿಲ್ದಾಣವಿಲ್ಲ. ಅದೆಲ್ಲವೂ ಕರಾವಳಿಯ ಪಾಲಾಗಿದೆ ಎಂದರು.
ಘಟ್ಟದ ಮೇಲಿನ ಏಳು ತಾಲೂಕುಗಳ ಜನರಿಗಾಗಿ ಪ್ರತ್ಯೇಕ ಜಿಲ್ಲೆಯ ಅವಶ್ಯಕತೆ ಇದೆ. ಜತೆಗೆ ಐತಿಹಾಸಿಕ ಹಿನ್ನಲೆಯುಳ್ಳ ಬನವಾಸಿಗೆ ತಾಲೂಕು ಸ್ಥಾನಮಾನ ದೊರೆಯುವುದು ಇಂದಿನ ಅಗತ್ಯವಾಗಿದೆ ಎಂದರು.ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶ್ರೀಪಾದ ರಾಯ್ಸದ್ ಮಾತನಾಡಿ, ಈ ಭಾಗದ ಜನರು ಹೋರಾಟಗಳಿಂದ ಬೇಸತ್ತಿದ್ದಾರೆ. ಹೋರಾಟವನ್ನು ತಾರ್ಕಿಕ ಅಂತ್ಯವನ್ನು ಇಲ್ಲದಿದ್ದ ಕಾರಣ ಈ ವರೆಗೆ ಹೋರಾಟಗಳು ಕೈಗೂಡಲಿಲ್ಲ. ಇದೀಗ ನಮ್ಮ ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಿಸುವ ನಾಯಕತ್ವ ದೊರಕಿದೆ. ಈ ಭಾಗದ ಎಲ್ಲ ಪಂಚಾಯತಿಗಳು ಠರಾವು ಮಾಡಿ, ಸರಕಾರಕ್ಕೆ ಕಳುಹಿಸುವ ಕೆಲಸ ಆಗಬೇಕು. ಈ ಹೋರಾಟಕ್ಕೆ ಎಲ್ಲರೂ ಕೈಗೂಡಿಸಬೇಕು ಎಂದರು.ಬನವಾಸಿ ತಾಲೂಕು ಹೋರಾಟ ಸಮಿತಿ ಗೌರವಾಧ್ಯಕ್ಷ ಸಿ.ಎಫ್. ನಾಯ್ಕ, ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಿನಯ ಗೌಡ, ಬನವಾಸಿ ಗ್ರಾಪಂ ಅಧ್ಯಕ್ಷೆ ಬೀಬಿ ಆಯೇಷಾ, ರೈತ ಮುಖಂಡ ರಮೇಶ ನಾಯ್ಕ ಕುಪ್ಪಳ್ಳಿ ಗುಡ್ನಾಪುರ ಗ್ರಾಪಂ ಅಧ್ಯಕ್ಷೆ ನಿರ್ಮಲಾ ನಾಯ್ಕ, ಅಂಡಗಿ ಗ್ರಾಪಂ ಅಧ್ಯಕ್ಷ ಮಂಜುನಾಥ, ಧುರೀಣರಾದ ಗಣೇಶ ಸಣ್ಣಲಿಂಗಣ್ಣನವರ, ಸ್ಥಳೀಯ ಪ್ರಮುಖರಾದ ಜಯಶೀಲ ಗೌಡ, ಸ್ಥಳೀಯ ಹಿರಿಯರಾದ ನಾಡಿಗೇರ, ಗ್ರಾಪಂ ಮಾಜಿ ಸದಸ್ಯ ಅಶೋಕ ನಾಯ್ಕ, ಜಿಪಂ ಮಾಜಿ ಸದಸ್ಯರಾದ ಹಾಲಪ್ಪ ಜಕ್ಕಣ್ಣನವರ್, ಉಷಾ ಹೆಗಡೆ, ಪ್ರಮುಖರಾದ ಎ.ಆರ್. ನಾಯ್ಕ, ಮಂಜುನಾಥ ಪಾಟೀಲ್, ವಕೀಲ ಸಿ.ಎಫ್. ಈರೇಶ ಸೇರಿದಂತೆ ನೂರಾರು ಜನರು ಇದ್ದರು.ಭಾರಿ ಮೆರವಣಿಗೆ...ಬನವಾಸಿಯ ಉಮಾಮಧುಕೇಶ್ವರ ದೇವಾಲಯದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ನಾಡಕಚೇರಿಯವರೆಗೆ ಆಗಮಿಸಿ, ಉಪತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಮೆರವಣಿಗೆಯುದ್ದಕ್ಕೂ ಡೊಳ್ಳು ಕುಣಿತ ಹೆಚ್ಚು ಆಕರ್ಷಣೀಯವಾಗಿತ್ತು.ರುದ್ರಾಭಿಷೇಕ, ಪೂಜೆ: ಪ್ರತಿಭಟನಾ ಮೆರವಣಿಗೆಗೂ ಮುನ್ನ ಕ್ಷೇತ್ರದೇವತೆ ಉಮಾಮಧುಕೇಶ್ವರ ದೇವರಿಗೆ ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ರುದ್ರಾಭಿಷೇಕ ನಡೆಸಿ, ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.