ಹದಿನಾರು ಗ್ರಾಮದ ವೀರಶೈವ ಮುಖಂಡರಿಂದ ಪ್ರತಿಭಟನೆ

| Published : Dec 07 2024, 12:34 AM IST

ಸಾರಾಂಶ

ಜಾತಿ-ಧರ್ಮದ ಭೇದವಿಲ್ಲದೇ ಲಕ್ಷಾಂತರ ಬಡಮಕ್ಕಳಿಗೆ ಅನ್ನ-ಅಕ್ಷರ-ಆಶ್ರಯ ನೀಡಿದ ನಡೆದಾಡುವ ದೇವರ ಮೇಲೂ ಮತಾಂಧರ ಕೆಂಗಣ್ಣು ಬಿದ್ದಿರುವುದು ದುರ್ದೈವ

ಕನ್ನಡಪ್ರಭ ವಾರ್ತೆ ನಂಜನಗೂಡುಬೆಂಗಳೂರಿನ ಗಿರಿನಗರದ ಬಡಾವಣೆಯ ವೃತ್ತದಲ್ಲಿ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿಯನ್ನು ದುಷ್ಕರ್ಮಿಗಳು ಹಾನಿ ಮಾಡಿರುವ ಘಟನೆ ಖಂಡಿಸಿ ತಾಲೂಕಿನ ಹದಿನಾರು ಗ್ರಾಮದ ವೀರಶೈವ ಮುಖಂಡರು ಪ್ರತಿಭಟಿಸಿದರು.ಗ್ರಾಮದ ಬಸವೇಶ್ವರ ವೃತ್ತದಲ್ಲಿ ವೀರಶೈವ ಮುಖಂಡರು ಮತ್ತು ಗ್ರಾಮಸ್ಥರು ಪುತ್ಥಳಿ ಹಾನಿಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಘೋಷಣೆ ಕೂಗಿ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.ಮುಖಂಡರಾದ ಮಲ್ಲಿಕಾರ್ಜುನ ಮಾತನಾಡಿ, ಬೆಂಗಳೂರಿನ ಗಿರಿನಗರದಲ್ಲಿ ಪ್ರತಿಷ್ಠಾಪಿಸಲಾಗಿರುವ ತ್ರಿವಿಧ ದಾಸೋಹಿ ಹಾಗೂ ನಡೆದಾಡುವ ದೇವರೆಂದೇ ಹೆಸರು ಖ್ಯಾತಿ ಪಡೆದಿದ್ದ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುತ್ಥಳಿಯನ್ನು ಕಿಡಿಗೇಡಿಗಳು ಹಾನಿ ಮಾಡಿರುವ ಘಟನೆ ಅತ್ಯಂತ ಖಂಡನೀಯ ಮತ್ತು ಅಕ್ಷಮ್ಯ ಅಪರಾಧ. ಜಾತಿ-ಧರ್ಮದ ಭೇದವಿಲ್ಲದೇ ಲಕ್ಷಾಂತರ ಬಡಮಕ್ಕಳಿಗೆ ಅನ್ನ-ಅಕ್ಷರ-ಆಶ್ರಯ ನೀಡಿದ ನಡೆದಾಡುವ ದೇವರ ಮೇಲೂ ಮತಾಂಧರ ಕೆಂಗಣ್ಣು ಬಿದ್ದಿರುವುದು ದುರ್ದೈವ ಸಂಗತಿ ಎಂದರು.ಇಂತಹ ಕಿಡಿಗೇಡಿ ಪುಂಡರ ಹೆಡೆಮುರಿ ಕಟ್ಟಬೇಕಿದ್ದ ಸರ್ಕಾರವೇ, ಸಾಧು-ಸಂತರ ಮೇಲೆ ಎಫ್ಐಆರ್ ದಾಖಲಿಸುವ ಮೂಲಕ ಈ ಭಯೋತ್ಪಾದಕರಿಗೆ ನೈತಿಕ ಬೆಂಬಲ ನೀಡುತ್ತಿದೆ ಎಂದು ಟೀಕಿಸಿದರು. ಸರ್ಕಾರಗಳ ಓಲೈಕೆ, ತುಷ್ಟೀಕರಣ, ವೋಟ್ ಬ್ಯಾಂಕ್ ರಾಜಕಾರಣವೇ ಇಂತಹ ಘಟನೆಗಳು ರಾಜ್ಯದಲ್ಲಿ ಪದೇ ಪದೇ ಮರುಕಳಿಸುತ್ತಿರುವುದಕ್ಕೆ ನೇರ ಕಾರಣ ಎಂದು ಅವರು ಆರೋಪಿಸಿದರು.ಗ್ರಾಪಂ ಸದಸ್ಯ ರವಿಕುಮಾರ್ ಮಾತನಾಡಿ, ಬೆಂಗಳೂರಿನಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಪುತ್ಥಳಿಗೆ ಅಪಮಾನ ಮಾಡಿದ ಸಮಾಜ ಘಾತುಕರನ್ನು ಸರ್ಕಾರ ಕೂಡಲೇ ಬಂಧಿಸಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ಅಭಿಲಾಶ್, ತಾಪಂ ಮಾಜಿ ಸದಸ್ಯ ರೇವಣ್ಣ, ಮೋಹನ, ನಂಜುಂಡಸ್ವಾಮಿ, ಮಹೇಶ್, ಡಿ.ಕೆ.ಶಿವಕುಮಾರ್, ಗುರುಪ್ರಸಾದ್, ಗ್ರಾಮದ ವೀರಶೈವ ಮುಖಂಡರು ಮತ್ತು ಗ್ರಾಮಸ್ಥರು ಇದ್ದರು.