ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಶ್ರೀ ಜಗಜ್ಯೋತಿ ಬಸವೇಶ್ವರರು ೧೨ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಸರ್ವಧರ್ಮ ಸಮಾನತೆ ಹಾಗೂ ಅನುಭವ ಮಂಟಪದ ಮೂಲಕ ಉಂಟು ಮಾಡಿದ್ದ ಕ್ರಾಂತಿ ಮಹತ್ವ ಪಡೆದಿದೆ. ಕಾಯಕವೇ ಕೈಲಾಸವೆಂದು ಸಮಾನತೆಯ ಜ್ಯೋತಿ ಬೆಳಗಿದ ಬಸವಣ್ಣನವರ ಜಯಂತ್ಯುತ್ಸವ ಆಚರಣೆ ಅರ್ಥಪೂರ್ಣವಾಗಿದೆ ಎಂದು ಅಖಿಲ ಭಾರತ ವೀರಶೈವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ಹಿರಿಯ ವಕೀಲ ಕೆ.ರಾಜಶೇಖರಯ್ಯ ಅಭಿಪ್ರಾಯಪಟ್ಟರು.ಪಟ್ಟಣದ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಅಚರಣೆ ಸಮಿತಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಬಸವಣ್ಣನವರು, ಕೈವಾರ ತಾತಯ್ಯನವರು ಹಾಗೂ ಮಹಾವೀರರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಾಮಾಜಿಕ ವೈಪರಿತ್ಯವನ್ನು ಸಮಾನತೆಯ ಶಿಸ್ತಿನಲ್ಲಿ, ಸರ್ವರನ್ನು ಸಮಾಭಾವದಲ್ಲಿ ಕಾಣುವ ಜತೆಗೆ ಸರ್ವರ ಮನೋಭಾವವನ್ನು ಸಮಸ್ಥಿತಿಯಲ್ಲಿ ತರುವ ನಿಟ್ಟಿನಲ್ಲಿ ಬಸವಣ್ಣನವರ ಆದರ್ಶ ಜೀವನ ಇಡೀ ಮನುಕುಲಕ್ಕೆ ಹೆಮ್ಮೆಯಾಗಿದೆ. ವ್ಯಕ್ತಿ ಹಾಗೂ ವ್ಯಕ್ತಿತ್ವಕ್ಕೆ ಪ್ರಾಮುಖ್ಯತೆ ನೀಡದೇ ಜಾತಿ ವ್ಯವಸ್ಥೆಯು ಪ್ರಾಧಾನ್ಯತೆ ಪಡೆದಿದ್ದಾಗ ಕಾಯಕವೇ ಕೈಲಾಸವೆಂಬ ತತ್ವದಡಿ ಕೈಲಾಸ ಪಡೆಯಲು ಜನ ಸಾಮಾನ್ಯರನ್ನು ಪ್ರೆರೇಪಿಸಿ, ತಳಮಟ್ಟದ ಅಂದರೆ ಸಣ್ಣ ಕೆಲಸ ಮಾಡುವ ವ್ಯಕ್ತಿಯಿಂದ ಆಡಳಿತ ನಡೆಸುವ ವ್ಯಕ್ತಿಯ ತನಕ ಸಮಾನತೆಯ ಸಂದೇಶ ಸಾರುವ ಜತೆಗೆ ವೃತ್ತಿಯ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟರು. ಸಮಾನತೆಯ ಸಾರವನ್ನು ತಿಳಿಸಿಕೊಡುವ ಜತೆಗೆ ವಿಶ್ವಕ್ಕೆ ಅಗತ್ಯವಾದ ವಚನಗಳನ್ನು ನೀಡುವ ಮೂಲಕ ಶ್ರೀ ಜಗಜ್ಯೋತಿ ಬಸವೇಶ್ವರರು ವಿಶ್ವಮಾನವರಾದರು ಎಂದರು.
ತಹಸೀಲ್ದಾರ್ ಪ್ರವೀಣ್ ಕುಮಾರ್ ಪಿ.ಸಿ., ಬಿಇಒ ಸೋಮಲಿಂಗೇಗೌಡ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸಪ್ನ, ಸಿಡಿಪಿಒ ಜ್ಯೋತಿ ಲಕ್ಷ್ಮೀ, ಶಿರೆಸ್ತೆದಾರ್ ಲೋಕೇಶ್, ಪುರಸಭೆಯ ರಮೇಶ್, ಅಖಿಲ ಭಾರತ ವೀರಶೈವ ಮಹಾಸಭಾ ತಾ. ಅಧ್ಯಕ್ಷ ಎಂ.ಎನ್.ದೇವರಾಜಪ್ಪ, ಶ್ರೀ ವೆಂಕಟೇಶ್ವರ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕ ಚಂದ್ರಶೇಖರ್, ವೀರಶೈವ ಜನಾಂಗದ ಮುಖಂಡರಾದ ಜೈಶಂಕರ್, ಶಿವಾನಂದ, ಲೋಹಿತಾಶ್ವ, ಜಗದೀಶ್ ಇತರರು ಇದ್ದರು.