ಸಾರಾಂಶ
ಕನ್ನಡಪ್ರಭ ವಾರ್ತೆ ರಾಮದುರ್ಗ
12ನೇ ಶತಮಾನದಲ್ಲಿ ಅನುಭವ ಮಂಟಪ ಸ್ಥಾಪಿಸುವ ಮೂಲಕ ಸಮ ಸಮಾಜ ಸ್ಥಾಪನೆಯ ಕನಸು ಕಂಡಿದ್ದ ವಿಶ್ವಗುರು ಬಸವಣ್ಣನವರ ವಚನಗಳು ಮತ್ತು ಆದರ್ಶವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಂಡು ಮಾದರಿ ವ್ಯಕ್ತಿಗಳಾಗಿ ಜೀವನ ನಡೆಸಬೇಕು ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ವಿವಿಧ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮಿನಿ ವಿಧಾನಸೌಧದಲ್ಲಿ ನಡೆದ ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವ ಜಯಂತಿ ಉತ್ಸವದ ನಿಮಿತ್ತ ಬಸವೇಶ್ವರರ ಭಾವಚಿತ್ರಕೆ ಪೂಜೆ ಸಲ್ಲಿಸಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರ ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಂಡು ನಾವು ಮಾಡುವ ಕೆಲಸದಲ್ಲಿ ಅಳವಡಿಸಿಕೊಂಡರೇ ಜನಸಾಮಾನ್ಯರಿಗೆ ಮತ್ತು ಬಡವರಿಗೆ ನ್ಯಾಯ ಒದಗಿಸಲು ಸಾಧ್ಯವಿದೆ ಎಂದರು.ದೇಶದಲ್ಲಿ ಚುನಾವಣೆ ಸೇರಿದಂತೆ ಪ್ರತಿಯೊಂದರಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಸಂಘರ್ಷ ಹೆಚ್ಚುತ್ತಿದ್ದು, ಇದು ಬಸವಣ್ಣನವರ ಸಮಾನತೆ ಮತ್ತು ಐಕ್ಯತೆಯ ತತ್ವಗಳು ಅನುಷ್ಠಾನಕ್ಕೆ ತೊಂದರೆಯಾಗುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಸಿ.ಎಸ್.ಬೆಂಬಳಗಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಎಂ.ಎನ್.ಸಿದ್ಧಗಿರಿ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮಕ್ಕೂ ಮೊದಲು ವಿರಕ್ತಮಠದಲ್ಲಿ ವೀರಕ್ತಮಠ ಟ್ರಸ್ಟ್ ಅಧ್ಯಕ್ಷ ಪ್ರದೀಪಕುಮಾರ ಪಟ್ಟಣ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ತಹಸೀಲ್ದಾರ್ ಪ್ರಕಾಶ ಹೊಳೆಪ್ಪಗೋಳ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪೂರ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಚಿದಂಬರ ಮಡಿವಾಳರ, ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಜಿ.ವಿ.ನಾಡಗೌಡ್ರ, ತಾಪಂ ಎಂಡಿಎಂನ ಸಹಾಯಕ ನಿರ್ದೇಶಕ ರಾಜಶೇಖರ ಹಿರೇಮಠ, ಬಿಇಒ ಆರ್.ಟಿ.ಬಳಿಗಾರ, ಬಸವರಾಜ ಗಂಗಣ್ಣವರ, ಚಿವಯೋಗಿ ಚಿಕ್ಕೋಡಿ ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಬಸವಪರ ಸಂಘಟನೆಗಳ ಪದಾಧಿಕಾರಿಗಳಿದ್ದರು.