ಎಲ್ಲರಿಗೂ ಬಸವಣ್ಣರ ಸಂದೇಶ ದಾರಿ ದೀಪ

| Published : May 01 2025, 12:48 AM IST

ಸಾರಾಂಶ

ಹನ್ನೆರಡನೇ ಶತಮಾನದಲ್ಲಿ ವಚನ ಚಳುವಳಿಯ ನೇತಾರ ಬಸವಣ್ಣನವರು ಜನರಿಗೆ ಅರ್ಥವಾಗುವ ಅತ್ಯಂತ ಸರಳ ಭಾಷೆಯಲ್ಲಿ ವಚನಗಳನ್ನು ರಚಿಸುವ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಜನರಲ್ಲಿ ಅರಿವು ಮೂಡಿಸಿದರು ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಹನ್ನೆರಡನೇ ಶತಮಾನದಲ್ಲಿ ವಚನ ಚಳುವಳಿಯ ನೇತಾರ ಬಸವಣ್ಣನವರು ಜನರಿಗೆ ಅರ್ಥವಾಗುವ ಅತ್ಯಂತ ಸರಳ ಭಾಷೆಯಲ್ಲಿ ವಚನಗಳನ್ನು ರಚಿಸುವ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಜನರಲ್ಲಿ ಅರಿವು ಮೂಡಿಸಿದರು ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.

ನಗರದ ಬಸವನಗುಡಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ನಾಯಕ , ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಶಿವನನ್ನು ಒಲಿಸಿಕೊಳ್ಳಲು ಆಡಂಬರ,ಡಾಂಭಿಕತೆ ಅವಶ್ಯಕತೆ ಇಲ್ಲ. ಭಕ್ತಿ ಸರಳವಾಗಿ ಮತ್ತು ಪ್ರಾಮಾಣಿಕವಾಗಿದ್ದರೆ ಶಿವ ಎಂತವರಿಗೂ ಒಲಿಯುತ್ತಾನೆ ಎಂಬ ಸಂದೇಶವನ್ನು ನೀಡಿದರು. ಜಾತಿ ತಾರತಮ್ಯಗಳನ್ನು ನಿರಾಕರಿಸಿ ಸಮಾಜದ ವಿವಿಧ ಸ್ತರದ ಎಲ್ಲರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಕೆಲಸ ಮಾಡಿದರು. ಅವರ ವಚನಗಳ ಆಶಯಗಳನ್ನು ಅರ್ಥ ಮಾಡಿಕೊಂಡು ಸಮಾಜದ ಬದಲಾವಣೆಗೆ ಶ್ರಮಿಸಬೇಕು ಎಂದು ಪ್ರತಿಯೊಬ್ಬರೂ ಶ್ರಮಿಸಿದರು ಎಂದರು.

ಕಾಯಕವೇ ಕೈಲಾಸ:

ಬಸವಣ್ಣನವರು ಜಗತ್ತಿನ ಮೊದಲ ಸಂಸತ್ತು ಎಂದು ಕರೆಸಿಕೊಳ್ಳುವ ಅನುಭವ ಮಂಟಪವನ್ನು ಸ್ಥಾಪಿಸಿ ಮಹಿಳೆ, ಪುರುಷರು, ಕೆಳ ವರ್ಗದವರು ಎನ್ನದೆ ಎಲ್ಲ ವರ್ಗದವರಿಗೂ ಅವಕಾಶ ನೀಡಿದ್ದ ಅವರು ಆ ಕಾಲಕ್ಕೆ ಸಮಾಜದಲ್ಲಿ ಹೊಸ ಕ್ರಾಂತಿಯನ್ನು ಮಾಡಿದ ಶರಣರಲ್ಲಿ ಅಗ್ರಗಣ್ಯರು. ಇವರ ಒಂದೊಂದು ವಚನವೂ ಎಲ್ಲರ ಬದುಕಿಗೂ ಆದರ್ಶ, ಸ್ಫೂರ್ತಿಯಾಗಿದೆ. 12ನೇ ಶತಮಾನದ ಬಹುದೊಡ್ಡ ಸಮಾಜ ಸುಧಾರಕ ಬಸವಣ್ಣ. ಇವರ ಸಾರಥ್ಯದಲ್ಲಿ ನಡೆದ ಸುಧಾರಣೆಯ ಪ್ರಯತ್ನ ಒಂದು ಸಾಮಾಜಿಕ ಚಳವಳಿಯಾಗಿ ರೂಪುಗೊಂಡಿತ್ತು. ಇವರ ತತ್ವ, ಆದರ್ಶಗಳು, ಚಿಂತನೆಗಳು ಇಂದಿಗೂ ಪ್ರಸ್ತುತ. ಇದು ಜೀವನ ಪಾಠವೂ ಹೌದು. ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ಸಾಗಿದರೆ ಜೀವನ ಸುಖಮಯ. "ಕಾಯಕವೇ ಕೈಲಾಸ "ಎಂದು ಹೇಳಿ ನುಡಿದಂತೆ ನಡೆದವರು. ತಮ್ಮ ವಚನಗಳ ಮೂಲಕವೇ ಜ್ಞಾನದ ಬೆಳಕು ಚೆಲ್ಲಿದವರು.

ಬಸವಣ್ಣನವರ ಸಿದ್ದಾಂತಗಳ ಮೇಲೆ ಇಂದಿನ ನಮ್ಮ ಪ್ರಜಾಪ್ರಭುತ್ವ ನಿಂತಿದೆ. ಇವರ ವಚನಗಳು ಹಲವು ಭಾಷೆಗಳಿಗೆ ಭಾಷಾಂತರಗೊಂಡಿವೆ. ದೊಡ್ಡ ದೊಡ್ಡ ಮಹಾ ಗ್ರಂಥಗಳಲ್ಲಿರುವ ಆದರ್ಶಗಳ ಸಾರಂಶವನ್ನು ವಚನಗಳ ಮೂಲಕ ಸರಳ ವಿಧಾನದಲ್ಲಿ ಜನರಿಗೆ ತಲುಪಿಸುವ ಕಾರ್ಯವನ್ನು ಬಸವಣ್ಣ ಮಾಡಿದ್ದಾರೆ. ಅಂದಿನ ಅನುಭವ ಮಂಟಪವು ಇಂದಿನ ಸಂಸತ್ ಗೆ ಸಮ ಎಂದರೆ ತಪ್ಪಾಗಲಾರದು. ವಚನಗಳ ಮೂಲಕ ಜ್ಞಾನದ ಬೆಳಕು ಚೆಲ್ಲಿದ ಮಹಾನ್ ಮಾನವತಾವಾದಿ ಬಸವಣ್ಣನವರ ಸಂದೇಶ, ಆದರ್ಶಗಳು ಎಲ್ಲರಿಗೂ ಪಾಠ, ದಾರಿ ದೀಪವಾಗಬೇಕು ಎಂದು ಬಣ್ಣಿಸಿದರು.

ಉಪನ್ಯಾಸಕ ಎನ್.ಚಂದ್ರಶೇಖರ್ ಮಾತನಾಡಿ, 12ನೇ ಶತಮಾನದಲ್ಲೇ ಜಾತಿ ವ್ಯವಸ್ಥೆಯನ್ನು ತೊಲಗಿಸಲು ಪ್ರಾಮಾಣಿಕ ಪ್ರಯತ್ನಕ್ಕೆ ಮುಂದಾದವರು ಬಸವಣ್ಣನವರು ಆದರೂ ಕೂಡ 21ನೇ ಶತಮಾನದ ಪ್ರಸ್ತುತದಲ್ಲೂ ಜಾತಿ ವ್ಯವಸ್ಥೆಯ ಜಾಡ್ಯ ಹೋಗದಿರುವುದು ಕಳವಳಕಾರಿ ವಿಚಾರವಾಗಿದೆ. ಬಸವಣ್ಣನವರ ವಚನಗಳು ಜಾತಿ ವ್ಯವಸ್ಥೆಯ ಆಚರಣೆಯನ್ನು ನೇರವಾಗಿ ದಿಕ್ಕರಿಸುತ್ತವೆ.

ಬಸವಣ್ಣನವರಂತೆ ಅನೇಕ ವಚನಕಾರರು ವಚನ ಸಾಹಿತ್ಯ ರಚನೆ ಮೂಲಕ ಸಾಮಾಜಿಕ ಪರಿವರ್ತನೆಗೆ ಪ್ರಯತ್ನ ಪಟ್ಟಿದ್ದಾರೆ. ಆದ್ದರಿಂದ ಅನೇಕ ವಚನಕಾರರ ಜಯಂತಿಗಳನ್ನು ಸರ್ಕಾರ ಆಚರಣೆ ಮಾಡುತ್ತಿದೆ ಆ ಜಯಂತಿಗಳಿಗೂ ಎಲ್ಲಾ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಮುಂದಿನ ದಿನಗಳ ಅಚರಿಸಬೇಕು, ಜೊತೆಗೆ ಅವರ ವಿಚಾರದಾರೆಗಳು, ಆದರ್ಶಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿ ಕೊಳ್ಳಬೇಕು ಎಂದು ತಿಳಿಸಿದರು.

ಲಿಂಗಾಯತ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾನಂದ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಅತಿಕ್ ಪಾಷ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್,ತಹಸಿಲ್ದಾರ್ ಅನಿಲ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ನಾರಾಯಣಸ್ವಾಮಿ,ಸಮುದಾಯದ ಮುಖಂಡರಾದ ಬಿ ಗಿರೀಶ್,ಮಹೇಶ್ ಬಸ್ಸಾಪುರ ಹಾಗೂ ಸಮುದಾಯದ ಮುಖಂಡರು ಮತ್ತು ಸಾರ್ವಜನಿಕರು ಇದ್ದರು. ಸಿಕೆಬಿ-2

ಚಿಕ್ಕಬಳ್ಳಾಪುರದ ಬಸವನಗುಡಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ನಾಯಕ , ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಪುತ್ಥಳಿಗೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಪುಷ್ಪನಮನ ಸಲ್ಲಿಸಿದರ