ಸಾರಾಂಶ
ಕನ್ನಡಪ್ರಭ ವಾರ್ತೆ ಅಥಣಿ
ಬಸವಣ್ಣನವರ ವಚನಗಳಲ್ಲಿ ಬರುವ ಸಂದೇಶಗಳು ಮನುಕುಲಕ್ಕೆ ಸದಾ ದಾರಿದೀಪವಾಗಿವೆ. ಅವರು ನೀಡಿದ ವಚನ ಸಾಹಿತ್ಯದಲ್ಲಿನ ಸಂದೇಶಗಳು ಜಗತ್ತಿನ ಯಾವುದೇ ದಾರ್ಶನಿಕರ ಸಂದೇಶಗಳಿಗಿಂತ ಕಡಿಮೆ ಇಲ್ಲ ಎಂದು ಗಚ್ಚಿನಮಠದ ಶಿವಬಸವ ಸ್ವಾಮೀಜಿ ಹೇಳಿದರು.ಪಟ್ಟಣದ ಬಸವೇಶ್ವರ ವೃತ್ತದಲ್ಲಿನ ಬಸವೇಶ್ವರ ಯುವಕ ಮಂಡಳ, ಸುಕ್ಷೇತ್ರ ಗಚ್ಚಿನಮಠದ ಆಶ್ರಯದಲ್ಲಿ ನಡೆದ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜಾತಿಯಿಂದ ಮನುಷ್ಯನನ್ನು ಮೇಲು-ಕೀಳು ಎಂದು ನೋಡುತ್ತಿದ್ದ 12ನೇ ಶತಮಾನದಲ್ಲಿಯೇ, ಕರ್ನಾಟಕದಲ್ಲೊಂದು ವಚನ ಕ್ರಾಂತಿ ಮೂಲಕ ಇಡೀ ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ ಬಸವಣ್ಣ, ಜಗತ್ತು ಕಂಡ ಅಪರೂಪದ ವ್ಯಕ್ತಿ ಮತ್ತು ಜಗತ್ತಿಗೆ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ ಮಹಾ ಶಕ್ತಿಯಾಗಿದ್ದಾರೆ. ಅವರು ನೀಡಿರುವ ಸಂದೇಶಗಳು ಇಂದಿಗೂ ಪ್ರಸ್ತುತ, ಅವರ ವಚನಗಳು ಕೇವಲ ಭಾಷಣಕ್ಕೆ ಸೀಮಿತವಾಗದೆ, ನಮ್ಮೆಲ್ಲರ ಬದುಕಿನಲ್ಲಿ ಅಳವಡಿಸಿಕೊಂಡು, ಬಸವಣ್ಣನವರ ಆದರ್ಶಗಳನ್ನು ರೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.ಬಸವಣ್ಣನವರ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿದ ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಸಮ ಸಮಾಜದ ಕನಸು ಕಂಡು, ಅದನ್ನು ನನಸು ಮಾಡಲು ಶ್ರಮಿಸಿದವರು ಬಸವಣ್ಣನವರು. 12ನೇ ಶತಮಾನದಲ್ಲಿ ಅಸಮಾನತೆ, ಅಸ್ಪೃಶತೆ, ಭೇದ-ಭಾವ, ಮೂಢನಂಬಿಕೆ ವಿರೋಧಿಸಿ ಸಾಮಾಜಿಕ ಸುಧಾರಣೆಗಳನ್ನು ಮಾಡಿದ ಕ್ರಾಂತಿಕಾರಿ ಪುರುಷ ಬಸವಣ್ಣ. ಅವರು ಸಮಾಜ ಸುಧಾರಣೆಗಾಗಿ ನೀಡಿರುವ ವಚನ ಸಾಹಿತ್ಯದ ಸಂದೇಶಗಳು ವಿಶ್ವ ವ್ಯಾಪಿಯಾಗಿದ್ದು, ಅವರ ಕನ್ನಡದ ವಚನ ಸಾಹಿತ್ಯ ಜಗತ್ತಿನ ಅನೇಕ ಭಾಷೆಗಳಲ್ಲಿ ಭಾಷಾಂತರವಾಗಿದ್ದು, ಜಗತ್ತಿನ ಅನೇಕ ಸಂವಿಧಾನಗಳ ರಚನೆಗೆ ಪರಿಕಲ್ಪನೆ ನೀಡಿದ ಅವರ ಸಂದೇಶಗಳು ಇಂದಿಗೂ ನಮ್ಮೆಲ್ಲರ ಬದುಕಿಗೆ ಬೆಳಕಾಗಿವೆ. ಅವರು ಕೇವಲ ಕನ್ನಡ ನಾಡಿನ ಸಾಂಸ್ಕೃತಿಕ ನಾಯಕ ಅಲ್ಲ. ಅವರು ವಿಶ್ವಗುರುವಾಗಿ ಜಗತ್ತಿನ ಸಾಂಸ್ಕೃತಿಕ ನಾಯಕ ಎನಿಸಿಕೊಳ್ಳುತ್ತಾರೆ. ಬುದ್ಧ- ಬಸವ- ಅಂಬೇಡ್ಕರ್ ಅವರಂತಹ ಅನೇಕ ಮಹಾತ್ಮರ ವಿಚಾರಧಾರೆಗಳು ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಿದ್ದು, ಇತ್ತೀಚಿನ ದಿನಗಳಲ್ಲಿ ಮಹಾತ್ಮರ ದಿನಾಚರಣೆಗಳು ಕೇವಲ ಒಂದು ಧರ್ಮ ಮತ್ತು ಜಾತಿಗೆ ಸೀಮಿತವಾಗುತ್ತಿವೆ. ಅವರನ್ನು ಒಂದೇ ಸಮುದಾಯಕ್ಕೆ ಸೀಮಿತಗೊಳಿಸದೆ ಎಲ್ಲ ಸಮುದಾಯದವರು ಒಗ್ಗೂಡಿಕೊಂಡು ಜಯಂತಿ ಆಚರಿಸುವಂತಾಗಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಶೆಟ್ಟರ ಮಠದ ಮರುಳಸಿದ್ದ ಸ್ವಾಮೀಜಿ, ಮಾಜಿ ಶಾಸಕ ಶಹಜಾನ ಡೊಂಗರಗಾoವ, ಕಾಂಗ್ರೆಸ್ ಮುಖಂಡ ಸದಾಶಿವ ಬುಟಾಳಿ, ತಹಶೀಲ್ದಾರ್ ಸಿದ್ದರಾಯ ಬೋಸಗಿ, ವೀರಣ್ಣ ವಾಲಿ, ಜ್ಞಾನದೇವ ಕಾಂಬಳೆ, ಶಿವರುದ್ರ ಗೂಳಪ್ಪನವರ, ರಾಮನಗೌಡ ಪಾಟೀಲ, ಶಿವಾನಂದ ನಾಯಕ, ಮುರುಗೇಶ ಬಾನಿ ಸೇರಿದಂತೆ ಬಸವೇಶ್ವರ ಯುವಕ ಮಂಡಳದ ಸದಸ್ಯರು ಉಪಸ್ಥಿತರಿದ್ದರು.ಪಲ್ಲಕ್ಕಿ ಹಾಗೂ ಭಾವಚಿತ್ರ ಮೆರವಣಿಗೆ:
ಅಥಣಿಯ ಸುಕ್ಷೇತ್ರ ಗಚ್ಚಿನ ಮಠದಿಂದ ಬಸವೇಶ್ವರರ ಭಾವಚಿತ್ರದ ಪಲ್ಲಕ್ಕಿ ಉತ್ಸವವನ್ನು ವಿವಿಧ ವಾದ್ಯ ಮೇಲುಗಳೊಂದಿಗೆ ಬಸವೇಶ್ವರ ವೃತ್ತದ ವರೆಗೆ ಹಮ್ಮಿಕೊಳ್ಳಲಾಯಿತು. ಜಗಜ್ಯೋತಿ ಬಸವೇಶ್ವರ ವೃತ್ತದಲ್ಲಿ ಬಸವಣ್ಣನವರ ಪುತ್ತಳಿಗೆ ಮಾಲಾರ್ಪಣೆ ಮತ್ತು ವಿಶೇಷ ಪೂಜೆ ಸಲ್ಲಿಸಿದ ನಂತರ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಯಿತು. ಈ ಮೆರವಣಿಗೆಯಲ್ಲಿ ವಿವಿಧ ವಾದ್ಯ ಮೇಳಗಳು, ರೈತರು ತಮ್ಮ ಎತ್ತು (ಬಸವ)ಗಳನ್ನು ಅಲಂಕರಿಸಿಕೊಂಡು ಮೆರಗವಣಿಗೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಮೆರವಣಿಗೆ ಸಮಾರಂಭಗೊಂಡ ನಂತರ ಬಸವೇಶ್ವರ ವೃತ್ತದಲ್ಲಿ ಅನ್ನಸಂತ್ರಪಣೆ ಕಾರ್ಯಕ್ರಮ ಜರುಗಿತು.