ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕಾಯಕವೇ ಕೈಲಾಸ ಹಾಗೂ ದಾಸೋಹ ಪರಂಪರೆಯನ್ನು ಮನುಕುಲಕ್ಕೆ ಸಾರಿದ ವಿಶ್ವಗುರು ಬಸವಣ್ಣನವರ ತತ್ವಾದರ್ಶ, ಚಿಂತನೆಗಳು ಇಂದಿಗೂ ಮಾನವ ಕುಲಕ್ಕೆ ಸ್ಫೂರ್ತಿ ಮತ್ತು ಪ್ರೇರಣೆಯಾಗಿವೆ ಮಾಜಿ ಶಾಸಕ, ಬಿವಿವಿ ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.ಬಾಗಲಕೋಟೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಶ್ರೀ ಕಣವಿ ವೀರಭದ್ರೇಶ್ವರ ಟ್ರಸ್ಟ್ ಸಂಯುಕ್ತ ಆಶ್ರಯದಲ್ಲಿ ಸೋಮವಾರ ನಡೆದ ಜಗಜ್ಯೋತಿ ಬಸವಣ್ಣನವರ ಜಯಂತಿ ಉತ್ಸವದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
12ನೇ ಶತಮಾನದಲ್ಲಿ ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಸೇರಿದಂತೆ ಹಲವು ಅನಿಷ್ಠ ಪದ್ಧತಿಗಳು ಆಚರಣೆಯಲ್ಲಿದ್ದ ಕಾಲದಲ್ಲಿ ತಮ್ಮ ಸರಳ ವಚನಗಳ ಮೂಲಕ ಸಮಾಜದಲ್ಲಿ ಸುಧಾರಣೆ ತಂದವರು ಬಸವಣ್ಣನವರು. ಕಾಯಕವೇ ಕೈಲಾಸ ಎಂದು ಕಲಿಸಿಕೊಟ್ಟ ದಾಸೋಹ ಪರಂಪರೆ ಜಗತ್ತಿಗೆ ಸಾರಿ ವಿಶ್ವಗುರುವಾದರು. ಬಸವಣ್ಣನವರ ತತ್ವಾದರ್ಶಗಳು, ಚಿಂತನೆಗಳು ಇಂದಿಗೂ ಮಾನವ ಕುಲಕ್ಕೆ ಸ್ಫೂರ್ತಿ ಮತ್ತು ಪ್ರೇರಣೆಯಾಗಿವೆ ಎಂದರು.ಸಾನ್ನಿಧ್ಯ ವಹಿಸಿದ್ದ ಟೀಕಿನಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಕರ್ನಾಟಕದ ಪಾಲಿಗೆ 12ನೇ ಶತಮಾನ ಬಹಳ ಮಹತ್ವದ್ದು, ಸಮಾಜದಲ್ಲಿ ಹೊಸ ಚಿಂತನೆ ರೂಪಗೊಂಡ ಕಾಲವದು. ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಇತಿಹಾಸದಲ್ಲಿ ವಿಶಿಷ್ಟವಾದ ಕಾಲಘಟ್ಟವಿದು, ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ, ಇವ ನಮ್ಮವ, ಇವ ನಮ್ಮವ ಇವ ನಮ್ಮವನೆಂದೆನಿಸಯ್ಯಾ ಕೂಡಲ ಸಂಗಮದೇವಾ ನಿಮ್ಮ ಮಹಾಮನೆಯ ಮಗನೆಂದೆನಿಸಯ್ಯಾ ಇದು ಈ ಕಾಲಕ್ಕೂ ಪ್ರಸ್ತುತವಾಗಿದೆ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಜಿ.ಎನ್.ಪಾಟೀಲ. ಕಣವಿ ವೀರಭದ್ರೇಶ್ವರ ಟ್ರಸ್ಟ್ ಅಧ್ಯಕ್ಷರಾದ ಪ್ರಕಾಶ ರೇವಡಿಗಾರ. ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕುಮಾರಸ್ವಾಮಿ ಹಿರೇಮಠ(ಚಿತ್ತರಗಿ),ಬಸವರಾಜ ಇಂಡಿ, ಬಸವರಾಜು ಮುಕುಪಿ, ಮಲ್ಲಿಕಾಜರ್ುನ ಮಠ. ಸಂಗಣ್ಣ ಶಿರೂರ, ರಾಮಣ್ಣ ಜುಮನಾಳ, ಮಹೇಶ ಕಕರೆಡ್ಡಿ, ಮಲ್ಲಿಕಾರ್ಜುನ ಹಂಡಿ, ಚಂದ್ರಶೇಖರ ಶೆಟ್ಟರ, ವಿರೇಶ ಉಪ್ಪಿನ, ಗುರುಬಸವ ಸೂಳಿಬಾವಿ, ರಾಜು ಪಾಟೀಲ, ಮಹಾಂತೇಶ ಶೆಟ್ಟರ, ವಿಜಯಕುಮಾರ ಅಂಗಡಿ, ಅಶೋಕ ಕರಡಿ, ಶಿವಾನಂದ ಶಹಬಾದಿ,ವೀರಣ್ಣ ಹಲಕುರ್ಕಿ, ಸುರೇಶಬಾಬು ನಿಡಗುಂದಿ, ರವಿ ಸರದೇಸಾಯಿ, ಪ್ರಭುಸ್ವಾಮಿ ಸರಗಣಾಚಾರಿ, ಸೇರಿದಂತೆ ಅಕ್ಕನ ಬಳಗದ ಅಧ್ಯಕ್ಷರು ಸದಸ್ಯರು ಸೇರಿದಂತೆ ಸಾವಿರಾರು ಜನ ಭಾಗವಹಿಸಿದ್ದರು.
ಭಾವಚಿತ್ರದ ಭವ್ಯ ಮೆರವಣಿಗೆ:ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಆವರಣದಲ್ಲಿಯ ಶ್ರೀ ಬೀಳೂರ ಗುರುಬಸವ ಮಂದಿರದಲ್ಲಿ ಪೂಜೆ ಸಲ್ಲಿಸಿ ಸಕಲ ವಾದ್ಯ ವೈಭವಗಳೊಂದಿಗೆ ಆರಂಭವಾದ ಭಾವಚಿತ್ರ ಮೆರವಣಿಗೆ ಬಿವಿವಿಎಸ್ ಆವರಣದಿಂದ ಕಾಲೇಜ್ ರಸ್ತೆಯ ಮೂಲಕ ಬಸವೇಶ್ವರ ಸರ್ಕಲ್, ಸ್ಟೇಶನ್ ರಸ್ತೆ, ಪೊಲೀಸ್ ಚೌಕಿ, ವಲ್ಲಭಭಾಯಿ ಚೌಕ ಸುತ್ತುವರೆದು, ಟಾಂಗಾ ಸ್ಟ್ಯಾಂಡ್, ಪೊಲೀಸ್ ಚೌಕಿ, ಹಳೆಯ ಅಡತ್ ಬಜಾರ್, ಬಸವೇಶ್ವರ ಬ್ಯಾಂಕ್, ಟೀಕಿನಮಠ ಮುಂದೆ ಹಾಯ್ದು ಬೀಳೂರ ಶ್ರೀ ಗುರುಬಸವ ಮಂದಿರ ತಲುಪಿ ಮಂಗಲಗೊಂಡಿತು. ಬಣ್ಣಗಳಿಂದ ಶೃಂಗರಿಸಿದ ನೂರಾರು ಎತ್ತುಗಳು ಮೆರವಣಿಯಲ್ಲಿ ಜನರ ಗಮನ ಸೆಳೆದವು.
ವಚನ ಸಂಪುಟಗಳ ಪಲ್ಲಕ್ಕಿ ಉತ್ಸವ:ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಆಡಳಿತ ಕಚೇರಿಯಲ್ಲಿ ಬಸವಣ್ಣನವರ ಮೂರ್ತಿ ಹಾಗೂ ವಚನ ಸಂಪುಟಗಳನ್ನು ಪಲ್ಲಕ್ಕಿಯಲ್ಲಿಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಸಂಘದ ಕೇಂದ್ರ ಕಚೇರಿಯಿಂದ ಪಲ್ಲಕ್ಕಿ ಉತ್ಸವ ಪ್ರಾರಂಭವಾಗಿ ಭವ್ಯ ಮೆರವಣಿಗೆಯಲ್ಲಿ ಪಾಲ್ಗೊಂಡಿತು.