ಬಸವಣ್ಣನವರ ವಿಚಾರಧಾರೆ ಸಾರ್ವಕಾಲಿಕ ಸತ್ಯದರ್ಶನ: ಡಾ.ಎಸ್. ಎನ್. ಆನಂದ್

| Published : May 17 2025, 02:11 AM IST

ಬಸವಣ್ಣನವರ ವಿಚಾರಧಾರೆ ಸಾರ್ವಕಾಲಿಕ ಸತ್ಯದರ್ಶನ: ಡಾ.ಎಸ್. ಎನ್. ಆನಂದ್
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ಬಸವಣ್ಣನವರನ್ನು ಪೂಜಿಸುವುದಕ್ಕಿಂತ ಅವರ ವಿಚಾರಧಾರೆಗಳನ್ನು ಅರ್ಥೈಸಿಕೊಂಡು ಅಳವಡಿಸಿಕೊಂಡಲ್ಲಿ ನಮ್ಮ ಬದುಕು ಸಾರ್ಥಕದ ಎಲ್ಲೆ ಮುಟ್ಟಲು ಸಾಧ್ಯ ಎಂದು ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಎನ್.ಆನಂದ್ ಹೇಳಿದರು.

ಶರಣರ ಬೆಳದಿಂಗಳು ಉಪನ್ಯಾಸ ಮಾಲಿಕೆಕನ್ನಡಪ್ರಭ ವಾರ್ತೆ, ಕಡೂರು

ಬಸವಣ್ಣನವರನ್ನು ಪೂಜಿಸುವುದಕ್ಕಿಂತ ಅವರ ವಿಚಾರಧಾರೆಗಳನ್ನು ಅರ್ಥೈಸಿಕೊಂಡು ಅಳವಡಿಸಿಕೊಂಡಲ್ಲಿ ನಮ್ಮ ಬದುಕು ಸಾರ್ಥಕದ ಎಲ್ಲೆ ಮುಟ್ಟಲು ಸಾಧ್ಯ ಎಂದು ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಎನ್.ಆನಂದ್ ಹೇಳಿದರು.

ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಮತ್ತು ಯಳನಾಡು ಸಂಸ್ಥಾನ ಮಠ ಕಡೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಶರಣರ ಬೆಳದಿಂಗಳು ಉಪನ್ಯಾಸ ಮಾಲಿಕೆಯಲ್ಲಿ ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಎನ್ನುವ ವಿಷಯ ಕುರಿತು ಉಪನ್ಯಾಸ ನೀಡಿದರು. ಬಸವಣ್ಣನವರು ಸಮಾನತೆಯ ಹರಿಕಾರರಾಗಿ ಸಮ ಸಮಾಜದ ನಿರ್ಮಾಣಕ್ಕೆ ಕಟಿಬದ್ಧರಾಗಿ ನಿಂತವರು. ಆ ಕಾರಣಕ್ಕೆ ದೇಶದ ಮೂಲೆ ಮೂಲೆಗಳಿಂದ ಕಲ್ಯಾಣಕ್ಕೆ ಬಂದು ಅನುಭವ ಮಂಟಪದ ಮೂಲಕ ತಮ್ಮದೇ ಆದ ವಿಚಾರಗಳನ್ನು ಚರ್ಚಿಸಿ ಅವುಗಳನ್ನು ವಚನಗಳ ಮೂಲಕ ಪ್ರತಿಯೊಬ್ಬ ಜನ ಸಾಮಾನ್ಯರು ಓದಿ ಅರ್ಥೈಸಿಕೊಂಡು ಬದುಕಿನಲ್ಲಿ ಅಳವಡಿಸಿಕೊಂಡು ಬದುಕನ್ನು ಸಾರ್ಥಕ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟರು ಎಂದರು.

ಬಸವಣ್ಣನವರ ಬಗ್ಗೆ ಬಹಳಷ್ಟುಜನ ದಾರ್ಶನಿಕರು, ಚಿಂತಕರು, ಕವಿಗಳು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನ ಮಾಡಿ ಅವರು ಕೇವಲ ವ್ಯಕ್ತಿಯಲ್ಲ ಈ ಜಗತ್ತಿನ ಶಕ್ತಿಯಾಗಿ ಹೊರ ಹೊಮ್ಮಿದವರು. ಕಾರಣ ಬೇರೆಯವರನ್ನು ತಿದ್ದುವುದಕ್ಕಿಂತ ತನ್ನನ್ನು ತಾನು ತಿದ್ದಿಕೊಳ್ಳುವ ಮೂಲಕ ಅಂತರಂಗ ಬಹಿರಂಗಶುದ್ಧಿ ನಮ್ಮಲ್ಲಿ ಮೊದಲು ಆಗಬೇಕು ಎಂದು ಪ್ರತಿಪಾದಿಸಿದವರು ಬಸವಣ್ಣ ಎಂದು ಹೇಳಿದ್ದಾರೆ.

ಆ ಮೂಲಕ ಆತ್ಮ, ಸಮಾಜ ಶುದ್ದೀಕರಣ ಕಾಣಲು ಸಾಧ್ಯ ಮತ್ತು ದೇಹವನ್ನು ದೇವಾಲಯವಾಗಿಸಿಕೊಳ್ಳಬೇಕು. ಸದ್ಗುಣ ಗಳನ್ನು ಬೆಳೆಸಿಕೊಂಡು ಬದುಕನ್ನು ಪಾವನಗೊಳಿಸಿಕೊಳ್ಳಬೇಕು ಎಂದರು.ಅವರ ವಿಚಾರಧಾರೆಗಳನ್ನು ಈ ಜಗತ್ತಿಗೆ ನೀಡಿ ಜಗಜ್ಯೋತಿ ಬಸವಣ್ಣ, ಕರ್ನಾಟಕದ ಸಾಂಸ್ಕೃತಿಕ ನಾಯಕನಾಗಿ ಹೊರಹೊಮ್ಮಿದರು ಎಂದು ತಿಳಿಸಿದರು.ಕಾರ್ಯಕ್ರಮ ಉದ್ಘಾಟಿಸಿದ ದಲಿತ ಮುಖಂಡ ಶೂದ್ರ ಶ್ರೀನಿವಾಸ್ ಮಾತನಾಡಿ, ಹನ್ನೆರಡನೇ ಶತಮಾನದ ಬಸವಣ್ಣನ ವಿಚಾರಧಾರೆಗಳು ಬಹಳಷ್ಟು ದೇಶಗಳ ಸಂವಿಧಾನಕ್ಕೆ ಕಾಯಕಲ್ಪ ನೀಡಿದವು. ಅದೇ ರೀತಿ ಅಂಬೇಡ್ಕರ್ ಅವರ ವಿಚಾರಧಾರೆ ಗಳಲ್ಲಿ ಬಸವಣ್ಣನವರ ತತ್ವಗಳು ಅಳವಡಿಕೆ ಆಗಿದ್ದು ವಿಶೇಷ. ಬಸವಣ್ಣ ಒಂದು ಜಾತಿಗೆ ಸೀಮಿತರಾದವರಲ್ಲ ಇಡೀ ಜಗತ್ತಿನ ಮನುಕುಲಕ್ಕೆ ಜ್ಯೋತಿಯಾಗಿ ತಳವರ್ಗದ ಜನರನ್ನು ಸಮಸಮಾಜದ ಕಲ್ಪನೆಯಡಿ ಮೇಲೆತ್ತುವ ಪ್ರಯತ್ನ ಮಾಡಿದವರು ಎಂದರು. ಸಾಧಕರಾದ ಸಾಹಿತಿ ಹೊಸೂರು ಪುಟ್ಟರಾಜು, ಸಿದ್ಧರಾಮೇಶ್ವರ ಬಸ್ಸಿನ ಮಾಲೀಕ ಸಿದ್ಧರಾಮಪ್ಪ, ವೈದ್ಯಕೀಯ ವೃತ್ತಿಯ ಮೂಲಕ ಜನರ ಸಮೀಪದ ವೈದ್ಯ ಡಾ. ಉಮೇಶ್ ಅವರನ್ನು ಅಭಿನಂದಿಸಲಾಯಿತು.

ಯಳನಾಡು ಮಠದ ಶ್ರೀ ಜ್ಞಾನಪ್ರಭುಸಿದ್ಧರಾಮ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಎಂ. ರಂಗಪ್ಪ ವಹಿಸಿದ್ದರು. ಜಾಗತಿಕ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಗಂಗಾಧರ ಶಿವಪುರ, ತಾಲೂಕು ಅಧ್ಯಕ್ಷ ಹೋಗರೇಹಳ್ಳಿ ಗಣೇಶ್ , ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ. ವಿರೂಪಾಕ್ಷಪ್ಪ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಸುಜಾತಾ ಜಡೆಮಲ್ಲಪ್ಪ, ಕಾರ್ಯದರ್ಶಿ ಮೋಹನ್ ಕುಮಾರ್, ಹೋಬಳಿ ಅಧ್ಯಕ್ಷ ಗರ್ಜೆ ರಾಜಶೇಖರ್, ಕೆ.ಬಿ ಬಸವರಾಜಪ್ಪ, ಎ.ಎಂ.ಕುಮಾರಪ್ಪ, ಭಾನು, ಉಮಾ ಬಸವರಾಜ್, ವೀಣಾ ಈಶ್ವರಪ್ಪ ಕೆ.ಬಿ ಸುನಿತಾ ಆಸಂದಿ ಚಂದ್ರು, ತಡಗ ಜಯಣ್ಣ ನಿಡಘಟ್ಟ ನಾಗರಾಜ ಮುಂತಾದವರು ಭಾಗವಹಿಸಿದ್ದರು.

15ಕೆಕೆಡಿಯು2.

ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಮತ್ತು ಯಳನಾಡು ಸಂಸ್ಥಾನ ಮಠ ಕಡೂರು ಇವರ ಸಂಯುಕ್ತಾಶ್ರಯದಲ್ಲಿ ನಡೆದ ಶರಣರ ಬೆಳದಿಂಗಳು ಉಪನ್ಯಾಸ ಕಾರ್ಯಕ್ರಮ ನಡೆಯಿತು.