ಜಿಲ್ಲಾಡಳಿತದಿಂದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಅಭಿಮತ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಬಸವಣ್ಣನವರ ನೇತೃತ್ವದಲ್ಲಿ 850 ವರ್ಷಗಳ ಹಿಂದೆ ನಡೆದ ಶರಣ ಚಳವಳಿಯ ಮೂಲಕ ಬಂದ ವಚನಗಳು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಜೊತೆಗೆ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಕಾರಣವಾಗಿವೆ. ಆದ್ದರಿಂದಲೇ ಇಂದು ವಚನಗಳು ಕರ್ನಾಟಕದ ಆಚೆಗೂ ಮಾತ್ರವಲ್ಲದೆ ಭಾರತದ ಆಚೆಗೂ ತಲುಪಿವೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ನಗರದ ಬಸವನಗುಡಿ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ವಿಶ್ವಗುರು, ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ‌ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಶರಣರಲ್ಲಿನ‌ ಪ್ರಾಮಾಣಿಕ ಭಕ್ತಿ, ಸೇವೆ, ಆಧ್ಯಾತ್ಮ, ಮೌಲ್ಯಗಳು ಪ್ರಸ್ತುತ ಸಮಾಜಕ್ಕೆ ಪ್ರೇರಣೆಯಾಗಬೇಕು. ಸರಳವಾಗಿ ಆಡುಭಾಷೆಯಲ್ಲಿ ರಚನೆಯಾದ ವಚನಗಳು ಇಂದು ವಿಶ್ವಮಾನ್ಯವಾಗಿವೆ. ಆವತ್ತಿನ ಅನುಭವ ಮಂಟಪವೇ ಮೊದಲ ಸಂಸತ್ತು. ಅನುಭವ ಮಂಟಪದಲ್ಲಿನ ಚಿಂತನ ಮಂಥನಗಳು ದೊಡ್ಡ ಜ್ಞಾನವನ್ನೇ ಪಸರಿಸಿವೆ ಎಂದರು.

ಇಂದಿನ ವಿದ್ಯಾರ್ಥಿ ಯುವ ಪೀಳಿಗೆ ಶರಣರ ಸಾರ್ವತ್ರಿಕ ಮತ್ತು ಸಾರ್ವಕಾಲಿಕ ಮೌಲ್ಯಗಳನ್ನು ಅಧ್ಯಯನ ಮಾಡಬೇಕು. ಆ ಮೂಲಕ ಸಾಮಾಜಿಕ ಬದಲಾವಣೆಗೆ ಕಾರಣವಾಗಬೇಕು. ಕಂದಾಚಾರ,ಮೌಢ್ಯ, ಮೇಲು ಕೀಳುಗಳಂತಹ ಅನಿಷ್ಟಗಳನ್ನು ತೊಡೆದು ಹಾಕಲು ವಚನಗಳನ್ನು ಪೂರಕವಾಗಿ ಮತ್ತು ಪ್ರೇರಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.


ಜಿಪಂ ಸಿಇಒ ಡಾ. ವೈ ನವೀನ್ ಭಟ್ ಮಾತನಾಡಿ, ಭಾರತದ ಚರಿತ್ರೆಯಲ್ಲಿ ಬಸವಣ್ಣ ಅವರದ್ದು ಅಚ್ಚಳಿಯದ ವ್ಯಕ್ತಿತ್ವವಾಗಿದೆ. ಬಾಲ್ಯಕಾಲಕ್ಕಾಗಲೇ ಗೊಡ್ಡು ಸಂಪ್ರದಾಯಗಳಿಗೆ ತಿಲಾಂಜಲಿಯಿತ್ತ ಧೀಮಂತ ಚೇತನ. ಆರೋಗ್ಯವಂತ ಸಮಾಜವನ್ನು ಕಟ್ಟಲು ತಮ್ಮಿಡೀ ಬದುಕನ್ನೇ ಪಣವಾಗಿಟ್ಟ ದಿಟ್ಟ ಧೀಮಂತ ಮತ್ತೊಬ್ಬರಿಲ್ಲ. ಹೀಗಾಗಿಯೇ ಬಸವಣ್ಣ ಎಂದು ಕರೆದರೆ ಇಡೀ ಕರುನಾಡು ಓಗೊಡುತ್ತದೆ. ಕವಿಯೊಬ್ಬರು ಬಸವ ಎಂದರೆ ಬಡತನ ದೂರವಾಗುತ್ತದೆ ಎಂದು ಹೇಳಿರುವುದು ಅಕ್ಷರಶಃ ಸತ್ಯವಾದ ಮಾತಾಗಿದೆ ಎಂದು ಹೇಳಿದರು.

ಸುನಿಲ್ ಆರಾಧ್ಯ ತಮ್ಮ ಉಪನ್ಯಾಸದಲ್ಲಿ ಬಸವಣ್ಣನವರ ಜೀವನ ಚರಿತ್ರೆಯ ವಿವಿಧ ಮಜಲುಗಳ ಬಗ್ಗೆ ಹಾಗೂ ಅವರ ವಿಚಾರಧಾರೆಗಳ ಕುರಿತು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡಿದ ಸಮುದಾಯದ ಸಾಧಕರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.

ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಡಿ.ಎಚ್. ಅಶ್ವಿನ್, ಸಮುದಾಯದ ಮುಖಂಡರಾದ ಮಹೇಶ್ ಬಸಾಪುರ, ಗಿರೀಶ್ ಈಶ್ವರಪ್ಪ, ಪರಮೇಶ್ವರ್, ಶೈಲಜಾ ಗಿರೀಶ್, ಗೀತಾರಾಧ್ಯ, ಸೇರಿದಂತೆ ಬಸವಣ್ಣನವರ ಅಭಿಮಾನಿಗಳು ಇದ್ದರು.

ಸಿಕೆಬಿ-2 ನಗರದ ಬಸವನಗುಡಿ ಮುಂಭಾಗದಲ್ಲಿ ನಡೆದ ವಿಶ್ವಗುರು, ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ‌ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭುರವರು ಬಸವಣ್ಣನವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.