ಬಸವಣ್ಣನವರು ಕಾಯಕದಲ್ಲಿ ಕೈಲಾಸ ಕಂಡವರು-ಡಾ. ಸುರೇಶ

| Published : Nov 01 2025, 02:30 AM IST

ಸಾರಾಂಶ

ಬಸವಣ್ಣನವರು ಕಾಯಕದಲ್ಲಿ ಕೈಲಾಸವನ್ನು ಕಂಡವರು ಎಂದು ಹಾವೇರಿ ವಿಶ್ವವಿದ್ಯಾಲಯ ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ ಹೇಳಿದರು.

ರಾಣಿಬೆನ್ನೂರು: ಬಸವಣ್ಣನವರು ಕಾಯಕದಲ್ಲಿ ಕೈಲಾಸವನ್ನು ಕಂಡವರು ಎಂದು ಹಾವೇರಿ ವಿಶ್ವವಿದ್ಯಾಲಯ ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ ಹೇಳಿದರು. ನಗರದ ಸ್ಟೇಷನ್ ರಸ್ತೆ ರೋಟರಿ ಸ್ಕೂಲ್ ಬಳಿಯ ಭಕ್ತಿ ಭವನ ಸಭಾಂಗಣದಲ್ಲಿ ಸ್ಥಳೀಯ ಅನುಭವ ಮಂಟಪ ಶರಣರ ಬಳಗ, ಬಸವ ಕೇಂದ್ರ, ಶ್ರೀ ಬಸವ ಜ್ಯೋತಿ ಮಹಿಳಾ ಮಂಡಳ, ಶ್ರೀ ಗುರು ಬಸವ ಜ್ಞಾನ ಜ್ಯೋತಿ ಸೇವಾ ಸಮಿತಿ ಆಯೋಜಿಸಿದ್ದ ಶರಣರ ಸ್ಮರಣೋತ್ಸವ ಪ್ರಶಸ್ತಿ ಪ್ರದಾನ ಮತ್ತು ಅಭಿನಂದನಾ ಗ್ರಂಥ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣನವರನ್ನು ಅವಮಾನಿಸುವ ಕೆಲಸ ಎಂದು ಯಾರೂ ಮಾಡಲು ಮುಂದಾಗಬಾರದು. ಶರಣರ ವಿಚಾರಧಾರೆಗಳನ್ನು ಸಮರ್ಪಕವಾಗಿ ಭಕ್ತ ಬಾಂಧವರಿಗೆ ತಲುಪಬೇಕಾದರೆ ಸಮಯದ ಪರಿಕಲ್ಪನೆ ಮೊದಲು ಅಳವಡಿಸಿಕೊಳ್ಳಬೇಕು ಎಂದರು.ಜಂಗಮ ಜ್ಯೋತಿ ಪ್ರಶಸ್ತಿ ಸ್ವೀಕರಿಸಿದ ಕೊಡಗು ಜಿಲ್ಲೆ ಕುಶಾಲನಗರದ ಅಶೋಕ ಆಲೂರ ಮಾತನಾಡಿ, ಬಸವಣ್ಣನವರು ತಮ್ಮ ಜೀವನದುದ್ದಕ್ಕೂ ಸಮ ಸಮಾಜದ ನಿರ್ಮಾಣಕ್ಕಾಗಿ ತನ್ನದೇ ವಿವೇಚನೆಯಲ್ಲಿ ಬದುಕಿ ಬಾಳಿ ಮಾರ್ಗದರ್ಶನ ನೀಡಿದ ಮಹಾನ್ ಸಂತರಾಗಿದ್ದರು. ಆತ್ಮದ ಉದ್ಧಾರಕ್ಕೆ ಬಸವಾದಿ ಶರಣರು ಬಹುದೊಡ್ಡ ಚಿಂತನೆ ನಡೆಸಿದವರಾಗಿದ್ದಾರೆ. ಬಸವಾದಿ ಶರಣರು ನುಡಿದಂತೆ ಕಾಯಕದಲ್ಲಿ ಬರುವ ಅಂಶಗಳನ್ನು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಂಡರೆ ಜನ್ಮ ಸಾರ್ಥಕವಾಗಲಿದೆ. ಈ ನಿಟ್ಟಿನಲ್ಲಿ ಶರಣಬಳಗವು ಚಿಂತನೆ ನಡೆಸಿದಾಗ ಮಾತ್ರ, ಸುಂದರ ಬದುಕು ಮತ್ತು ಜೀವನ ನಡೆಸಲು ಸಾಧ್ಯವಾಗುವುದು. ಕಾಯಕವು ದೈಹಿಕವಾಗಿರಬೇಕು. ಕೇವಲ ಬೌದ್ಧಿಕ ಚಿಂತನೆ ಮಾತ್ರವಲ್ಲ, ಆಚರಣೆ ಮತ್ತು ಆಚಾರದ ಸಂಗಮವಾಗಬೇಕು. ಮೂಢನಂಬಿಕೆಗಳನ್ನು ಹೊಡೆದೊಡಿಸಿದ ಮಹಾನ್ ಚಿಂತಕ, ಕಾಯಕ ಐಚ್ಛಿಕ. ಇಂದು ಆಧುನಿಕ ಬದುಕಿನಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಕಾಣುವಂತಾಗಿದೆ. ಜಗತ್ತಿನ ಯಾವ ದಾರ್ಶನಿಕರು, ಇಂತಹ ಉದಾತ್ತ ವಿಚಾರಗಳು ಹೇಳಿಲ್ಲ. ದಯೇ ಮತ್ತು ಧರ್ಮ ಇವೆರಡೂ ಶರಣ ಧರ್ಮದ ಸಿದ್ಧಾಂತವಾಗಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ಲಿಂಗನಾಯಕನಹಳ್ಳಿ ಜಂಗಮ ಕ್ಷೇತ್ರದ ಶ್ರೀ ಚನ್ನವೀರ ಮಹಾಸ್ವಾಮಿಗಳು ಮಾತನಾಡಿ, ಸಮಾಜದಲ್ಲಿ ಬಸವ ವಚನಗಳ ಮೂಲಕ, ವಚನಗಳ ಸಾರವನ್ನು ಜನಸಾಮಾನ್ಯರಿಗೂ ತಿಳಿಸುವ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕಾಗಿದೆ ಎಂದರು. ಬಸವ ಜ್ಯೋತಿ ಪ್ರಶಸ್ತಿ ಸ್ವೀಕರಿಸಿದ ಬಸವ ಟಿವಿ ಸಂಸ್ಥಾಪಕ ಈ. ಕೃಷ್ಣಪ್ಪ ಮಾತನಾಡಿ, ಬಸವ ಸಂಸ್ಕೃತಿಯಲ್ಲಿ ಹಮ್ಮು ಬಿಮ್ಮುಗಳಿಗೆ ಅವಕಾಶವಿಲ್ಲ. ಹಮ್ಮು ಗಿಮ್ಮು ಕಳೆದುಕೊಂಡು ಬಂದಿರುವ ಬಸವ ಟಿವಿ ಚಾನೆಲ್, ಧರ್ಮ ಪ್ರಚಾರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಇಂದಿನ ವೈಚಾರಿಕ ವಿಚಾರದಲ್ಲಿ, ಆಧುನಿಕ ತಂತ್ರಜ್ಞಾನಗಳ ಮೂಲಕ ಬಸವ ಧರ್ಮ ಜಾಗೃತಿಗಾಗಿ ಹೊಸ ಹೊಸ ಆವಿಷ್ಕಾರಗಳ ಮಾಧ್ಯಮವನ್ನು ಬಳಸುವುದು, ಬಳಸಿಕೊಳ್ಳುವುದು ಅನಿವಾರ್ಯವಾಗಿದೆ ಈ ನಿಟ್ಟಿನಲ್ಲಿ ಮಠ-ಪೀಠಗಳು, ಮಠಾಧೀಶರು ಮುಂದಾಗಬೇಕು ಎಂದರು.ಶಿರೂರು ಶ್ರೀ ಬಸವಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಮಾರಂಭದಲ್ಲಿ ಸುವರ್ಣಮ್ಮ ಪಾಟೀಲ ವಿರಚಿತ ಶ್ರೀ ಬಸವ ಜ್ಯೋತಿ ಸ್ಮರಣ ಸಂಚಿಕೆ ಮತ್ತು ಸುವರ್ಣ ಸಿರಿ ಅಭಿನಂದನ ಗ್ರಂಥವನ್ನು ಲೋಕಾರ್ಪಣೆಗೊಳಿಸಲಾಯಿತು.ದಾವಣಗೆರೆಯ ಶಂಭುಲಿಂಗಪ್ಪ ಅಜ್ಜಂಪುರ ಶೆಟ್ರು ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ವಿಜಯಪುರದ ಡಾ. ಸರಸ್ವತಿ ಪಾಟೀಲ, ಬಾಗಲಕೋಟೆಯ ಗೌರಮ್ಮ ನಾಶಿ, ಬದಾಮಿಯ ಶಾರದಮ್ಮ ಪಾಟೀಲ ಮಾತನಾಡಿದರು.ಮಾಜಿ ಶಾಸಕ ಅರುಣ ಕುಮಾರ ಪೂಜಾರ, ವರ್ತಕ ಮಲ್ಲೇಶಪ್ಪ ಅರಕೇರಿ, ಅಧ್ಯಕ್ಷತೆ ವಹಿಸಿದ್ದರು.ಕೊಟ್ರೇಶಪ್ಪ ಎಮ್ಮಿ, ಭಾರತಿ ಜಂಬಗಿ, ಲಲಿತಾ ವಿಜಾಪುರ, ಅನ್ನಪೂರ್ಣ ಅಂಗಡಿ, ಡಾ. ಹಾಲನಗೌಡ ಪಾಟೀಲ, ಸ್ವರೂಪ ಪಾಟೀಲ, ರಾಜೇಶ್ವರಿ ಜಿ. ಎಚ್, ಸರೋಜಾ ಹುಲಿಹಳ್ಳಿ, ಉಮಾ ಹುಲಿಕಂತಿಮಠ, ಗೀತಾ ಜಂಬಗಿ, ಗಾಯಿತ್ರಮ್ಮ ಕುರುವತ್ತಿ, ರಾಜೇಶ್ವರಿ ಪಾಟೀಲ, ಸರೋಜಾ ಹುಲಿಹಳ್ಳಿ, ವಚನಶ್ರೀ ಪಾಟೀಲ, ವೀಣಾ ಹೊದ್ದಿಗೇರಿ ಮತ್ತಿತರರಿದ್ದರು.