ಕನ್ನಡಪ್ರಭ ವಾರ್ತೆ ಆಲೂರು

12ನೇ ಶತಮಾನದಲ್ಲಿ ಕಾಯಕ ತತ್ವದ ಮೂಲಕ ಸಮ ಸಮಾಜ ನಿರ್ಮಿಸಿದ ಮಹಾನ್ ಜ್ಞಾನಿ ಬಸವಣ್ಣನವರು ಎಂದು ತಹಸೀಲ್ದಾರ್‌ ಮಲ್ಲಿಕಾರ್ಜುನ್ ಹೇಳಿದರು.ಪಟ್ಟಣದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜಿಸಿದ್ದ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ವಚನಗಳ ಮೂಲಕ ಸಮಾಜವನ್ನು ತಿದ್ದಿದ ಬಸವಣ್ಣನವರು ಅನುಭವ ಮಂಟಪ ನಿರ್ಮಿಸಿ ಸಮಾನತೆ ಬಗ್ಗೆ ವಿಶ್ವಕ್ಕೆ ಸಾರಿ ಮಾದರಿಯಾದರು. ಅವರ ತತ್ವ, ವಚನಗಳು ಸಾರ್ವಕಾಲಿಕ ಮೌಲ್ಯಗಳಾಗಿದ್ದು, ಅದನ್ನು ಪ್ರತಿಯೊಬ್ಬರೂ ಅನುಸರಿಸಬೇಕು, ೧೨ನೇ ಶತಮಾನ ತನ್ನದೇ ಆದ ಮಹತ್ವ ಪಡೆದಿದ್ದು ಜಗಜ್ಯೋತಿ ಬಸವೇಶ್ವರರು ಸರಳ ವಚನಗಳ ಮುಖಾಂತರ ಸಮಾಜದಲ್ಲಿರುವ ಅನಿಷ್ಟಗಳ ನಿರ್ಮೂಲನೆಗೆ ಪ್ರಯತ್ನಿಸಿದರು ಹಾಗೂ ಎಲ್ಲ ವರ್ಗಗಳ ಜನರಲ್ಲಿ ಸಮಾನತೆ ತರಲು ಹಗಲಿರುಳು ಶ್ರಮಿಸಿದ ಇವರ ಆದರ್ಶಗಳು ನಮಗೆಲ್ಲ ಅನುಕರಣೀಯ ಎಂದರು.ಮುಖ್ಯ ಭಾಷಣಕಾರರಾಗಿ ಶಿಕ್ಷಕ ಇಂದ್ರೇಶ್ ವೇರ್ವೆ ಮಾತನಾಡಿ, ವಿಶ್ವಗುರು ಬಸವಣ್ಣನವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುವುದಲ್ಲದೆ, ಕಾಯಕ ಸಂಸ್ಕೃತಿ ಬೆಳೆಸಿಕೊಂಡಾಗ ಮಾತ್ರ ಕಾಯಕವೇ ಕೈಲಾಸ ಎಂಬ ಬಸಣ್ಣನವರ ತತ್ವ ಅನುಷ್ಠಾನಗೊಳ್ಳುವುದು. ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸಿ ಜಾತಿ, ಲಿಂಗ ಬೇಧವಿಲ್ಲದೆ ಎಲ್ಲಾ ಶರಣರು, ಕವಿಗಳು ಮತ್ತು ತತ್ವಜ್ಞಾನಿಗಳು ಒಗ್ಗೂಡಿ ವಚನಗಳ ಮೂಲಕ ಸಾಮಾಜಿಕ ಸಮಾನತೆ ಹಾಗೂ ಕಾಯಕ ತತ್ವವನ್ನು ಚರ್ಚಿಸಲು ಪ್ರಯತ್ನಿಸಿದ ಕೀರ್ತಿ ಬಸವಣ್ಣವರಿಗೆ ಸಲ್ಲುತ್ತದೆ. ತಮ್ಮ ವಚನಗಳ ಮೂಲಕವೇ ಸಮಾಜ ಸುಧಾರಣೆಗಾಗಿ ಶ್ರಮಿಸಿದ ಈ ಮಹಾನ್‌ ವ್ಯಕ್ತಿಯ ಜನ್ಮ ಜಯಂತಿಯನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನವಾದ ಅಕ್ಷಯ ತೃತೀಯ ದಿನದಂದು ಆಚರಿಸಲಾಗುತ್ತದೆ ಎಂದು ವಿವರಿಸಿದರು.ಇದೇ ಸಂದರ್ಭದಲ್ಲಿ ನಿವೃತ್ತ ಸೈನಿಕರಾದ ರಾಜಪ್ಪ ಬಡಾವಣೆಯ ನಿವಾಸಿ ವಿರೂಪಾಕ್ಷಯ್ಯ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಮುಖಂಡರಿಂದ ಅಸಮಾಧಾನ:

ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಚರಿಸುವ ಕಾರ್ಯಕ್ರಮಗಳಲ್ಲಿ ತಾಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು, ಆದರೆ ಬೆರಳೆಣಿಕೆಯಷ್ಟು ಅಧಿಕಾರಿಗಳು ಮಾತ್ರ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ಇನ್ನು ಮುಂದೆಯಾದರೂ ಎಲ್ಲ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಕಾರ್ಯಕ್ರಮಗಳಿಗೆ ಹಾಜರಾಗುವಂತೆ ಆದೇಶ ಹೊರಡಿಸಬೇಕು ಮತ್ತು ಇಂದಿನ ಕಾರ್ಯಕ್ರಮಕ್ಕೆ ಹಾಜರಾಗದ ಅಧಿಕಾರಿಗಳಿಗೆ ನೋಟಿಸ್ ನೀಡುವ ಮೂಲಕ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್ ಕುಮಾರ್‌, ಶಿರಸ್ತೇದಾರ್‌ ಅಂಕೇಗೌಡ, ತಾಲೂಕು ಪಂಚಾಯಿತಿ ಎಡಿ ಕೇಶವಮೂರ್ತಿ, ವೀರಶೈವ ಲಿಂಗಾಯತ ಸಂಘದ ತಾಲೂಕು ಅಧ್ಯಕ್ಷ ರೇಣುಕಾ ಪ್ರಸಾದ್, ಉಪಾಧ್ಯಕ್ಷ ಡಿ.ಎಸ್ ಜಯಣ್ಣ, ಖಜಾಂಚಿ ಟೀಕರಾಜು, ಸಹ ಕಾರ್ಯದರ್ಶಿ ಡಾ. ಜಯರಾಜ್, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಅಜಿತ್ ಸಿ, ಕಾರ್ಯದರ್ಶಿ ಚೇತನ್, ಹಿಂದುಳಿದ ವರ್ಗಗಳ ಜಿಲ್ಲಾ ಕಾರ್ಯಾಧ್ಯಕ್ಷ ಶಂಕರಾಚಾರ್ಯ ಸೇರಿದಂತೆ ಸಮಾಜದ ಮುಖಂಡರು ಹಾಜರಿದ್ದರು.

======

ಪೋಟೋ ಕ್ಯಾಪ್ಶನ್:


ಆಲೂರು ಪಟ್ಟಣದ ಮಿನಿವಿಧಾನಸೌಧ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮವನ್ನು ತಹಸೀಲ್ದಾರ್‌ ಮಲ್ಲಿಕಾರ್ಜುನ್ ಉದ್ಘಾಟಿಸಿದರು. ರೇಣುಕಾ ಪ್ರಸಾದ್, ಡಿ ಎಸ್ ಜಯಣ್ಣ, ಅಜಿತ್, ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಮಂಜುನಾಥ್, ಬಿಇಒ ಕೃಷ್ಣೇಗೌಡ ಸೇರಿದಂತೆ ಮುಂತಾದವರಿದ್ದರು‌.