ಸಾರಾಂಶ
ಆನಂದಪುರ: 12ನೇ ಶತಮಾನದಲ್ಲಿಯೇ ಅನುಭವ ಮಂಟಪದಡಿ ಎಲ್ಲಾ ಜಾತಿ ವರ್ಗದ ಜನರನ್ನು ಒಂದುಗೂಡಿಸಿ, ಸಮಾನತೆಯ ಮೂಲಕ ವಿಶ್ವದ ಪ್ರಜಾಪ್ರಭುತ್ವಕ್ಕೆ ಭದ್ರಬುನಾದಿ ಹಾಕಿದ ಯುಗಪುರುಷ ಬಸವಣ್ಣ ಎಂದು ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದರು.
ಆನಂದಪುರ: 12ನೇ ಶತಮಾನದಲ್ಲಿಯೇ ಅನುಭವ ಮಂಟಪದಡಿ ಎಲ್ಲಾ ಜಾತಿ ವರ್ಗದ ಜನರನ್ನು ಒಂದುಗೂಡಿಸಿ, ಸಮಾನತೆಯ ಮೂಲಕ ವಿಶ್ವದ ಪ್ರಜಾಪ್ರಭುತ್ವಕ್ಕೆ ಭದ್ರಬುನಾದಿ ಹಾಕಿದ ಯುಗಪುರುಷ ಬಸವಣ್ಣ ಎಂದು ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದರು.
ಮುರುಘಮಠದಲ್ಲಿ ನಡೆದ 590ನೇ ಮಾಸಿಕ ಶಿವಾನುಭವ ಗೋಷ್ಠಿ ಹಾಗೂ ಬಸವ ಜಯಂತಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ವಚನಗಳ ಮೂಲಕ ಸಮಾಜದ ಪಿಡುಗುಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಿದ ಮಹಾನ್ ದರ್ಶನಿಕ ಬಸವಣ್ಣನವರು. ಬಸವಣ್ಣನವರ ತತ್ವ ಸಿದ್ಧಾಂತಗಳನ್ನು 12ನೇ ಶತಮಾನದಲ್ಲಿಯೇ ಅನುಷ್ಠಾನಗೊಳಿಸಿದ್ದರೆ ದೇಶದಲ್ಲಿ ಜಾತಿಭೇದ, ಅಸಮಾನತೆ, ಗಂಡು-ಹೆಣ್ಣು ಎಂಬ ತಾರತಮ್ಯ ಇರುತ್ತಿರಲಿಲ್ಲ ಎಂದರು.ಬಸವಣ್ಣ ಕರ್ಮ ಸಿದ್ಧಾಂತಕ್ಕೆ ಪರ್ಯಾಯವಾಗಿ ಕಾಯಕ ಸಿದ್ಧಾಂತವನ್ನು ಅನುಷ್ಠಾನಗೊಳಿಸಿದ ವ್ಯಕ್ತಿಯಾಗಿದ್ದರು. ಮನುಷ್ಯನಿಗೆ ಬದುಕಲು ಕಾಯಕ ಮುಖ್ಯ, ಕಾಯಕದಿಂದ ಬಂದ ಆದಾಯವೇ ಪ್ರಸಾದಕ್ಕೆ ಮೂಲವಾಗಬೇಕು. ಹಾಗೆ ಪ್ರತಿಯೊಬ್ಬ ವ್ಯಕ್ತಿಯು ಕಾಯಕದಲ್ಲಿ ಕೈಲಾಸವನ್ನು ಕಾಣಬೇಕು ಎಂಬ ಸಂದೇಶವನ್ನು ಸಾರಿದ ಯುಗ ಪುರುಷ ಬಸವಣ್ಣ ಎಂದು ಹೇಳಿದರು.
ಶಿಕಾರಿಪುರ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಕೆ.ಎಚ್.ಪುಟ್ಟಪ್ಪ ಮಾತನಾಡಿ, 12ನೇ ಶತಮಾನ ಕರ್ನಾಟಕ ಸಾಂಸ್ಕೃತಿಕ ಇತಿಹಾಸದಲ್ಲಿ ಮಹತ್ವಪೂರ್ಣವಾದದ್ದು. ಸಾಂಸ್ಕೃತಿಕ ನಾಯಕ ಬಸವಣ್ಣನವರ ನೇತೃತ್ವದಲ್ಲಿ ಸಮಾನ ಧ್ಯೇಯವುಳ್ಳ ಶರಣರು ನಡೆಸಿದ ಸಮಾಲೋಚನೆ ಧಾರ್ಮಿಕ ಆಂದೋಲನ, ಮಾನವ ಸರ್ವಾಂಗೀನ ಅಭಿವೃದ್ಧಿಗೆ ಪೂರಕ. ದೃಷ್ಟಿಯಲ್ಲಿ ಮುನ್ನುಡಿ ಬರೆದ ಶ್ರೇಷ್ಠ ವ್ಯಕ್ತಿ ಬಸವಣ್ಣನವರಾಗಿದ್ದಾರೆ ಎಂದರು.ಬಸವಣ್ಣನವರು ಪ್ರತಿಪಾದಿಸಿದ ಮೌಲ್ಯಗಳು ಜನಸಾಮಾನ್ಯರ ಶಿಕ್ಷಣದ ಹಕ್ಕು. ಸ್ವಾತಂತ್ರ್ಯ, ಸಮಾನತೆಯನ್ನು ಸಾರಿದ ವ್ಯಕ್ತಿಯ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಜಯಂತಿಗಳು ಅರ್ಥಪೂರ್ಣವಾಗಲು ಸಾಧ್ಯ ಎಂದರು.ಭದ್ರಾವತಿಯ ಸರ್ಕಾರಿ ಹೊನ್ನಮ್ಮ ಕಾಲೇಜು ಉಪನ್ಯಾಸಕ ಬಿ.ಚೆನ್ನಯ್ಯ ಬಸವಣ್ಣನವರ ಆದರ್ಶ ಕುರಿತು ಉಪನ್ಯಾಸ ನೀಡಿದರು.