ಮಧ್ಯವರ್ತಿಯನ್ನು ಮಾತ್ರ ವಿರೋಧಿಸಿದ್ದ ಬಸವಣ್ಣ

| Published : Feb 06 2025, 12:17 AM IST

ಸಾರಾಂಶ

12 ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ಪ್ರಮುಖ ರೂವಾರಿಯಾದ ಬಸವಣ್ಣನವರು ದೇವರು, ದೇವಾಲಯ ಎರಡನ್ನು ವಿರೋಧಿಸಲಿಲ್ಲ. ಬದಲಾಗಿ ದೇವರು ಮತ್ತು ಭಕ್ತರ ನಡುವಿನ ಮಧ್ಯವರ್ತಿಯನ್ನು ಮಾತ್ರ ವಿರೋಧಿಸಿದ್ದರು ಎಂದು ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

12 ನೇ ಶತಮಾನದಲ್ಲಿ ಕಲ್ಯಾಣ ಕ್ರಾಂತಿ ಪ್ರಮುಖ ರೂವಾರಿಯಾದ ಬಸವಣ್ಣನವರು ದೇವರು, ದೇವಾಲಯ ಎರಡನ್ನು ವಿರೋಧಿಸಲಿಲ್ಲ. ಬದಲಾಗಿ ದೇವರು ಮತ್ತು ಭಕ್ತರ ನಡುವಿನ ಮಧ್ಯವರ್ತಿಯನ್ನು ಮಾತ್ರ ವಿರೋಧಿಸಿದ್ದರು ಎಂದು ಚಿತ್ರದುರ್ಗದ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದ್ದಾರೆ.

ತುಮಕೂರು ತಾಲೂಕು ಗೂಳೂರು ಹೋಬಳಿ ಕೌತಮಾರನಹಳ್ಳಿಯ ಶ್ರೀಹಟ್ಟಿ ಮಾರಮ್ಮ ದೇವಿ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶ್ರೀಹಟ್ಟಿ ಮಾರಮ್ಮ ದೇವಿಯ ಸ್ಥಿರಬಿಂಬ ಪ್ರಾಣ ಪ್ರತಿಷ್ಠಾಪನೆ ಹಾಗೂ ನೂತನ ದೇವಾಲಯ ಉದ್ಘಾಟನಾ ಮಹೋತ್ಸವದ ಸಾನಿಧ್ಯ ವಹಿಸಿ ಮಾತನಾಡಿದರು.

ದೇವರ ಹೆಸರಿನಲ್ಲಿ ಮೌಢ್ಯಗಳನ್ನು ಮುನ್ನೆಲೆಗೆ ತಂದು, ಅಸ್ಪೃಷ್ಯರನ್ನು ದೇವಾಲಯದ ಒಳಗೆ ಬರಲು ಅಡ್ಡಿ ಮಾಡಿದ ಹಿನ್ನೆಲೆಯಲ್ಲಿ ನಿನಗೆ ದೇವರನ್ನು ಹತ್ತಿರದಿಂದ ನೋಡಲು ಸಾಧ್ಯವಿಲ್ಲ ಎಂದಾದರೆ, ನಿನ್ನ ಅಂಗದ ಮೇಲೆ ಲಿಂಗಧರಿಸಿ ದೇವರನ್ನು ಕಾಣು ಎಂದು ಹೇಳಿದ್ದರೇ ಹೊರತು, ದೇವರು ದೇವಾಲಯವನ್ನು ಎಂದಿಗೂ ವಿರೋಧಿಸಲಿಲ್ಲ. ಆದರೆ ಕೆಲವರು ಶರಣ ಪರಂಪರೆಯಿಂದ ಮಠಗಳ ಸ್ವಾಮೀಜಿಗಳೇ ದೇವಾಲಯಕ್ಕೆ ಹೋಗಬಾರದು ಎಂಬಂತೆ ಮಾಡುತ್ತಿರುವುದು ಸರಿಯಲ್ಲ ಎಂದರು.

ಕಳೆದ 10-15 ವರ್ಷಗಳಿಗೆ ಹೋಲಿಕೆ ಮಾಡಿದರೆ ಸ್ವಾಮೀಜಿಗಳು ದಲಿತ ಕೇರಿಗಳಿಗೆ ಹೋದ ಸಂದರ್ಭದಲ್ಲಿ ಬೆರಳೆಣಿಕೆ ಯನ್ನು ಯುವಕರು ನಮ್ಮ ಜೊತೆ ಹೆಜ್ಜೆ ಹಾಕುತಿದ್ದರು, ಹೆಣ್ಣು ಮಕ್ಕಳು ಕಿಟಿಕಿಯಲ್ಲಿಯೋ, ಬಾಗಿಲಿನ ಬಳಿಯೋ ನೋಡಿ ಮನೆಯ ಒಳಗೆ ಉಳಿಯುತಿದ್ದರು, ಇಂದು ಕಾಲ ಬದಲಾಗಿದೆ, ನಮ್ಮ ಹೆಣ್ಣು ಮಕ್ಕಳು ಇಲ್ಲಿ ಕುಳಿತಿದ್ದಾರೆ. ಗಂಡು ಮಕ್ಕಳು ನಿಂತು ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಅಷ್ಟೊಂದು ಬದಲಾವಣೆ ನಮ್ಮಲ್ಲಿ ಬಂದಿದೆ.ಇದು ಸಂತೋಷದ ಸಂಗತಿ. ಗ್ರಾಮದ ಹಟ್ಟಿ ಮಾರಮ್ಮ ದೇವಾಲಯ ಕಟ್ಟಿ, ಉದ್ಘಾಟನೆ ಸಡಗರದಿಂದ ನಡೆದಿದೆ. ದೇವಾಲಯದ ಜೊತೆಗೆ, ಬದುಕನ್ನು ಕಟ್ಟಿಕೊಳ್ಳುವ ಕೆಲಸ ಆಗಬೇಕು ಎಂದರು.

ಶರಣ ಚಳವಳಿಗೂ ಮುನ್ನ ಊರಿನಲ್ಲಿ ಯಾವುದಾದರೂ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದರೆ ಅಲ್ಲಿಗೆ ದಲಿತರಿಗೆ ಪ್ರವೇಶ ಇರಲಿಲ್ಲ. ಆದರೆ ಅನುಭವ ಮಂಟಪದ ಕಾಲದಲ್ಲಿ ಕೊಂಚ ಬದಲಾವಣೆ ಸಾಧ್ಯವಾಯಿತು. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕಲ್ಪಿಸಿದ ನಂತರ ಇಂದು ಇಂತಹ ದೇವಾಲಯ ಕಟ್ಟಿ, ಪೂಜಿಸುವಂತಹ ವಾತಾವರಣ ಸೃಷ್ಟಿಯಾಗಿದೆ. ಇದೆಲ್ಲದರ ಹಿಂದಿನ ಶಕ್ತಿ ಡಾ.ಬಿ.ಆರ್.ಅಂಬೇಡ್ಕರ್. ಹಾಗಾಗಿ ಸಂವಿಧಾನ ಪಿತಾಮಹನಿಗೆ ದೇವರಿಗೆ ದೊಡ್ಡ ಸ್ಥಾನವನ್ನು ದಲಿತರು ನೀಡಬೇಕಾಗಿದೆ. ಇಂದು ವೇದಿಕೆಯಲ್ಲಿ ದಲಿತ ನಾಯಕರು ಕುಳಿತಿದ್ದರೆ ಅದಕ್ಕೆ ಬಾಬಾ ಸಾಹೇಬರು ಕಾರಣ ಎಂದರು.

ಜಿ.ಪಂ. ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಮಾತನಾಡಿ, ಧಾರ್ಮಿಕ ಮುಖಂಡರ ಮಾತಿಗೆ ಗೌರವ ನೀಡುವ ಅಗತ್ಯವಿದೆ. ಹೇಗೆ ಆದಿಚುಂಚನಗಿರಿ, ಕಾಗಿನೆಲೆ ಸ್ವಾಮೀಜಿಗಳ ಮಾತಿಗೆ ಆ ಸಮುದಾಯಗಳು ಗೌರವ ನೀಡುತ್ತವೆಯೋ, ಅದೇ ರೀತಿ ಮಾದಾರ ಚನ್ನಯ್ಯಮಠ, ಆದಿ ಜಾಂಭವ ಮಠದ ಸ್ವಾಮೀಜಿಗಳ ಮಾತನ್ನು ಒಪ್ಪಿ, ಅವರು ತೋರಿದ ದಾರಿಯಲ್ಲಿ ನಡೆಯಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಆದಿಜಾಂಭವ ಮಹಾ ಸಂಸ್ಥಾನ ಮಠದ ಷಡಕ್ಷರ ಮುನಿದೇಶಿಕೇಂದ್ರ ಸ್ವಾಮೀಜಿ, ಶ್ರೀಶನೇಶ್ವರ ಕ್ಷೇತ್ರ ಪಾಲನಹಳ್ಳಿ ಮಠದ ಡಾ.ಸಿದ್ದರಾಜು ಸ್ವಾಮೀಜಿ, ನಿವೃತ್ತ ಚೀಫ್‌ ಇಂಜಿನಿಯರ್ ಶಿವಕುಮಾರ್, ವೈಗೂಳೂರು ಶಿವಕುಮಾರ್, ಆಂಜನಪ್ಪ, ಕುಮಾರಣ್ಣ.. ರಮೇಶ್,ಕೋಡಿಯಾಲ ಮಹದೇವ್, ಬಂಡೆ ಕುಮಾರ್, ಪಾವಗಡ ಶ್ರೀರಾಮ್, ಸೋರೆಕುಂಟೆ ಯೋಗೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.