ಸಮ ಸಮಾಜಕ್ಕೆ ಶ್ರಮಿಸಿದ ಮಾನವತಾವಾದಿ ಬಸವಣ್ಣ: ತೇಗಲತಿಪ್ಪಿ

| Published : May 10 2024, 11:48 PM IST

ಸಾರಾಂಶ

ಕಲಬುರಗಿ ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕಸಾಪದಿಂದ ಹಮ್ಮಿಕೊಂಡಿದ್ದ ಬಸವ ಜಯಂತಿ ಆಚರಣೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿದರು.

ಕಲಬುರಗಿ: ವಚನಗಳ ಮೂಲಕ ಸಮಾಜ ಜಾಗೃತಿಗೊಳಿಸಿದ ಶರಣ ಶ್ರೇಷ್ಠ ಆದರ್ಶ ಗುರು ಬಸವಣ್ಣ ನವರಾಗಿದ್ದಾರೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದ ಅವರು, ಬಸವಣ್ಣ ನವರು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದರು. ಅವರ ತತ್ವ ಸಿದ್ಧಾಂತ ಸಾರ್ವಕಾಲಿಕ. ಅವರ ವಚನಗಳು ಇವತ್ತಿಗೂ ಪ್ರಸ್ತುತವಾಗಿವೆ. ಹೀಗಾಗಿ ವಚನಗಳಲ್ಲಿನ ತಿರುಳನ್ನು ಇಂದು ನಾವು ಅರ್ಥಮಾಡಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.

ಆರೋಗ್ಯ ಇಲಾಖೆಯ ಹಿರಿಯ ಮೇಲ್ವಿಚಾರಕ ಸುರೇಶ ದೊಡ್ಮನಿ ಮಾತನಾಡಿ, ಸಾಮಾಜಿಕ ತಾರತಮ್ಯ, ಜಾತೀಯತೆ ಹೋಗಲಾಡಿಸಿ, ಸಮ ಸಮಾಜದ ನಿರ್ಮಾಣ ಮಾಡುವ ಮೂಲಕ ಇಡೀ ಮನುಕುಲದ ಶ್ರೇಯಸ್ಸಿಗೆ ದುಡಿದ ಮಹಾನದ ಮಾನವತಾವಾದಿ ಬಸವಣ್ಣನವರು ಎಂದು ಹೇಳಿದರು.

ಹಿರಿಯ ಶರಣ ಸಾಹಿತಿ ಎಸ್.ಎಂ ಧುಲಂಗೆ, ಜಿಲ್ಲಾ ಕಸಾಪದ ರವೀಂದ್ರಕುಮಾರ ಭಂಟನಳ್ಳಿ, ಜಗದೀಶ ಮರಪಳ್ಳಿ, ಶಕುಂತಲಾ ಪಾಟೀಲ ಜಾವಳಿ, ರಜನಿ ಜಮಾದಾರ, ಸುರೇಖಾ ಜೇವರ್ಗಿ, ಸಂತೋಷ ಕುಡಳ್ಳಿ, ಡಾ. ರೆಹಮಾನ್ ಪಟೇಲ್, ಎಂ ಎನ್ ಸುಗಂಧಿ, ಉಮೇಶ ಕೋಟನೂರ, ಧರ್ಮರಾಜ ಜವಳಿ, ವಿಶ್ವನಾಥ ತೊಟ್ನಳ್ಳಿ, ಮಹೇಶ ಚಿಂತನಪಳ್ಳಿ, ಸಂಜೀವಕುಮಾರ ಡೊಂಗರಗಾಂವ, ಗುರುಬಸಪ್ಪ ಸಜ್ಜನಶೆಟ್ಟಿ, ಬಾಬುರಾವ ಪಾಟೀಲ ಚಿತ್ತಕೋಟಾ, ಮಹೇಶ ಜೇವರ್ಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.